Advertisement

ಕಿವೀಸ್‌ಗೂ ಕಿವಿ ಭಾರತ

03:00 AM Nov 11, 2017 | |

ಆಸ್ಟ್ರೇಲಿಯಾ ವಿರುದ್ಧದ ಟಿ20 ಯಲ್ಲಿ ಭಾರತ ಗೆಲ್ಲಲಿಲ್ಲ. ಟಿ20 ವಿಚಾರದಲ್ಲಿ ಅಂತಹ ಖ್ಯಾತಿ ಹೊಂದಿಲ್ಲದ ಕಾಂಗರೂ ಪಡೆ 1-1ರಿಂದ ಸರಣಿ ಸಮ ಮಾಡಿಕೊಂಡು ಸಮಾಧಾನ ಪಟ್ಟುಕೊಂಡಿತ್ತು. ಮೊನ್ನೆ ನ್ಯೂಜಿಲೆಂಡ್‌ ವಿರುದ್ಧದ ಟಿ20 ಸರಣಿಯಲ್ಲೂ ಅದೇ ಫ‌ಲತಾಂಶ ಬರುವಂತಿತ್ತು. 1-1ರ ನಂತರದ ಪಂದ್ಯ ನಡೆಯುವ ವೇಳೆಗೆ ತಿರುವನಂತರಪುರದಲ್ಲಿ ಮಳೆ ಸುರಿದಿತ್ತು. ಅಲ್ಲಿನ ಅಂಕಣದ ಕೆಲಸಗಾರರು ಅಕ್ಷರಶಃ ಬೆವರು ಸುರಿಸಿ ಮೈದಾನದಲ್ಲಿದ್ದ ನೀರನ್ನು ಹೊರಹಾಕಿದ್ದರು. ಎಂಟು ಓವರ್‌ಗಳ “ಕ್ಷಣ ಚಿತ್ತ ಕ್ಷಣ ಪಿತ್ತದ ಪಂದ್ಯ ಭಾರತಕ್ಕೆ ಒಲಿದಿದ್ದರಿಂದ ಭಾರತ ಮೊದಲ ಬಾರಿಗೆ ನ್ಯೂಜಿಲೆಂಡ್‌ ವಿರುದ್ಧ ಟಿ20 ಸರಣಿ ಗೆದ್ದಿತು.

Advertisement

ವಾಸ್ತವವಾಗಿ ಭಾರತ ಈ ಹಿಂದಿನ ಐದು ಟಿ20 ಮುಖಾಮುಖೀಯಲ್ಲಿ ಸೋಲನ್ನಷ್ಟೇ ಕಂಡಿತ್ತು. ಅಷ್ಟಕ್ಕೂ ಕಿವೀಸ್‌ ತಂಡ ಭಾರತಕ್ಕೆ ಬಂದಿಳಿದಾಗ ಅವರ ಟಿ20 ರ್‍ಯಾಂಕಿಂಗ್‌ ಅಗ್ರಸ್ಥಾನದಲ್ಲಿತ್ತು. ಆ ತಂಡದ ಆಟಗಾರರು ಹೆಸರಿನಿಂದ ಪ್ರಸಿದ್ಧರಾಗದೆ ಆಯಾ ದಿನದ ಆಟದಿಂದ 

ಗೆಲುವು ಸಾಧಿಸಲು ಕಾರಣರಾಗುವುದು. ಅದೇ ಕಾರಣಕ್ಕೆ ಹೆಸರು ಮಾಡುವುದು ಒಂದು ರೀತಿಯಲ್ಲಿ ಇತಿಹಾಸವೇ ಆಗಿದೆ. ಭಾರತದ್ದು ಟಿ20ಯಲ್ಲಿ ಐದನೇ ರ್‍ಯಾಂಕಿಂಗ್‌. ಇಂತಿಪ್ಪ ಪರಿಸ್ಥಿತಿಯಲ್ಲಿ ದಾಖಲೆ ಬರೆಯಲು ಭಾರತಕ್ಕೆ ತನ್ನದೇ ನೆಲದಲ್ಲಿ ಪಂದ್ಯಗಳು ನಡೆಯುತ್ತಿವೆ ಎಂಬ ಸಂಗತಿಯೇ ಸ್ಫೂರ್ತಿಯಾಗಿತ್ತು.

