Advertisement

T20 ಸರಣಿ ಸಮಬಲ: ಜಿಂಬಾಬ್ವೆ ವಿರುದ್ಧ 100 ರನ್ ಗಳ ಅಮೋಘ ಜಯ ಸಾಧಿಸಿದ ಭಾರತ

08:01 PM Jul 07, 2024 | Team Udayavani |

ಹರಾರೆ : ಇಲ್ಲಿನ ಹರಾರೆ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ಜಿಂಬಾಬ್ವೆ ವಿರುದ್ಧ ನಡೆಯುತ್ತಿರುವ T20 ಸರಣಿಯ ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಸೋಲಿನ ಆಘಾತಕ್ಕೆ ಸಿಲುಕಿದ್ದ ಭಾರತ ತಂಡ ಭಾನುವಾರ ಹಳಿಗೆ ಮರಳಿ ಭರ್ಜರಿ ಜಯ ತನ್ನದಾಗಿಸಿಕೊಂಡಿದೆ. ಈಗ 5 ಪಂದ್ಯಗಳ ಸರಣಿ 1-1 ರಿಂದ ಸಮಬಲವಾಗಿದೆ.

Advertisement

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ಅಭಿಷೇಕ್ ಶರ್ಮ ಅವರ ಶತಕ ಮತ್ತು ರುತುರಾಜ್ ಗಾಯಕ್ವಾಡ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಜಿಂಬಾಬ್ವೆಗೆ 235 ರನ್ ಗಳ ಭರ್ಜರಿ ಸವಾಲು ಮುಂದಿಟ್ಟಿತು ಗುರಿ ಬೆನ್ನಟ್ಟಿದ ಆತಿಥೇಯ ತಂಡ 18.4 ಓವರ್ ಗಳಲ್ಲಿ 134 ಕ್ಕೆ ಆಲೌಟಾಯಿತು. ಪ್ರಾಬಲ್ಯ ಸಾಧಿಸಿ 100 ರನ್ ಗಳ ಅಮೋಘ ಜಯವನ್ನು ಕಂಡ ಯುವ ಭಾರತ ತಂಡ ಮೊದಲ ಪಂದ್ಯದ ಸೋಲಿನ ಕಹಿ ನೆನಪು ಮರೆಯಿತು.

ವೆಸ್ಲಿ ಮಾಧೆವೆರ್ 43 ರನ್, ಬ್ರಿಯಾನ್ ಬೆನೆಟ್ 26, ಜೋನಾಥನ್ ಕ್ಯಾಂಪ್ಬೆಲ್ 10, ಲ್ಯೂಕ್ ಜೊಂಗ್ವೆ 33 ರನ್ ಗಳಿಸಿದರು. ಉಳಿದ ಆಟಗಾರರು ಒಂದಂಕಿ ದಾಟಲಿಲ್ಲ. ಆರಂಭಿಕ ಆಟಗಾರ ಕೈಯಾ 4 ರನ್ ಗಳಿಸಿದ್ದ ವೇಳೆ ಮುಖೇಶ್ ಕುಮಾರ್ ಕ್ಲೀನ್ ಬೌಲ್ಡ್ ಮಾಡಿದರು. ನಾಯಕ ಸಿಕಂದರ್ ರಝ 4 ರನ್ ಗೆ ಪೆವಿಲಿಯನ್ ಗೆ ಮರಳಿದರು.

ಭಾರತದ ಪರ ಬಿಗಿ ದಾಳಿ ನಡೆಸಿದ ಆವೇಶ್ ಖಾನ್ 3 ವಿಕೆಟ್ ಕಿತ್ತರು. ಮುಖೇಶ್ ಕುಮಾರ್ ದುಬಾರಿ ಎನಿಸಿದರೂ 3 ವಿಕೆಟ್ ಕಬಳಿಸಿದರು. ರವಿ ಬಿಷ್ಣೋಯಿ 2 ವಿಕೆಟ್ ಮತ್ತು ವಾಷಿಂಗ್ಟನ್ ಸುಂದರ್ ಒಂದು ವಿಕೆಟ್ ಕಿತ್ತರು.

ಅಭಿಷೇಕ್ ಶತಕ; ಅಮೋಘ ಆಟ

Advertisement

ಚೊಚ್ಚಲ ಪಂದ್ಯದಲ್ಲಿ ವಿಫಲರಾಗಿದ್ದ ಆರಂಭಿಕ ಆಟಗಾರ ಅಭಿಷೇಕ್ ಶರ್ಮ ಇಂದು ಅವಕಾಶವನ್ನು ಬಾಚಿಕೊಂಡು ಅಮೋಘ ಆಟವಾಡಿ ಭರ್ಜರಿ ಶತಕ ಸಿಡಿಸಿದರು. ಜಿಂಬಾಬ್ವೆ ಬೌಲರ್ ಗಳನ್ನು ದಂಡಿಸಿದ ಶರ್ಮ 100 ರನ್ ಗಳಿಸಿ ಔಟಾದರು.47 ಎಸೆತಗಳಲ್ಲಿ ಶತಕ ಗಳಿಸಿ ಔಟಾದರು.7ಬೌಂಡರಿ ಮತ್ತು 8 ಆಕರ್ಷಕ ಸಿಕ್ಸರ್ ಗಳನ್ನು ಸಿಡಿಸಿದರು.

ತಂಡ 10 ರನ್ ಗಳಿಸುವಷ್ಟರಲ್ಲೇ 2 ರನ್ ಗಳಿಸಿದ್ದ ನಾಯಕ ಗಿಲ್ ಔಟಾದರು. ಶರ್ಮ ಅವರಿಗೆ ಸಾಥ್ ನೀಡಿದ ರುತುರಾಜ್ ಗಾಯಕ್ವಾಡ್ ಔಟಾಗದೆ 77(47 ಎಸೆತ) ರನ್ ಸಿಡಿಸಿದರು. ಅಬ್ಬರಿಸಿದ ರಿಂಕ್ ಸಿಂಗ್ ಕೂಡ 48(22ಎಸೆತ)ಗಳಿಸಿ ಔಟಾಗದೆ ಉಳಿದರು. ಭರ್ಜರಿ 5 ಸಿಕ್ಸರ್ ಗಳನ್ನು ಸಿಡಿಸಿದರು. ಮುಜರಬಾನಿ ಮತ್ತು ವೆಲ್ಲಿಂಗ್ಟನ್ ಮಸಕಡ್ಜ ತಲಾ ಒಂದು ವಿಕೆಟ್ ಪಡೆದರು.

ಭಾರತದಿಂದ 2 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿರುವುದು ಜಿಂಬಾಬ್ವೆ ವಿರುದ್ಧ 2018 ರಲ್ಲಿ ಆಸ್ಟ್ರೇಲಿಯ ಗಳಿಸಿದ 229 ಕ್ಕೆ 2 ಅನ್ನು ಮೀರಿದ ಗರಿಷ್ಠ ಮೊತ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next