ಢಾಕಾದಲ್ಲಿ ನಡೆದ 2014ರ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಏಶ್ಯದ ಎರಡು ಪ್ರಬಲ ತಂಡಗಳ ಹೋರಾಟಕ್ಕೆ ಸಾಕ್ಷಿಯಾಯಿತು. ಇಲ್ಲಿ ಭಾರತ ಮತ್ತು ಶ್ರೀಲಂಕಾ ಪ್ರಶಸ್ತಿ ಕಾಳಗದಲ್ಲಿ ಎದುರಾದವು. ಎರಡನೇ ಸಲ ಫೈನಲ್‌ಗೆ ಆಗಮಿಸಿದ ಭಾರತ ಇಲ್ಲಿ ಎರಡನೇ ಸಲ ಪ್ರಶಸ್ತಿ ಎತ್ತಲು ವಿಫಲವಾಯಿತು. ಢಾಕಾ ಮೇಲಾಟದಲ್ಲಿ ಲಂಕೆಗೆ 6 ವಿಕೆಟ್‌ಗಳಿಂದ ಶರಣಾಯಿತು. ಶ್ರೀಲಂಕಾ ಮೊದಲ ಸಲ ಚಾಂಪಿಯನ್ ಆಗಿ ಮೂಡಿಬಂತು.
ಸೂಪರ್-10ರ ಮುಖ್ಯಸುತ್ತಿನಲ್ಲಿ ಭಾರತ 2ನೇ ಗುಂಪಿನಲ್ಲಿ ಸ್ಥಾನ ಪಡೆದಿತ್ತು. ಆಡಿದ ನಾಲ್ಕೂ ಪಂದ್ಯಗಳನ್ನು ಗೆದ್ದು ಸೆಮಿ ಫೈನಲ್‌ಗೆ ನೆಗೆಯಿತು. ಈ ಹಂತದಲ್ಲಿ ವೆಸ್ಟ್ ಇಂಡೀಸ್, ಆಸ್ಟ್ರೇಲಿಯ, ಪಾಕಿಸ್ಥಾನ, ಬಾಂಗ್ಲಾದೇಶ ವಿರುದ್ಧ ಭಾರತ ಗೆಲುವು ಸಾಧಿಸಿತು. ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಫೈನಲ್‌ಗೆ ನೆಗೆಯಿತು.
ಸೆಮಿಫೈನಲ್‌ನಲ್ಲಿ ವಿಂಡೀಸನ್ನು ಸೋಲಿಸಿದ ಶ್ರೀಲಂಕಾ, ದ.ಆಫ್ರಿಕಾವನ್ನು ಮಣಿಸಿದ ಭಾರತ ಫೈನಲ್‌ಗೆ ಏರಿದವು. ಅತ್ಯಂತ ನಿಧಾನಗತಿಯಲ್ಲಿ ವರ್ತಿಸಿದ ಈ ಅಂಕಣದಲ್ಲಿ ಭಾರತದ ಬ್ಯಾಟಿಂಗ್ ಪೂರ್ತಿಯಾಗಿ ಕೈಕೊಟ್ಟಿತು. 4 ವಿಕೆಟ್‌ಗಳಿಂದ ಕೇವಲ 130 ರನ್ ಗಳಿಸಿತು. ಲಂಕಾ ಕೂಡ 4 ವಿಕೆಟ್ ಕಳೆದುಕೊಂಡೇ ಗುರಿ ಮುಟ್ಟಿತು.
ಕೊಹ್ಲಿ ಅಂದು ಪ್ರಚಂಡ ಫಾರ್ಮ್ನಲ್ಲಿದ್ದರು. ಸೆಮಿಫೈನಲ್ ಹಾಗೂ ಫೈನಲ್ ಮುಖಾಮುಖಿಗಳೆರಡರಲ್ಲೂ 70 ಪ್ಲಸ್ ನ್ ಬಾರಿಸಿ ಮಿಂಚಿದರು.
ಸಂಕ್ಷಿಪ್ತ ಸ್ಕೋರ್: ಭಾರತ – 4 ವಿಕೆಟಿಗೆ 130 (ವಿರಾಟ್ ಕೊಹ್ಲಿ 77, ರಂಗನ ಹೆರಾತ್ 23ಕ್ಕೆ 1). ಲಂಕಾ-17.5 ಓವರ್‌ಗಳಲ್ಲಿ 4 ವಿಕೆಟಿಗೆ 134 (ಸಂಗಕ್ಕರ 52, ರೈನಾ 24ಕ್ಕೆ 1).
16 ತಂಡಗಳ ಸಮರ :
ಟಿ20 ವಿಶ್ವಕಪ್ ಇತಿಹಾಸದಲ್ಲೇ ಮೊದಲ ಬಾರಿಗೆ 16 ತಂಡಗಳು ಪಾಲ್ಗೊಂಡಿದ್ದವು. ಇದರಲ್ಲಿ ಪೂರ್ಣಾವಧಿ ಸದಸ್ಯತ್ವ ಹೊಂದಿದ 10 ರಾಷ್ಟ್ರಗಳು ನೇರ ಅರ್ಹತೆ ಪಡೆದಿದ್ದವು. ಇನ್ನು ಆರು ತಂಡಗಳು 2013ರಲ್ಲಿ ನಡೆದ ಅರ್ಹತಾ ಸುತ್ತಿನ ಮೂಲಕ ಆಯ್ಕೆಯಾಗಿದ್ದವು. ಆರಂಭಿಕ ಹಂತದಲ್ಲಿ 8 ತಂಡಗಳು ಸೆಣಸಿದವು. ಇಲ್ಲಿಂದ ಎರಡು ತಂಡಗಳು ಸೂಪರ್-10ರ ಮುಖ್ಯಸುತ್ತಿಗೆ ಅರ್ಹತೆ ಪಡೆದವು.