ಸ್ವದೇಶಿ ನೆಲದ ದಾಖಲೆಗಳನ್ನು ಭಾರತಕ್ಕೆ ಆತ್ಮವಿಶ್ವಾಸ ತುಂಬುವ ಮಾದರಿಯಲ್ಲಿದ್ದವು. 2015ರಿಂದ ದಕ್ಷಿಣ ಆಫ್ರಿಕಾ ಎದುರಿನ ಪರಾಭವದ ನಂತರ ಭಾರತ ತನ್ನ ಸ್ವಂತ ನೆಲದಲ್ಲಿ ಯಾವುದೇ ಸರಣಿ ಸೋತಿಲ್ಲ. 

ಅದಕ್ಕಿಂತ ಮುಖ್ಯವಾಗಿ 2016ರ ತರುವಾಯ ಭಾರತ ಆಡಿರುವ ಸರಣಿಗಳಲ್ಲಿ ಕೊನೆಯ ಪಂದ್ಯ ಸರಣಿ ನಿರ್ಣಾಯಕ ಎಂಬಂತೆ ಆದಾಗಲೆಲ್ಲ ಆ ಸವಾಲನ್ನು ಯಶಸ್ವಿಯಾಗಿ ನಿಭಾಯಿಸಿದೆ. ಇಂತಹ ಮೂರು ಏಕದಿನ ಸರಣಿ ಹಾಗೂ ನಾಲ್ಕು ಟಿ20 ಸರಣಿಯಲ್ಲಿ ಭಾರತ ಎಡವಿಲ್ಲ ಎಂಬುದು ಅದ್ಭುತ ಸಾಧನೆಯೇ ಸರಿ. ಈ ದಾಖಲೆ ನ್ಯೂಜಿಲೆಂಡ್‌ ಎದುರಿನ ಟಿ20 ಗೆಲುವಿನ ನಂತರ ಅಬಾಧಿತವಾಗಿಯೇ ಉಳಿಯಿತು.

Advertisement

 ಮಧ್ಯಮ ಕ್ರಮಾಂಕದಲ್ಲಿ ಸಮಸ್ಯೆ!
ಸದ್ಯ ಭಾರತ ಆರಂಭಿಕರ ವಿಚಾರದಲ್ಲಿ ಹೆಚ್ಚು ಆರಾಮವಾಗಿದೆ. ರೋಹಿತ್‌ ಶರ್ಮ ಹಾಗೂ ಶಿಖರ್‌ ಧವನ್‌ ಆ ಕ್ರಮಾಂಕಗಳ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಅವರು ಗಾಯಗೊಂಡ ಸ್ಥಿತಿ ನಿರ್ಮಾಣವಾದರೂ “ಬದಲಿ ವ್ಯವಸ್ಥೆಗಳಿಗೆ ಅಜಿಂಕ್ಯ ರಹಾನೆ, ಕೆ.ಎಲ್‌.ರಾಹುಲ್‌ ತರಹದವರನ್ನು ಆ ಸ್ಥಾನಕ್ಕೆ ಬಳಸಬಹುದು. 

