ಟರೂಬ (ಟ್ರಿನಿಡಾಡ್): ಆಲ್‌ರೌಂಡ್ ಆಟದ ಪ್ರದರ್ಶನ ನೀಡಿದ ವೆಸ್ಟ್‌ಇಂಡೀಸ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟಿ20 ಪಂದ್ಯವನ್ನು 30 ರನ್ನುಗಳಿಂದ ಗೆದ್ದುಕೊಂಡಿದೆ. ಈ ಗೆಲುವಿನ ಮೂಲಕ 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿ ಸರಣಿ ತನ್ನದಾಗಿಸಿಕೊಂಡಿದೆ. ಸರಣಿಯ ಮೂರನೇ ಪಂದ್ಯ ಮಂಗಳವಾರ ನಡೆಯಲಿದೆ.
ಈ ಪಂದ್ಯದಲ್ಲಿ ಭರ್ಜರಿಯಾಗಿ ಆಡಿದ ವೆಸ್ಟ್‌ಇಂಡೀಸ್ 13 ಸಿಕ್ಸರ್ ಬಾರಿಸಿ ಸಂಭ್ರಮಿಸಿದೆ. ಶೈ ಹೋಪ್, ನಾಯಕ ರೋವ¾ನ್ ಪೊವೆಲ್ ಅವರ ಅಮೋಘ ಆಟದಿಂದಾಗಿ ತಂಡವು ಆರು ವಿಕೆಟಿಗೆ 179 ರನ್ನುಗಳ ದೊಡ್ಡ ಮೊತ್ತ ಪೇರಿಸಿದೆ. ಒಂದು ಹಂತದಲ್ಲಿ ತಂಡ 14 ಓವರ್‌ಗಳ ಮುಕ್ತಾಯಕ್ಕೆ 4 ವಿಕೆಟಿಗೆ 111 ರನ್ ಗಳಿಸಿತ್ತು. ಆಬಳಿಕ ಹೋಪ್ ಮತ್ತು ಪೊವೆಲ್ ಸ್ಫೋಟಕವಾಗಿ ಆಡಿದರು. ಹೋಪ್ 22 ಎಸೆತಗಳಿಂದ 41 ಮತ್ತು ಪೊವೆಲ್ 22 ಎಸೆತಗಳಿಂದ 35 ರನ್ ಗಳಿಸಿ ತಂಡದ ಉತ್ತಮ ಮೊತ್ತಕ್ಕೆ ಕಾರಣರಾದರು.
ಗೆಲ್ಲಲು ಕಠಿನ ಗುರಿ ಪಡೆದ ದಕ್ಷಿಣ ಆಫ್ರಿಕಾವು ಉತ್ತಮ ಆರಂಭ ಪಡೆದರೂ ಅಂತಿಮವಾಗಿ ವಿಂಡೀಸ್ ದಾಳಿಗೆ ಕುಸಿದು 19.4 ಓವರ್‌ಗಳಲ್ಲಿ 149 ರನ್ನಿಗೆ ಆಲೌಟಾಗಿ ಶರಣಾಯಿತು. ಆರಂಭದ ನಾಲ್ಕು ಓವರ್‌ಗಳಲ್ಲಿ ತಂಡ ವಿಕೆಟ್ ನಷ್ಟವಿಲ್ಲದೇ 57 ರನ್ ಗಳಿಸಿತ್ತು. ಆದರೆ ಆಬಳಿಕ ಕುಸಿದ ತಂಡ 138 ರನ್ ತಲಪುವಷ್ಟರಲ್ಲಿ ಆರು ವಿಕೆಟ್ ಕಳೆದುಕೊಂಡು ಒದ್ದಾಡುತ್ತಿತ್ತು. ಅಂತಿಮ 4 ಓವರ್‌ಗಳಲ್ಲಿ 42 ರನ್ ಗಳಿಸುವ ಸವಾಲನ್ನು ದಕ್ಷಿಣ ಆಫ್ರಿಕಾ ತಂಡವು ಪಡೆದಿತ್ತು.
ಆರಂಭಿಕ ಆಟಗಾರ ರೀಜಾ ಹೆಂಡ್ರಿಕ್ಸ್ 18 ಎಸೆತಗಳಿಂದ 44 ರನ್ ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಅವರು ರೊಮಾರಿಯೊ ಶೆಫರ್ಡ್ ದಾಳಿಗೆ ಕ್ಲೀನ್‌ಬೌಲ್ಡ್ ಆಗಿದ್ದರು. 15 ರನ್ನಿಗೆ 3 ವಿಕೆಟ್ ಕಿತ್ತ ಶೆಫರ್ಡ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಶಮರ್ ಜೋಸೆಫ್ ಕೂಡ 31 ರನ್ನಿಗೆ 3 ವಿಕೆಟ್ ಪಡೆದಿದ್ದರು.
ಸಂಕ್ಷಿಪ್ತ ಸ್ಕೋರು: ವೆಸ್ಟ್‌ಇಂಡೀಸ್ ಆರು ವಿಕೆಟಿಗೆ 179 (ಶೈ ಹೋಪ್ 41, ರೋವ¾ನ್ ಪೊವೆಲ್ 35, ಲಿಜಾದ್ ವಿಲಿಯಮ್ಸ್ 36ಕ್ಕೆ 3); ದಕ್ಷಿಣ ಆಫ್ರಿಕಾ 19.4 ಓವರ್‌ಗಳಲ್ಲಿ 149 (ರೀಜಾ ಹೆಂಡ್ರಿಕ್ಸ್ 44, ರೊಮಾರಿಯೊ ಶೆಫರ್ಡ್ 15ಕ್ಕೆ 3, ಶಮರ್ ಜೋಸೆಫ್ 31ಕ್ಕೆ 3). ಪಂದ್ಯಶ್ರೇಷ್ಠ: ರೊಮಾರಿಯೊ ಶೆಫರ್ಡ್