Advertisement
ಇದು ಸೋಲಿಲ್ಲದ ಸರದಾರರ ಸೆಣಸಾಟ. ಟಿ20 ವಿಶ್ವಕಪ್ ಕೂಟವೊಂದರಲ್ಲಿ ಸೋಲನ್ನೇ ಕಾಣದ ಎರಡು ತಂಡಗಳು ಫೈನಲ್‌ನಲ್ಲಿ ಮುಖಾಮುಖಿ ಆಗುತ್ತಿರುವ ಅಪರೂಪದ ಸಂದರ್ಭ ಇದಾಗಿದೆ. ಹೀಗಾಗಿ ಒಂದು ತಂಡದ ಅಜೇಯ ಅಭಿಯಾನ ಮುಂದುವರಿಯಲಿದೆ, ಒಂದು ತಂಡ ಸೋಲನ್ನು ಹೊತ್ತುಕೊಳ್ಳಲೇಬೇಕಿದೆ.
ದಕ್ಷಿಣ ಆಫ್ರಿಕಾ 1998ರಷ್ಟು ಹಿಂದೊಮ್ಮೆ ಚಾಂಪಿಯನ್ಸ್ ಟ್ರೋಫಿ ಜಯಿಸಿತ್ತು. ಆಗ ಇದಕ್ಕೆ ಐಸಿಸಿ ನಾಕೌಟ್ ಟ್ರೋಫಿ ಎಂಬ ಹೆಸರಿತ್ತು. ಉಳಿದಂತೆ ದಕ್ಷಿಣ ಆಫ್ರಿಕಾ ಚೋಕರ್ ಎಂದೇ ಗುರುತಿಸಲ್ಪಟುವ ತಂಡ. 1992ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪುನರ್ ಪ್ರವೇಶ ಪಡೆದಂದಿನಿಂದ ಅದು ಯಾವುದೇ ವಿಶ್ವಕಪ್ ಗೆದ್ದಿಲ್ಲ. ಒಂದಿಲ್ಲೊಂದು ವಿಚಿತ್ರ ಕಾರಣ, ಅನಿರೀಕ್ಷಿತ ಸನ್ನಿವೇಶ ದಕ್ಷಿಣ ಆಫ್ರಿಕಾವನ್ನು ಸೆಮಿಫೈನಲ್ ಗಡಿಯಲ್ಲೇ ಹಿಡಿದು ನಿಲ್ಲಿಸುತ್ತ ಬಂದಿದೆ. ಹೀಗಾಗಿ ಫೈನಲ್ ಎಂಬುದು ಇವರ ಪಾಲಿಗೆ ಸಂಪೂರ್ಣ ಹೊಸತು. ಭಾರತಕ್ಕೂ ಕಪ್ ಮರೀಚಿಕೆ
ಭಾರತವನ್ನೂ ಒಂದು ರೀತಿಯಲ್ಲಿ ಚೋಕರ್ ಎಂದೇ ಕರೆಯಬೇಕಿದೆ. ಟೀಮ್ ಇಂಡಿಯಾ ಕಳೆದೊಂದು ದಶಕದಿಂದೀಚೆ ಯಾವುದೇ ಐಸಿಸಿ ಆಯೋಜಿತ ಕೂಟಗಳಲ್ಲಿ ಚಾಂಪಿಯನ್ ಆಗಿಲ್ಲ. 2023ರ ಏಕದಿನ ವಿಶ್ವಕಪ್ ಗೆಲ್ಲುವ ಸುವರ್ಣಾವಕಾಶ ಇತ್ತಾದರೂ ಇದು ಕೂಡ ಸಾಕಾರಗೊಳ್ಳಲಿಲ್ಲ. ಅಂದು ಕೂಡ ಭಾರತ ಸೋಲನ್ನು ಕಾಣದೆ ಫೈನಲ್ ಪ್ರವೇಶಿಸಿತ್ತು. ತವರಿನ ಫೈನಲ್‌ನಲ್ಲೇ ಆಸ್ಟ್ರೇಲಿಯಕ್ಕೆ ಶರಣಾಗಿ ನಿರಾಸೆ ಮೂಡಿಸಿತ್ತು. ಅಂದು ಕೈತಪ್ಪಿದ ವಿಶ್ವಕಪ್ ಶನಿವಾರ ರಾತ್ರಿ ಭಾರತಕ್ಕೆ ಒಲಿಯಲಿ ಎಂಬುದು ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ಹಾರೈಕೆ.