ಆದರೆ ಹಲವು ಪಂದ್ಯಗಳಲ್ಲಿ ಕಾಣಿಸುತ್ತಿರುವಂತೆ ಭಾರತದ ಮಧ್ಯಮ ಕ್ರಮಾಂಕ ಕೇವಲ ವಿರಾಟ್‌ ಕೊಹ್ಲಿಯವರ ಛಾಯೆಯೊಳಗೆ ಸಿಲುಕಿದೆ. ಹಾರ್ದಿಕ್‌ ಪಾಂಡ್ಯ ಪಂದ್ಯ ಗೆಲ್ಲಿಸಿಕೊಡಬಲ್ಲರು, ಅವರನ್ನು ನಿರ್ದೇಶಿಸುವ ಆಟಗಾರ ಜೊತೆಗಿದ್ದರೆ ಹೆಚ್ಚು ಕ್ಷೇಮ! ಕೇದಾರ್‌ ಜಾಧವ್‌ ಭರವಸೆ ಮೂಡಿಸಿದಷ್ಟು ಫ‌ಲಿತಾಂಶ ಸಿಗುತ್ತಿಲ್ಲ.

 ಮನೀಷ್‌ ಪಾಂಡೆ, ಶ್ರೇಯಸ್‌, ದಿನೇಶ್‌ ಕಾರ್ತೀಕ್‌ ಮೊದಲಾದವರನ್ನು ತಂಡದ ಚಿಂತಕ ಮಂಡಳಿ ಪ್ರಯೋಗಿಸುತ್ತಲೇ ಇದೆ. ದಿನೇಶ್‌ ಕಾರ್ತಿಕ್‌ ಏಕದಿನದಲ್ಲಿ ಒಂದು ಮಟ್ಟಿಗೆ ಸಫ‌ಲರಾದರೂ ಕೊಹ್ಲಿ ರೀತಿಯಲ್ಲಿ ಬೇಗನೆ ಗೇರ್‌ ಬದಲಿಸಲಾಗದ ಸ್ಥಿತಿಯಲ್ಲಿದ್ದಾರೆ. ಮುಖ್ಯವಾಗಿ, ಆರಂಭಿಕರು ಮತ್ತು ಕೊಹ್ಲಿ ತಟಪಟನೆ ಉರುಳಿದಾಗ ತಂಡ ದಿಕ್ಕೆಟ್ಟಂತಾಡುತ್ತಿದೆ.

 ತಂಡದ ನಾಲ್ಕು ಅಥವಾ ಐದನೇ ಕ್ರಮಾಂಕದ ಮಹತ್ವ ಇರುವುದೇ ಇಲ್ಲಿ. ತಂಡದ ಮಾಜಿ ನಾಯಕ ಹಾಗೂ ವಿಕೆಟ್‌ ಕೀಪರ್‌ ಮಹೇಂದ್ರಸಿಂಗ್‌ ಧೋನಿ ಅವರನ್ನು ಈ ಸ್ಥಾನದಲ್ಲಿ ತೊಡಗಿಸಿಕೊಳ್ಳುವುದು ತಂಡಕ್ಕೆ ಅನುಕೂಲ ಎಂದು ವಿಶ್ಲೇಷಕರು ಹೇಳುತ್ತಾರೆ. ಮೊದಲಿನಂತೆ ಧೋನಿ ಸ್ಲಾಗ್‌ ಓವರ್‌ಗೆ ಅಂಕಣಕ್ಕಿಳಿದು ಹೆಲಿಕ್ಯಾಫ್ಟರ್‌ ಶಾಟ್‌ ಮೂಲಕ ಬೌಂಡರಿ ಆಚೆ ಚೆಂಡು ಕಳುಹಿಸಲಾರರು. ಅವರು ಕುದುರಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಾರೆ. ಈ ಮುಂಚಿನ ಅವಧಿ ದಾಟಿದ ಧೋನಿ ಹೆಚ್ಚು ಉಪಯುಕ್ತ ಎಂಬುದು ಶ್ರೀಲಂಕಾದಲ್ಲಿನ ಏಕದಿನ ಸರಣಿಯಲ್ಲಿ ಕಂಡಿದ್ದೇವೆ. 

