Advertisement

ಟಿ20: ಪಾಕ್ ನಾಯಕ ಬಾಬರ್ ಅಜಮ್ ನಂ.1 ; ಹಸರಂಗಾ ನಂ.1 ಬೌಲರ್

07:18 PM Nov 03, 2021 | Team Udayavani |

ದುಬೈ : ಪಾಕಿಸ್ಥಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಐಸಿಸಿ ಪುರುಷರ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೆ ಏರಿದ್ದಾರೆ, ಶ್ರೀಲಂಕಾದ ವನಿಂದು ಹಸರಂಗಾ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ನಂ .1 ಬೌಲರ್ ಅನಿಸಿಕೊಂಡಿದ್ದಾರೆ.

Advertisement

ಈ ಹಿಂದೆ ಜನವರಿ 2018 ರಲ್ಲಿ ಅಗ್ರಸ್ಥಾನದಲ್ಲಿದ್ದ ಅಜಮ್, ಪಾಕಿಸ್ಥಾನದ ಟಿ20 ವಿಶ್ವಕಪ್‌ ಅಭಿಯಾನದಲ್ಲಿ 198 ರನ್ ಗಳಿಸುವ ಮೂಲಕ ತಂಡಕ್ಕೆ ಆಧಾರವಾಗಿದ್ದಾರೆ. ನಾಲ್ಕು ಇನ್ನಿಂಗ್ಸ್‌ಗಳಲ್ಲಿ, 124.52 ಸ್ಟ್ರೈಕ್ ರೇಟ್‌ನಲ್ಲಿ ಸರಾಸರಿ 66.ರನ್ ಗಳಿಸಿದ್ದಾರೆ.

ಕಳೆದ ವಾರದ ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿದ್ದ ಅಜಮ್ ಅವರು 14 ಅಂಕಗಳನ್ನು ಹೆಚ್ಚುವರಿಯಾಗಿ ಪಡೆದು 834 ಕ್ಕೆ ಏರಿದರು. 831 ರಿಂದ 798 ಕ್ಕೆ ಕುಸಿದ ಇಂಗ್ಲೆಂಡ್‌ನ ಡೇವಿಡ್ ಮಲಾನ್ ಅವರನ್ನು ಹಿಂದಿಕ್ಕಿದರು.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 714 ಅಂಕಗಳೊಂದಿಗೆ ಐದನೇ ಶ್ರೇಯಾಂಕದಲ್ಲಿದ್ದಾರೆ. ಪಾಕ್ ನ ಇನ್ನೋರ್ವ ಆಟಗಾರ ಮೊಹಮದ್ ರಿಜ್ವಾನ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಭಾರತದ ಕೆ.ಎಲ್. ರಾಹುಲ್ ಎಂಟನೇ ಸ್ಥಾನ ಪಡೆದಿದ್ದಾರೆ.

ಆಸ್ಟ್ರೇಲಿಯದ ನಾಯಕ ಆ್ಯರನ್ ಫಿಂಚ್ (733 ಅಂಕ) ಮೂರು ಸ್ಥಾನ ಮೇಲೇರಿ ಮೂರನೇ ಸ್ಥಾನಕ್ಕೆ ತಲುಪಿದ್ದಾರೆ.

Advertisement

ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಅವರು ಗಾಯದ ಸಮಸ್ಯೆಯಿಂದ ಟಿ20 ವಿಶ್ವಕಪ್‌ ಟೂರ್ನಿಯ ಉಳಿದ ಪಂದ್ಯಗಳನ್ನು ಕಳೆದುಕೊಳ್ಳಲಿದ್ದಾರೆ. ಸದ್ಯಕ್ಕೆ ಆಲ್ ರೌಂಡರ್ ಶ್ರೇಯಾಂಕದಲ್ಲಿ ಶಕೀಬ್ ಅಗ್ರಸ್ಥಾನದಲ್ಲಿದ್ದಾರೆ.

ಬೌಲಿಂಗ್ ನಲ್ಲಿ ಅಫ್ಘಾನ್ ನ ರಶೀದ್ ಖಾನ್ ನಾಲ್ಕನೇ ಮತ್ತು ಮುಜೀಬ್ ಉರ್ ರೆಹಮಾನ್ ಐದನೇ ಸ್ಥಾನ ಪಡೆದಿದ್ದಾರೆ. ಟಾಪ್ ಹತ್ತರಲ್ಲಿ ಭಾರತೀಯ ಬೌಲರ್ ಗಳಿಲ್ಲ, ಆಲ್ ರೌಂಡರ್ ಗಳೂ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next