Advertisement

ಟಿ20 ವಿಶ್ವಕಪ್‌: ಆಂಗ್ಲರೆದುರು ಲಾಗ ಹಾಕಿದ ಬಾಂಗ್ಲಾ

09:16 PM Oct 27, 2021 | Team Udayavani |

ಅಬುಧಾಬಿ: ಶಿಸ್ತುಬದ್ಧ ಆಟದ ಮೂಲಕ ಬಾಂಗ್ಲಾದೇಶಕ್ಕೆ 8 ವಿಕೆಟ್‌ಗಳಿಂದ ಹೊಡೆತವಿಕ್ಕಿದ ಇಂಗ್ಲೆಂಡ್‌, ಟಿ20 ವಿಶ್ವಕಪ್‌ ಸೂಪರ್‌-12 ಹಂತದಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ. ಸತತ ಎರಡು ಸೋಲನುಭವಿಸಿದ ಬಾಂಗ್ಲಾದ ಮುಂದಿನ ಹಾದಿ ಕಠಿಣಗೊಂಡಿದೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಬಾಂಗ್ಲಾದೇಶಕ್ಕೆ ಗಳಿಸಲು ಸಾಧ್ಯವಾದದ್ದು 20 ಓವರ್‌ಗಳಲ್ಲಿ 9ಕ್ಕೆ 124 ರನ್‌ ಮಾತ್ರ. ಇಂಗ್ಲೆಂಡ್‌ ಕೇವಲ 14.1 ಓವರ್‌ಗಳಲ್ಲಿ 2 ವಿಕೆಟಿಗೆ 126 ರನ್‌ ಹೊಡೆದು ಸಂಭ್ರಮಿಸಿತು. ಮೊದಲ ಪಂದ್ಯದಲ್ಲಿ ಮಾರ್ಗನ್‌ ಪಡೆ ವೆಸ್ಟ್‌ ಇಂಡೀಸನ್ನು 55 ರನ್ನಿಗೆ ಉರುಳಿಸಿ ಮೆರೆದಿತ್ತು. ಇನ್ನೊಂದೆಡೆ ಬಾಂಗ್ಲಾದೇಶ ಲಂಕೆಗೆ ಶರಣಾಗಿತ್ತು.

ಸಾಮಾನ್ಯ ಮೊತ್ತದ ಚೇಸಿಂಗ್‌ ವೇಳೆ ಜೇಸನ್‌ ರಾಯ್‌ ಸಿಡಿದು ನಿಂತರು. 38 ಎಸೆತಗಳಿಂದ 61 ರನ್‌ ಬಾರಿಸಿದರು. ಈ ಪಂದ್ಯಶ್ರೇಷ್ಠ ಆಟದಲ್ಲಿ 5 ಬೌಂಡರಿ, 3 ಸಿಕ್ಸರ್‌ ಒಳಗೊಂಡಿತ್ತು. ಜೋಸ್‌ ಬಟ್ಲರ್‌ 18 ರನ್‌ ಮಾಡಿದರೆ, ಡೇವಿಡ್‌ ಮಾಲನ್‌ 28 ರನ್‌ ಬಾರಿಸಿ ಅಜೇಯರಾಗಿ ಉಳಿದರು. ಈ ಜಯದೊಂದಿಗೆ ಇಂಗ್ಲೆಂಡ್‌ 4 ಅಂಕ ಹಾಗೂ +3.614 ರನ್‌ರೇಟ್‌ನೊಂದಿಗೆ ಗುಂಪಿನ ಅಗ್ರಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸಿತು.

ಬಾಂಗ್ಲಾದೇಶಕ್ಕೆ ಬ್ರೇಕ್‌: ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಬಾಂಗ್ಲಾದೇಶ ಸವಾಲಿನ ಮೊತ್ತ ಪೇರಿಸುವ ಯೋಜನೆಯಲ್ಲಿ ಸಂಪೂರ್ಣ ವಿಫ‌ಲವಾಯಿತು. ಆಂಗ್ಲರ ಘಾತಕ ಬೌಲಿಂಗ್‌ ದಾಳಿಗೆ ಸಿಲುಕಿ ರನ್ನಿಗಾಗಿ ಪರದಾಡಿತು. ಅಗ್ರ ಕ್ರಮಾಂಕದ ಮೂವರಿಂದ ಒಟ್ಟುಗೂಡಿದ್ದು ಬರೀ 18 ರನ್‌. ಆರಂಭಿಕರಾದ ಲಿಟನ್‌ ದಾಸ್‌ (9) ಮತ್ತು ಮೊಹಮ್ಮದ್‌ ನೈಮ್‌ (5) ಅವರನ್ನು ಸತತ ಎಸೆತಗಳಲ್ಲಿ ಕೆಡವಿದ ಮೊಯಿನ್‌ ಅಲಿ ಇಂಗ್ಲೆಂಡಿಗೆ ಮೇಲುಗೈ ಒದಗಿಸಿದರು. ಈ ಅವಳಿ ಆಘಾತದಿಂದ ಬಾಂಗ್ಲಾ ಚೇತರಿಸಿಕೊಳ್ಳಲೇ ಇಲ್ಲ.