ಧೋನಿ ಸಮಸ್ಯೆಯಾಗು ತ್ತಿರುವುದು ಟಿ20ಯಲ್ಲಿ. ಅವರಿಗೆ ಕೆಲ ಚೆಂಡುಗಳನ್ನು ರಕ್ಷಣಾತ್ಮಕವಾಗಿ ಆಡಿ ಬೇರು ಬಿಡುವ ಅವಕಾಶವನ್ನು ಈ ಮಾದರಿ ಕೊಡುತ್ತಿಲ್ಲ. ಅಷ್ಟಕ್ಕೂ ಅವರು ಬೌಂಡರಿಗಳನ್ನು ತೂರಿಸಿದಷ್ಟು ಸುಲಭವಾಗಿ ಒಂಟಿ ರನ್‌ ಕಲೆ ಹಾಕುವಲ್ಲಿ ಸೋಲುತ್ತಿದ್ದಾರೆ. ನ್ಯೂಜಿಲೆಂಡ್‌ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಧೋನಿ ಸಿಂಗಲ್ಸ್‌ಗಳ ಆಟವನ್ನೇ ಆಡಿದ್ದರೆ ಫ‌ಲಿತಾಂಶ ಭಿನ್ನವಾಗುವ ಎಲ್ಲ ಸಾಧ್ಯತೆಯಿತ್ತು. ಒಳ್ಳೆಯ ಫಾರಂನಲ್ಲಿದ್ದ ಕೊಹ್ಲಿ ಸಿಡಿಯಲು ಒಂದೊಂದು ರನ್‌ನಿಂದ ಧೋನಿ ಬೆಂಬಲಿಸಿದ್ದರೂ ಸಾಕಿತ್ತು.

 ಆಗಿದ್ದೇನು? ಧೋನಿ ಆರಂಭದಲ್ಲಿ ರನ್ನಿಗೆ ತಡಕಾಡಿದರು. ಭಾರತದ ಕೈಯಿಂದ ಗೆಲುವು ಜಾರಿತ್ತು. ಇದೇ ಅಸಹಾಯಕತೆಯಲ್ಲಿ ಕೊಹ್ಲಿ ವಿಕೆಟ್‌ ಚೆಲ್ಲಿದರು. ಸ್ವಾರಸ್ಯ ಎಂದರೆ ಧೋನಿ ತಾತ್ವಿಕವಾಗಿ ಮುಗಿದ ಪಂದ್ಯದ ಕೊನೆಯ ಹಂತದಲ್ಲಿ ಸಿಡಿದು ತಮ್ಮ ವೈಯುಕ್ತಿಕ ಅಂಕಿಅಂಶಗಳನ್ನು ಉತ್ತಮಪಡಿಸಿಕೊಂಡರು. 37 ಎಸೆತದಲ್ಲಿ 49 ರನ್‌! ಇದರಲ್ಲಿ 26 ರನ್‌ಗಳು ಮೂರು ಸಿಕ್ಸರ್‌, ಎರಡು ಬೌಂಡರಿ ಸಹಾಯದಲ್ಲಿ ಐದು ಎಸೆತದಲ್ಲಿ ಬಂದರೆ ಉಳಿದ 32 ಎಸೆತದಲ್ಲಿ ಧೋನಿ ಗಳಿಸಿದ್ದು 23 ರನ್‌ ಮಾತ್ರ. ಅವತ್ತಿನ ರನ್‌ ಇಲ್ಲದ ಎಸೆತಗಳು ಭಾರತದ ಗೆಲುವಿನ ಆಸೆಯನ್ನು ಮುರುಟಿಸಿತು.

ಧೋನಿ ಅವರನ್ನು ಬಳಸಿಕೊಳ್ಳುವಲ್ಲಿ ಜಾಣ್ಮೆ ತೋರಲೇಬೇಕು. ಟಿ20ಯಲ್ಲೂ ಅವರಿಗೆ 4ನೇ ಕ್ರಮಾಂಕದಲ್ಲಿ ಕಳುಹಿಸಿದರೆ ಮಾತ್ರ ಅನುಕೂಲ ವಾಗಬಹುದು. ಧೋನಿ “ಡಾಟ್‌ ಬಾಲ್‌ಗ‌ಳಿಂದ ಹೊರಬರಲು ಪ್ರಯತ್ನಿಸಲೇಬೇಕು. ಈಗಿನ ಮನಸ್ಥಿತಿಯ ಕೇದಾರ್‌ ಜಾಧವ್‌, ಹಾರ್ದಿಕ್‌ ಪಾಂಡ್ಯ ಕೆಳ ಕ್ರಮಾಂಕದ ಹೊಡಿಬಡಿಗೆ ಸಲ್ಲುತ್ತಾರೆ. ಅಲ್ಲಿ ಅವರನ್ನು ಬಳಸಿಕೊಳ್ಳಬಹುದು.