Related Articles
ತಂಡ ಎಷ್ಟೇ ಅಮೋಘ ಪ್ರದರ್ಶನ ನೀಡಿದರೂ ನಾಯಕರ ಅದೃಷ್ಟ ಕೂಡ ಚಾಂಪಿಯನ್ ನಿರ್ಧರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ರೋಹಿತ್ ಶರ್ಮ ಅವರ ನಸೀಬು ಈ ಸಲವಾದರೂ ಟೀಮ್ ಇಂಡಿಯಾವನ್ನು ಮೆರೆಸುವಂತಿರಲಿ ಎಂದು ಪ್ರಾರ್ಥಿಸುವುದರಲ್ಲಿ ತಪ್ಪೇನೂ ಇಲ್ಲ. ಇದು ರೋಹಿತ್ ಪಾಲಿಗೆ ವಿಶ್ವಕಪ್ ಫೈನಲ್‌ನಲ್ಲಿ ಭಾರತವನ್ನು ಮುನ್ನಡೆಸುವ ಕೊನೆಯ ಅವಕಾಶ. ಇದು ಸ್ಮರಣೀಯವಾಗಬೇಕಿದೆ.
Advertisement
ಹಾಗೆಯೇ ರಾಹುಲ್ ದ್ರಾವಿಡ್ ಕೂಡ ಕೊನೆಯ ಸಲ ಟೀಮ್ ಇಂಡಿಯಾಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ಅವರ ಖಾತೆಯಲ್ಲೂ ಐಸಿಸಿಯ ಯಾವುದೇ ಟ್ರೋಫಿ ಇಲ್ಲ. ಅಂದಿನ ಈ ಬ್ಯಾಟಿಂಗ್ ಕಲಾಕಾರನಿಗೂ ದೊಡ್ಡದೊಂದು ಉಡುಗೊರೆ ಲಭಿಸಬೇಕಿದೆ.
ಐಡನ್ ಮಾರ್ಕ್‌ರಮ್ ಲಕ್ಕಿ ಎಂಬುದು ಈಗಾಗಲೇ ಸಾಬೀತಾಗಿದೆ. ಏಕೆಂದರೆ ಅವರು ದಕ್ಷಿಣ ಆಫ್ರಿಕಾವನ್ನು ಮೊದಲ ಸಲ ಫೈನಲ್‌ಗೆ ಕೊಂಡೊಯ್ದಿದ್ದಾರೆ. ಅಷ್ಟೇ ಅಲ್ಲ, 2014ರ ಅಂಡರ್-19 ವಿಶ್ವಕಪ್ ಪಂದ್ಯಾವಳಿಯಲ್ಲಿ ದಕ್ಷಿಣ ಆಫ್ರಿಕಾ ಮಾರ್ಕ್‌ರಮ್ ನಾಯಕತ್ವದಲ್ಲೇ ಚಾಂಪಿಯನ್ ಆಗಿತ್ತು. ಇದೀಗ ಸೀನಿಯರ್ ಮಟ್ಟದಲ್ಲಿ ಇವರ ಲಕ್ ಹೇಗಿದೆ ಎಂಬುದನ್ನು ಅರಿಯಬೇಕಿದೆ.
ಭಾರತಕ್ಕೆ 3ನೇ ಫೈನಲ್ಭಾರತಕ್ಕಿದು 3ನೇ ಟಿ20 ವಿಶ್ವಕಪ್ ಫೈನಲ್. ಪಾಕಿಸ್ಥಾನವನ್ನು 5 ರನ್ನುಗಳಿಂದ ಸೋಲಿಸಿ 2007ರ ಚೊಚ್ಚಲ ವಿಶ್ವಕಪ್ ಜಯಿಸಿದ ಧೋನಿ ಪಡೆ, 2014ರ ಢಾಕಾ ಫೈನಲ್‌ನಲ್ಲಿ ಲಂಕೆಗೆ ಶರಣಾಗಿತ್ತು.
