ಹೊಸದಿಲ್ಲಿ: ಮುಂಬರುವ ಇಂಗ್ಲೆಂಡ್ ಪ್ರವಾಸದ ಹಿನ್ನೆಲೆಯಲ್ಲಿ ಹಿರಿಯ ಆಟಗಾರರಾದ ರೋಹಿತ್ ಶರ್ಮ ಮತ್ತು ಕೆಎಲ್ ರಾಹುಲ್ ಅವರಿಗೆ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ.
ಇವರಿಬ್ಬರಲ್ಲದೇ ಜಸ್‌ಪ್ರೀತ್ ಬುಮ್ರಾ ಮತ್ತು ರಿಷಬ್ ಪಂತ್ ಅವರಿಗೂ ರಾಷ್ಟ್ರೀಯ ಆಯ್ಕೆ ಸಮಿತಿಯು ವಿಶ್ರಾಂತಿ ನೀಡುವ ಸಂಭವವಿದೆ. ಖ್ಯಾತ ಆರಂಭಿಕ ಶಿಖರ್ ಧವನ್ ಮತ್ತು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಬ್ಬರು ದಕ್ಷಿಣ ಆಫ್ರಿಕಾ ಮತ್ತು ಅಯರ್‌ಲ್ಯಾಂಡ್ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಗೆ ಭಾರತ ತಂಡವನ್ನು ಮುನ್ನಡೆಸಲು ಪೈಪೋಟಿ ನಡೆಸಲಿದ್ದಾರೆ.
ಹಾರ್ದಿಕ್ ಅವರು ಈ ಬಾರಿಯ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ಮೆಚ್ಚುಗೆ ಗಳಿಸಿದ್ದಾರೆ. ಅವರ ನಾಯಕತ್ವದಲ್ಲಿ ಗುಜರಾತ್ ಅಮೋಘ ನಿರ್ವಹಣೆ ನೀಡುತ್ತಿದ್ದು ಈಗಾಗಲೇ ತಂಡವು ಪ್ಲೇ ಆಫ್ಗೆ ತೇರ್ಗಡೆಯಾಗಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ದಿಲ್ಲಿಯಲ್ಲಿ ಜೂನ್ 9ರಿಂದ ಆರಂಭವಾಗಲಿದೆ. ಇನ್ನುಳಿದ ಪಂದ್ಯಗಳು ಕಟಕ್, ವಿಶಾಖಪಟ್ಟಣ, ರಾಜ್‌ಕೋಟ್ ಮತ್ತು ಬೆಂಗಳೂರಿನಲ್ಲಿ ನಡೆಯಲಿದೆ. ಈ ಸರಣಿಗೆ ಭಾರತೀಯ ತಂಡವನ್ನು ಮೇ 22ರಂದು ಪ್ರಕಟಿಸುವ ಸಾಧ್ಯತೆಯಿದೆ. ಮೇ 22ಕ್ಕೆ ಐಪಿಎಲ್‌ನ ಲೀಗ್ ಹಂತದ ಪಂದ್ಯಗಳು ಮುಗಿಯಲಿವೆ.
ಶ್ರೀಲಂಕಾ ಮತ್ತು ವೆಸ್ಟ್‌ಇಂಡೀಸ್ ವಿರುದ್ಧ ಇತ್ತೀಚೆಗೆ ನಡೆದ ಟಿ20 ಸರಣಿಯಲ್ಲಿ ಆಡಿದ ಹೆಚ್ಚಿನೆಲ್ಲ ಆಟಗಾರರನ್ನು ದಕ್ಷಿಣ ಆಫ್ರಿಕಾ ಸರಣಿಗೆ ಉಳಿಸಿಕೊಳ್ಳುವ ಸಾಧ್ಯತೆಯಿದೆ. ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ ಸಹಿತ ಧವನ್, ಸಂಜು ಸ್ಯಾಮ್ಸನ್ ಅವರನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ.
ಹೆಚ್ಚಿನೆಲ್ಲ ಹಿರಿಯ ಆಟಗಾರರು ಮೂರೂವರೆ ವಾರ ಪೂರ್ಣ ವಿಶ್ರಾಂತಿ ಪಡೆಯಲಿದ್ದಾರೆ. ವೈಟ್‌ಬಾಲ್ ಸರಣಿ ಬಳಿಕ ರೋಹಿತ್, ವಿರಾಟ್, ರಾಹುಲ್, ರಿಷಬ್ ಮತ್ತು ಜಸ್‌ಪ್ರೀತ್ ಐದನೇ ಟೆಸ್ಟ್ ಆಡಲು ನೇರವಾಗಿ ಇಂಗ್ಲೆಂಡಿಗೆ ತೆರಳಲಿದ್ದಾರೆ.
ನಮ್ಮೆಲ್ಲ ಪ್ರಮುಖ ಆಟಗಾರರು ಇಂಗ್ಲೆಂಡ್ ಪ್ರವಾಸಕ್ಕೆ ಹುಮ್ಮಸ್ಸಿನಿಂದ ಇರಬೇಕಾಗಿರುವುದು ನಮ್ಮ ಆಸೆಯಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಬಿಸಿಸಿಐಯ ಅಧಿಕಾರಿಯೊಬ್ಬರು ಹೇಳಿದ್ದಾರೆ.