ಧೋನಿ ಅವರ ಸ್ಫೋಟಕ ಬ್ಯಾಟಿಂಗ್‌ ಬಗ್ಗೆ ಅನುಮಾನಗಳಿಲ್ಲ. 2017ರ ಒಂದು ಐಪಿಎಲ್‌ ಪಂದ್ಯ ನೆನಪಾಗುತ್ತದೆ. ಮುಂಬೈ ಇಂಡಿಯನ್‌ ವಿರುದ್ಧದ ಪಂದ್ಯ. 18 ಓವರ್‌ ಅಂತ್ಯದಲ್ಲಿ ಧೋನಿ ಆಡುವ ಸೂಪರ್‌ ಜೈಂಟ್ಸ್‌ ಪುಣೆ ಮೂರು ವಿಕೆಟ್‌ ನಷ್ಟಕ್ಕೆ ಕೇವಲ 121 ರನ್‌ ಗಳಿಸಿತ್ತು. ಧೋನಿ 17 ಎಸೆತಗಳಲ್ಲಿ 13 ರನ್‌ ಗಳಿಸಿದ್ದರು. ಮುಂದಿನ ಎರಡು ಓವರ್‌ಗಳಲ್ಲಿ 41 ರನ್‌ ಹರಿದುಬಂದಿತ್ತು. ಜಸ್‌ಪ್ರೀತ್‌ ಬುಮ್ರಾ ಹಾಗೂ ಮ್ಯಾಕ್ಲೆನಗನ್‌ ಎಸೆತ ನಾಲ್ಕು ಚೆಂಡು ಅಂತರದಲ್ಲಿ ವ್ಯತ್ಯಾಸವಾದಾಗ ಧೋನಿ ಅದಕ್ಕೆ ಪರಮಾವಧಿ ಶಿಕ್ಷೆ ಕೊಟ್ಟಿದ್ದರು. ಇನಿಂಗ್ಸ್‌ ಅಂತ್ಯಕ್ಕೆ ಅವರು 26 ಚೆಂಡಿಗೆ 40 ರನ್‌ ಅಂದರೆ ಕೊನೆಯ 9 ಚೆಂಡಿಗೆ 27 ರನ್‌ ಸಂಪಾದಿಸಿದ್ದರು. ಇಂತಹ ವೀರೋದ್ಧಾತ್ತ ಉದಾಹರಣೆಗಳ ಹೊರತಾಗಿಯೂ ಧೋನಿ 19ನೇ ಓವರ್‌ನ ಮೊದಲ ಎಸೆತದಲ್ಲಿಯೇ ಔಟಾದರೆ ಪರಿಸ್ಥಿತಿ ಹೇಗೆ ಬದಲಾಗುತ್ತದೆ ಎಂದು ಕೂಡ ಯೋಚಿಸಬೇಕು!