ಇದನ್ನೂ ಓದಿ:ಟಿ20 ಶ್ರೇಯಾಂಕ: ಕೊಹ್ಲಿ, ರಾಹುಲ್‌ ಕುಸಿತ

Advertisement

ಮಧ್ಯಮ ಕ್ರಮಾಂಕದಲ್ಲಿ ಮುಶ್ಫಿಕರ್‌ ರಹೀಂ (29) ಮತ್ತು ನಾಯಕ ಮಹಮದುಲ್ಲ (19) 37 ರನ್‌ ಜತೆಯಾಟ ನಿಭಾಯಿಸಿದ್ದೇ ಬಾಂಗ್ಲಾದ ಉತ್ತಮ ಸಾಧನೆ ಎನಿಸಿತು. ಮೊಯಿನ್‌ ಅಲಿ 18 ರನ್ನಿತ್ತು 2 ವಿಕೆಟ್‌ ಕಿತ್ತರು. ಪೇಸರ್‌ ಕ್ರಿಸ್‌ ವೋಕ್ಸ್‌ 4 ಓವರ್‌ಗಳಲ್ಲಿ ಕೇವಲ 12 ರನ್‌ ನೀಡಿ ಅಮೋಘ ನಿಯಂತ್ರಣ ಸಾಧಿಸಿದರು. ಡೆತ್‌ ಓವರ್‌ಗಳಲ್ಲಿ 3 ವಿಕೆಟ್‌ ಉರುಳಿಸಿದ ಮಿಲ್ಸ್‌ ಇಂಗ್ಲೆಂಡಿನ ಯಶಸ್ವಿ ಬೌಲರ್‌ ಎನಿಸಿದರು. ಅರೆಕಾಲಿಕ ಸ್ಪಿನ್ನರ್‌ ಲಿವಿಂಗ್‌ಸ್ಟೋನ್‌ ಕೂಡ 2 ವಿಕೆಟ್‌ ಕಿತ್ತು ಬಾಂಗ್ಲಾ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದರು. ಆದರೆ ವೆಸ್ಟ್‌ ಇಂಡೀಸ್‌ ವಿರುದ್ಧ 2 ರನ್ನಿಗೆ 4 ವಿಕೆಟ್‌ ಕೆಡವಿದ ಆದಿಲ್‌ ರಶೀದ್‌ ಇಲ್ಲಿ ವಿಕೆಟ್‌ ಲೆಸ್‌ ಆಗಬೇಕಾಯಿತು. ಅವರು 35 ರನ್‌ ನೀಡಿ ದುಬಾರಿಯಾದರು.

ಸಂಕ್ಷಿಪ್ತ ಸ್ಕೋರ್‌: ಬಾಂಗ್ಲಾ 20 ಓವರ್‌, 124/9 (ಮುಶ್ಫಿಕರ್‌ ರಹೀಂ 29, ಟೈಮಲ್‌ ಮಿಲ್ಸ್‌ 27ಕ್ಕೆ 3, ಲಿಯಮ್‌ ಲಿವಿಂಗ್‌ಸ್ಟೋನ್‌ 15ಕ್ಕೆ 2). ಇಂಗ್ಲೆಂಡ್‌ 14.1 ಓವರ್‌, 126/2 (ಜೇಸನ್‌ ರಾಯ್‌ 61, ಡೇವಿಡ್‌ ಮಾಲನ್‌ 28, ನಾಸಮ್‌ ಅಹ್ಮದ್‌ 26ಕ್ಕೆ 1).

Advertisement

Udayavani is now on Telegram. Click here to join our channel and stay updated with the latest news.

Next