ವಿರಾಟ್ ಕೊಹ್ಲಿ ಅವರ ರನ್ ಬರಗಾಲ, ಶಿವಂ ದುಬೆ ಅವರ ವೈಫಲ್ಯ ಭಾರತದ ಪಾಲಿನ ಚಿಂತೆಯ ಸಂಗತಿಯಾಗಿದೆ. ಇದು ಫೈನಲ್‌ನಂಥ ಹೈ ವೋಲ್ಟೆàಜ್ ಪಂದ್ಯದಲ್ಲಿ ಮರುಕಳಿಸಿದರೆ ಅಪಾಯ ತಪ್ಪಿದ್ದಲ್ಲ. ದುಬೆ ಬದಲು ಸಂಜು ಸ್ಯಾಮ್ಸನ್ ಅಥವಾ ಯಶಸ್ವಿ ಜೈಸ್ವಾಲ್ ಅವರನ್ನು ಆಡಿಸುವ ಬಗ್ಗೆ ಯೋಚಿಸಬಹುದಾದರೂ ಇವರಿಗೆ ಈ ತನಕ ಒಂದೇ ಒಂದು ಅವಕಾಶ ನೀಡದಿದ್ದುದು ಮೈನಸ್ ಪಾಯಿಂಟ್ ಆಗಿ ಪರಿಣಮಿಸೀತು. ಭಾರತದ ಬೌಲಿಂಗ್ ಸ್ಪಿನ್ ವಿಭಾಗವನ್ನು ನೆಚ್ಚಿ ಕೊಂಡಿದೆ. ಕುಲದೀಪ್, ಅಕ್ಷರ್, ಜಡೇಜ ಅವರು ಹರಿಣಗಳನ್ನು ಕಟ್ಟಿಹಾಕಿಯಾರೆಂಬ ನಂಬಿಕೆ ಇದೆ. ವೇಗಕ್ಕೆ ಬುಮ್ರಾ, ಅರ್ಷದೀಪ್ ಸಾರಥ್ಯವಿದೆ. ಸಮತೋಲಿತ ತಂಡ
ದಕ್ಷಿಣ ಆಫ್ರಿಕಾ ಅತ್ಯಂತ ಸಮತೋಲಿತ ತಂಡ. ಬ್ಯಾಟಿಂಗ್ ಲೈನ್‌ಅಪ್ ಉತ್ತಮವಿದೆ. ಫಾಸ್ಟ್ ಹಾಗೂ ಸ್ಪಿನ್ ವಿಭಾಗಗಳೆರಡರಲ್ಲೂ ರಬಾಡ, ಜಾನ್ಸೆನ್, ನೋರ್ಜೆ, ಶಮಿÕ, ಮಹಾರಾಜ್ ಅವರಂಥ ಅನುಭವಿ ಬೌಲರ್ ಇದ್ದಾರೆ. ಇಲ್ಲಿ ಒಂದು ವಿಷಯವನ್ನು ಗಮನಿಸಬೇಕು. ದಕ್ಷಿಣ ಆಫ್ರಿಕಾ ಸೆಮಿಫೈನಲ್ ಒಂದನ್ನು ಬಿಟ್ಟು ಉಳಿ ದೆಲ್ಲ ಪಂದ್ಯಗಳನ್ನೂ ಬಹಳ ಪ್ರಯಾಸದಲ್ಲೇ ಗೆದ್ದಿದೆ. ನೇಪಾಲದಂಥ ಕ್ರಿಕೆಟ್ ಶಿಶು ವಿರುದ್ಧ ಗೆಲುವಿನ ಅಂತರ ಬರೀ ಒಂದು ರನ್ ಆಗಿತ್ತು. ಫೈನಲ್ ಎಂಬುದು ಡಿಫರೆಂಟ್ ಬಾಲ್ ಗೇಮ್ ಎಂಬುದು ಮೊದಲ ಸಲ ಹರಿಣಗಳ ಅರಿವಿಗೆ ಬರಬೇಕಿದೆ. ವಾಶೌಟ್ ಆದರೆ ಜಂಟಿ ಚಾಂಪಿಯನ್ಸ್ !