ಚಾಹಲ್‌, ಕುಲದೀಪ್‌ಗೆ ಅಶ್ವಿ‌ನ್‌ ವಿಕೆಟ್‌!
ಸದ್ಯದ ಭಾರತದ ಬೌಲಿಂಗ್‌ ಪಡೆ ಸೀಮಿತ ಓವರ್‌ ಪಂದ್ಯಗಳಲ್ಲಿ ಭುವನೇಶ್ವರ್‌ ಕುಮಾರ್‌, ಬುಮ್ರಾ ಹಾಗೂ ಸ್ಪಿನ್ನರ್‌ಗಳಾದ ಯಜುವೇಂದ್ರ ಚಾಹಲ್‌, ಕುಲದೀಪ್‌ ಯಾದವ್‌ರ ಪ್ರಭಾವಯುತ ದಾಳಿ ಕೇವಲ ಎದುರಾಳಿಗಳನ್ನು ಚಿತ್‌ ಮಾಡುತ್ತಿಲ್ಲ. ಸೀಮಿತ ಓವರ್‌ಗಳಿಗೆ ಮರಳುವ ಆರ್‌.ಅಶ್ವಿ‌ನ್‌ ಹಾಗೂ ರವೀಂದ್ರ ಜಡೇಜಾರ ಆಸೆಗಳಿಗೂ ತಣ್ಣೀರೆರಚುತ್ತಿದೆ. ಕುಲ್‌ದೀಪ್‌ರ ಹ್ಯಾಟ್ರಿಕ್‌ಗಿಂತ ಬೇಕಾದಾಗೆಲ್ಲ ವಿಕೆಟ್‌ ತಂದುಕೊಡುವ ಚಾಹಲ್‌ ಸಾಮರ್ಥ್ಯ ತಂಡಕ್ಕೆ ಸಹಾಯಕವಾಗಿದೆ. ಏಕದಿನ ಕ್ರಿಕೆಟ್‌ನಲ್ಲಿ ಕುಲ್‌ದೀಪ್‌ 
12 ಪಂದ್ಯದಿಂದ 19 ವಿಕೆಟ್‌ಗಳನ್ನು 4.94ರ ಸರಾಸರಿಯಲ್ಲಿ ಹಾಗೂ ಚಾಹಲ್‌ 4.56ರ ಸರಾಸರಿಯಲ್ಲಿ 14 ಪಂದ್ಯಗಳಿಂದ 21 ವಿಕೆಟ್‌ ಪಡೆದಿದ್ದಾರೆ. ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಮುಂಬರಲಿರುವ ವಿಶ್ವಕಪ್‌ ವೇಳೆಗೆ ಈ ಇಬ್ಬರು ಬೌಲರ್‌ಗಳನ್ನು ಕಾಯಂಗೊಳಿಸಿಕೊಳ್ಳುವ ಇರಾದೆ ಕಂಡುಬರುತ್ತಿದೆ.

ಶ್ರೀಲಂಕಾ ವಿರುದ್ಧ ಸದ್ಯದಲ್ಲೇ ಆರಂಭವಾಗ ಲಿರುವ ಸರಣಿಯನ್ನು ದೇಶದ ಸರಣಿ ಗೆಲುವಿಗಿಂತ ಇಂತಹ ಹಲವು ಪ್ರಶ್ನೆಗಳಿಗೆ ಉತ್ತರ ಕೊಡಲಿದೆ. ಒಂದಂತೂ ನಿಜ, ಸಕಾರಾತ್ಮಕ ಫ‌ಲಿತಾಂಶಗಳ ಹೊರತಾಗಿ ಭಾರತ ವಿದೇಶಿ ನೆಲದಲ್ಲಿ ಪಂದ್ಯವಾಡಿದಾಗ ತಂಡದ ನಿಜವಾದ ಸಾಮರ್ಥ್ಯ ಬೆಳಕಿಗೆ ಬರುತ್ತದೆ. ಆದರೆ ವಿದೇಶಿ ನೆಲದ ಪಂದ್ಯವಾಡಲು ಭಾರತ ದಕ್ಷಿಣ ಆಫ್ರಿಕಾಗೆ ತೆರಳುವುದು ಈ ವರ್ಷದ ಡಿಸೆಂಬರ್‌ ಅಂತ್ಯದಲ್ಲಿ. ಅಲ್ಲಿಯವರೆಗೂ ಕಾಯಬೇಕು!

ಮಾ.ವೆಂ.ಸ.ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next