ಕ್ರೈಸ್ಟ್‌ಚರ್ಚ್: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಡೇವನ್ ಕಾನ್ವೆ ಸಿಡಿಸಿದ ಅಜೇಯ 99 ರನ್ ಹಾಗೂ ಲೆಗ್‌ಸ್ಪಿನ್ನರ್ ಐಶ್ ಸೋಧಿ ಅವರ 4 ವಿಕೆಟ್ ಸಾಹಸದಿಂದ ಟಿ20 ಸರಣಿಯ ಮೊದಲ ಮುಖಾಮುಖೀಯಲ್ಲಿ ನ್ಯೂಜಿಲ್ಯಾಂಡ್ 53 ರನ್ನುಗಳಿಂದ ಆಸ್ಟ್ರೇಲಿಯವನ್ನು ಕೆಡವಿದೆ.
ಸೋಮವಾರ ಇಲ್ಲಿ ಅಹರ್ನಿಶಿಯಾಗಿ ನಡೆದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಆರಂಭಿಕ ಕುಸಿತದಿಂದ ಚೇತರಿಸಿಕೊಂಡು 5 ವಿಕೆಟಿಗೆ 184 ರನ್ ಪೇರಿಸಿದರೆ, ಆಸ್ಟ್ರೇಲಿಯ 17.3 ಓವರ್‌ಗಳಲ್ಲಿ 131ಕ್ಕೆ ಆಲೌಟ್ ಆಯಿತು. ಇದು ತವರಲ್ಲಿ ಆಸೀಸ್ ಎದುರು ಆಡಿದ 6 ಪಂದ್ಯಗಳಲ್ಲಿ ನ್ಯೂಜಿಲ್ಯಾಂಡಿಗೆ ಒಲಿದ ಮೊದಲ ಗೆಲುವು. ಇದರೊಂದಿಗೆ ನೂತನ ವಿನ್ಯಾಸದ ಜೆರ್ಸಿ ಯೊಂದಿಗೆ ಆಡಲಿಳಿದ ನ್ಯೂಜಿಲ್ಯಾಂಡ್ ನೂತನ ಆರಂಭ ಪಡೆದಂತಾಯಿತು.
ಗಪ್ಟಿಲ್ (0), ಸೀಫರ್ಟ್ (1) ಮತ್ತು ನಾಯಕ ವಿಲಿಯಮ್ಸನ್ (12) ಅವರನ್ನು 19 ರನ್ ಆಗುವಷ್ಟರಲ್ಲಿ ಕಳೆದುಕೊಂಡ ನ್ಯೂಜಿಲ್ಯಾಂಡ್ ಸಣ್ಣ ಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿತ್ತು. ಆದರೆ ದಕ್ಷಿಣ ಆಫ್ರಿಕಾ ಮೂಲದ ಎಡಗೈ ಬ್ಯಾಟ್ಸ್ ಮನ್ ಡೇವನ್ ಕಾನ್ವೆ ಕಾಂಗರೂ ಬೌಲರ್‌ಗಳನ್ನು ದಿಟ್ಟ ರೀತಿಯಲ್ಲಿ ಎದುರಿಸಿ ಕಿವೀಸ್ ಮೊತ್ತವನ್ನು 180ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಕಾನ್ವೆ ಕೊಡುಗೆ ಅಜೇಯ 99 ರನ್ (59 ಎಸೆತ, 10 ಬೌಂಡರಿ, 3 ಸಿಕ್ಸರ್). ಒಂದು ರನ್ನಿನಿಂದ ಅವರು ಸೆಂಚುರಿ ತಪ್ಪಿಸಿಕೊಂಡರು.
ಮೊದಲ ಓವರಿನಲ್ಲೇ ನಾಯಕ ಫಿಂಚ್ (1) ಅವರನ್ನು ಕಳೆದುಕೊಂಡ ಆಸೀಸ್, 19ಕ್ಕೆ 4 ಎನ್ನುವ ಸ್ಥಿತಿಗೆ ತಲುಪಿತು. ಈ ಕುಸಿತದಿಂದ ಪಾರಾಗಲೇ ಇಲ್ಲ. ಐಶ್ ಸೋಧಿ ಘಾತಕ ದಾಳಿ ನಡೆಸಿ 28ಕ್ಕೆ 4 ವಿಕೆಟ್ ಉಡಾಯಿಸಿದರು.
ಸಂಕ್ಷಿಪ್ತ ಸ್ಕೋರ್: ನ್ಯೂಜಿಲ್ಯಾಂಡ್-5 ವಿಕೆಟಿಗೆ 184 (ಕಾನ್ವೆ ಔಟಾಗದೆ 99, ಫಿಲಿಪ್ಸ್ 30, ನೀಶಮ್ 26, ರಿಚರ್ಡ್‌ಸನ್ 31ಕ್ಕೆ 2, ಸ್ಯಾಮ್ಸ್ 40ಕ್ಕೆ 2). ಆಸ್ಟ್ರೇಲಿಯ-17.3 ಓವರ್‌ಗಳಲ್ಲಿ 131 (ಮಾರ್ಷ್ 45, ಅಗರ್ 23, ಸೋಧಿ 28ಕ್ಕೆ 4, ಸೌಥಿ 10ಕ್ಕೆ 2, ಬೌಲ್ಟ್ 22ಕ್ಕೆ 2).
ಪಂದ್ಯಶ್ರೇಷ್ಠ: ಡೇವನ್ ಕಾನ್ವೆ.