ವೆಸ್ಟ್ ಇಂಡೀಸ್-ಅಮೆರಿಕ ಆತಿಥ್ಯದ ಈ ವಿಶ್ವಕಪ್‌ನಲ್ಲಿ ಮಳೆಯ ಪಾಲು ದೊಡ್ಡದಿತ್ತು. ಇದರಿಂದ ಕೆಲವು ಲೆಕ್ಕಾಚಾರಗಳು ತಲೆಕೆಳಗಾದದ್ದು ಸುಳ್ಳಲ್ಲ. ಶನಿವಾರದ ಫೈನಲ್ ಪಂದ್ಯಕ್ಕೂ ಸ್ವಲ್ಪ ಮಟ್ಟಿಗೆ ಮಳೆಯ ಭೀತಿ ಇದೆ. ಆದರೆ ರವಿವಾರ ಮೀಸಲು ದಿನ ಇರುವುದರಿಂದ ಆತಂಕ ಇಲ್ಲ. ನಿಗದಿತ ದಿನ ಕನಿಷ್ಠ 10 ಓವರ್‌ಗಳ ಆಟ ನಡೆಯದೇ ಹೋದರೆ ಪಂದ್ಯ ಮೀಸಲು ದಿನಕ್ಕೆ ಕಾಲಿಡುತ್ತದೆ. ಒಂದು ವೇಳೆ ಮೀಸಲು ದಿನದಂದೂ ಕನಿಷ್ಠ 10 ಓವರ್‌ಗಳ ಆಟ ಸಾಧ್ಯವಾಗದೇ ಹೋದರೆ, ಪಂದ್ಯ ರದ್ದುಗೊಳ್ಳಲಿದೆ. ಆಗ ಎರಡೂ ತಂಡಗಳನ್ನು ಜಂಟಿ ಚಾಂಪಿಯನ್ಸ್ ಎಂದು ಘೋಷಿಸಲಾಗುವುದು. ಭಾರತ: ಫೈನಲ್‌ಗೆ ಸಾಗಿ ಬಂದ ಹಾದಿ
ಎದುರಾಳಿ ಫಲಿತಾಂಶ
ಐರ್ಲೆಂಡ್ ಭಾರತಕ್ಕೆ 8 ವಿಕೆಟ್ ಜಯ
ಪಾಕಿಸ್ಥಾನ ಭಾರತಕ್ಕೆ 6 ರನ್ ಜಯ
ಅಮೆರಿಕ ಭಾರತಕ್ಕೆ 7 ವಿಕೆಟ್ ಜಯ
ಕೆನಡಾ ರದ್ದು
ಅಫ್ಘಾನಿಸ್ಥಾನ ಭಾರತಕ್ಕೆ 47 ರನ್ ಜಯ
ಬಾಂಗ್ಲಾದೇಶ ಭಾರತಕ್ಕೆ 50 ರನ್ ಜಯ
ಆಸ್ಟ್ರೇಲಿಯ ಭಾರತಕ್ಕೆ 24 ರನ್ ಜಯ
ಇಂಗ್ಲೆಂಡ್ ಭಾರತಕ್ಕೆ 68 ರನ್ ಜಯ ದಕ್ಷಿಣ ಆಫ್ರಿಕಾ: ಫೈನಲ್‌ಗೆ ಸಾಗಿ ಬಂದ ಹಾದಿ
ಎದುರಾಳಿ ಫಲಿತಾಂಶ
ಶ್ರೀಲಂಕಾ ದ. ಆಫ್ರಿಕಾಕ್ಕೆ 6 ವಿಕೆಟ್ ಜಯ
ನೆದರ್ಲೆಂಡ್ಸ್ ದ. ಆಫ್ರಿಕಾಕ್ಕೆ 4 ವಿಕೆಟ್ ಜಯ
ಬಾಂಗ್ಲಾದೇಶ ದ. ಆಫ್ರಿಕಾಕ್ಕೆ 4 ರನ್ ಜಯ
ನೇಪಾಲ ದ. ಆಫ್ರಿಕಾಕ್ಕೆ 1 ರನ್ ಜಯ
ಅಮೆರಿಕ ದ. ಆಫ್ರಿಕಾಕ್ಕೆ 18 ರನ್ ಜಯ
ಇಂಗ್ಲೆಂಡ್ ದ. ಆಫ್ರಿಕಾಕ್ಕೆ 7 ರನ್ ಜಯ
ವೆಸ್ಟ್ ಇಂಡೀಸ್ ದ. ಆಫ್ರಿಕಾಕ್ಕೆ 3 ವಿಕೆಟ್ ಜಯ
ಅಫ್ಘಾನಿಸ್ಥಾನ ದ. ಆಫ್ರಿಕಾಕ್ಕೆ 9 ವಿಕೆಟ್ ಜಯ ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜ, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ. ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್, ರೀಝ ಹೆಂಡ್ರಿಕ್ಸ್, ಐಡನ್ ಮಾರ್ಕ್‌ರಮ್ (ನಾಯಕ), ಡೇವಿಡ್ ಮಿಲ್ಲರ್, ಹೆನ್ರಿಚ್ ಕ್ಲಾಸೆನ್, ಟ್ರಿಸ್ಟನ್ ಸ್ಟಬ್ಸ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಾಗಿಸೊ ರಬಾಡ, ಆ್ಯನ್ರಿಚ್ ನೋರ್ಜೆ, ಓಟ್ನೀಲ್ ಬಾರ್ಟ್‌ಮನ್. ಫೈನಲ್ ಅಂಪಾಯರ್
ಅಂಪಾಯರ್: ಕ್ರಿಸ್ ಗಫಾನಿ, ರಿಚರ್ಡ್ ಇಲ್ಲಿಂಗ್‌ವರ್ತ್
ರೆಫ್ರಿ: ರಿಚೀ ರಿಚರ್ಡ್‌ಸನ್
ಥರ್ಡ್ ಅಂಪಾಯರ್: ರಿಚರ್ಡ್ ಕೆಟಲ್‌ಬರೊ
ಫೋರ್ತ್ ಅಂಪಾಯರ್: ರಾಡ್ ಟ್ಯುಕರ್ ಭಾರತ – ದಕ್ಷಿಣ ಆಫ್ರಿಕಾ ಟಿ20 ವಿಶ್ವಕಪ್ ಮುಖಾಮುಖಿ
ವರ್ಷ ಸ್ಥಳ ಫಲಿತಾಂಶ
2007 ಡರ್ಬನ್ ಭಾರತಕ್ಕೆ 37 ರನ್ ಜಯ
2009 ನಾಟಿಂಗ್‌ಹ್ಯಾಮ್ ದ.ಆಫ್ರಿಕಾಕ್ಕೆ 12 ರನ್ ಜಯ
2010 ಗ್ರಾಸ್ ಐಲೆಟ್ ಭಾರತಕ್ಕೆ 14 ರನ್ ಜಯ
2012 ಕೊಲಂಬೊ ಭಾರತಕ್ಕೆ 1 ರನ್ ಜಯ
2014 ಮಿರ್ಪುರ್ ಭಾರತಕ್ಕೆ 6 ವಿಕೆಟ್ ಜಯ
2022 ಪರ್ತ್ ದ.ಆಫ್ರಿಕಾಕ್ಕೆ 5 ವಿಕೆಟ್ ಜಯ ಬ್ರಿಜ್‌ಟೌನ್: ಯಾರಿಗೆ ಕಟ್ಟಲಿದೆ ಗೆಲುವಿನ ಸೇತುವೆ?
ಬ್ರಿಜ್‌ಟೌನ್‌ನ “ಕೆನ್ನಿಂಗ್ಸ್‌ಟನ್ ಓವಲ್’ ಯಾರಿಗೆ ಗೆಲುವಿನ ಸೇತುವೆ ಕಟ್ಟಲಿದೆ… ಭಾರತಕ್ಕೋ? ದಕ್ಷಿಣ ಆಫ್ರಿಕಾಕ್ಕೋ? ಇದು ಬ್ರಿಜ್‌ಟೌನ್‌ನಲ್ಲಿ ನಡೆಯುತ್ತಿರುವ 3ನೇ ವಿಶ್ವಕಪ್ ಫೈನಲ್. ಅರ್ಥಾತ್, ವೆಸ್ಟ್ ಇಂಡೀಸ್ ವಿಶ್ವಕಪ್ ಆತಿಥ್ಯ ವಹಿಸಿದಾಗಲೆಲ್ಲ ಪ್ರಶಸ್ತಿ ಸಮರದ ನಂಟು ಬ್ರಿಜ್‌ಟೌನ್‌ಗೆà ಮೀಸಲಾಗುತ್ತ ಬಂದಿದೆ.
ಇಲ್ಲಿ ಮೊದಲ ಫೈನಲ್ ಏರ್ಪಟ್ಟಿದ್ದು 2007ರ ಏಕದಿನ ವಿಶ್ವಕಪ್‌ನಲ್ಲಿ. ಅಂದು ಆಸ್ಟ್ರೇಲಿಯ-ಶ್ರೀಲಂಕಾ ಮುಖಾಮುಖಿ ಆಗಿದ್ದವು. ಡಕ್‌ವರ್ತ್-ಲೂಯಿಸ್ ನಿಯಮದಂತೆ ಇದನ್ನು ಆಸೀಸ್ ಪಡೆ 53 ರನ್ನುಗಳಿಂದ ಜಯಿಸಿತ್ತು. 2010ರ ಟಿ20 ವಿಶ್ವಕಪ್ ಫೈನಲ್ ಕೂಡ ಬ್ರಿಜ್‌ಟೌನ್‌ನಲ್ಲೇ ನಡೆದಿತ್ತು. ಎದುರಾದ ತಂಡಗಳೆಂದರೆ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್. ಇಲ್ಲಿ ಪಾಲ್ ಕಾಲಿಂಗ್‌ವುಡ್ ನೇತೃತ್ವದ ಇಂಗ್ಲೆಂಡ್ 7 ವಿಕೆಟ್‌ಗಳಿಂದ ಗೆದ್ದು ಮೊದಲ ಸಲ ಚಾಂಪಿಯನ್ ಆಗಿತ್ತು. ಬ್ರಿಜ್‌ಟೌನ್ ಗ್ರೌಂಡ್ ರಿಪೋರ್ಟ್
ಬ್ರಿಜ್‌ಟೌನ್‌ನಲ್ಲಿ ಆಡಲಾದ ಈ ಕೂಟದ ಪಂದ್ಯಗಳಲ್ಲಿ ಚೇಸಿಂಗ್ ಮತ್ತು ಫಸ್ಟ್ ಬ್ಯಾಟಿಂಗ್ ಮಾಡಿದ ತಂಡಗಳು ತಲಾ 3 ಗೆಲುವು ಸಾಧಿಸಿವೆ. ಒಂದು ಪಂದ್ಯ ಟೈ ಆಗಿತ್ತು. ಮೊದಲು ಬ್ಯಾಟಿಂಗ್ ನಡೆಸಿದ ತಂಡಗಳ ರನ್ ಸರಾಸರಿ 7.70ರಷ್ಟಿತ್ತು. ಚೇಸಿಂಗ್ ತಂಡಗಳ ಸರಾಸರಿ ತುಸು ಜಾಸ್ತಿ ಆಗಿತ್ತು (7.87). ಇಲ್ಲಿ ಜಾಸ್ ಬಟ್ಲರ್ (83), ಶೈ ಹೋಪ್ (82) ಮತ್ತು ಮಾರ್ಕಸ್ ಸ್ಟೋಯಿನಿಸ್ (67) ಅಜೇಯ ಶತಕ ಬಾರಿಸಿದ್ದಾರೆ. ಕ್ರಿಸ್ ಜೋರ್ಡನ್ ಮತ್ತು ನಮೀಬಿಯಾದ ರುಬೆನ್ ಟ್ರಂಪಲ್‌ಮ್ಯಾನ್ ಪಂದ್ಯವೊಂದರಲ್ಲಿ ತಲಾ 4 ವಿಕೆಟ್ ಉರುಳಿಸಿದ್ದಾರೆ.
ಬ್ರಿಜ್‌ಟೌನ್‌ನಲ್ಲಿ ಈವರೆಗೆ 50 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಾಗಿದೆ. ಮೊದಲು ಬ್ಯಾಟಿಂಗ್ ನಡೆಸಿದ ತಂಡ 31ರಲ್ಲಿ ಗೆಲುವು ಕಂಡಿದೆ. ಈ ಟೂರ್ನಿಯಲ್ಲಿ ಭಾರತ ಬ್ರಿಜ್‌ಟೌನ್‌ನಲ್ಲಿ ಒಂದು ಪಂದ್ಯ ಆಡಿದೆ. ಅಫ್ಘಾನಿಸ್ಥಾನ ವಿರುದ್ಧ 47 ರನ್ ಅಂತರದ ಜಯ ಸಾಧಿಸಿದೆ. ದಕ್ಷಿಣ ಆಫ್ರಿಕಾ ಇಲ್ಲಿ ಇನ್ನೂ ಆಡಿಲ್ಲ. ಫೈನಲ್ ಪಂದ್ಯವೇ ಮೊದಲ ಪಂದ್ಯ.