Advertisement

ಟಿ20, ಟೆಸ್ಟ್‌  ಸರಣಿಗೆ ಭಾರತ ತಂಡ

09:21 AM Oct 28, 2018 | Team Udayavani |

ಪುಣೆ: ಮುಂಬರುವ ವೆಸ್ಟ್‌ ಇಂಡೀಸ್‌ ಮತ್ತು ಆಸ್ಟ್ರೇಲಿಯ ವಿರುದ್ಧದ ಟ್ವೆಂಟಿ20 ಸರಣಿಗೆ 16 ಸದಸ್ಯರ ಭಾರತೀಯ ತಂಡವನ್ನು ಶುಕ್ರವಾರ ರಾತ್ರಿ ರಾಷ್ಟ್ರೀಯ ಆಯ್ಕೆಗಾರರು ಪ್ರಕಟಿಸಿದ್ದಾರೆ. ಈ ಎರಡೂ ಸರಣಿಗಳಿಗೆ ಎಂಎಸ್‌ ಧೋನಿ ಅವರನ್ನು ಕೈಬಿಡುವ ಮೂಲಕ ಆಯ್ಕೆಗಾರರು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಭಾರತೀಯ ಕ್ರಿಕೆಟ್‌ನಲ್ಲಿ ನೆಲೆವೂರಿದ ಬಳಿಕ ಧೋನಿ ಅವರನ್ನು ತಂಡದಿಂದ ಕೈಬಿಟ್ಟಿರುವುದು ಇದೇ ಮೊದಲ ಸಲವಾಗಿದೆ. 

Advertisement

ಆಸ್ಟ್ರೇಲಿಯದಲ್ಲಿ ನಡೆಯಲಿರುವ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಗೂ ಆಯ್ಕೆಗಾರರು ತಂಡವನ್ನು ಪ್ರಕಟಿಸಿ ಆಶ್ಚರ್ಯಗೊಳಿಸಿದ್ದಾರೆ. ವಿರಾಟ್‌ ಕೊಹ್ಲಿ ನಾಯಕತ್ವದ ಈ ತಂಡಕ್ಕೆ ರೋಹಿತ್‌ ಶರ್ಮ ಮತ್ತು ಮುರಳಿ ವಿಜಯ್‌ ಮರಳಿದ್ದಾರೆ.

ಧೋನಿ ಅವರು ಮುಂದಿನ ಆರು ಟ್ವೆಂಟಿ20 ಪಂದ್ಯಗಳಲ್ಲಿ ಆಡುವುದಿಲ್ಲ. ಅದರರ್ಥ ಟ್ವೆಂಟಿ20 ಮಾದರಿಯ ಕ್ರಿಕೆಟ್‌ ಧೋನಿ ಪಾಲಿಗೆ ಮುಗಿಯಿತು ಎಂದಲ್ಲ. ನಾವು ಇನ್ನೋರ್ವ ವಿಕೆಟ್‌ಕೀಪರ್‌ನ ಸ್ಥಾನ ತುಂಬಲು ಎದುರು ನೋಡುತ್ತಿದ್ದೇವೆ ಎಂದು ಮುಖ್ಯ ಆಯ್ಕೆಗಾರ ಎಂಎಸ್‌ಕೆ ಪ್ರಸಾದ್‌ ಹೇಳಿದ್ದಾರೆ. ಎರಡೂ ಟ್ವೆಂಟಿ20 ಸರಣಿಗೆ ರಿಷಬ್‌ ಪಂತ್‌ ಮತ್ತು ದಿನೇಶ್‌ ಕಾರ್ತಿಕ್‌ ಅವರನ್ನು ಸೇರಿಸಿಕೊಳ್ಳಲಾಗಿದೆ.

ದೇವಧರ್‌ ಟ್ರೋಫಿಯಲ್ಲಿ ಗಮ ನಾರ್ಹ ನಿರ್ವಹಣೆ ನೀಡಿ ಫಿಟ್‌ನೆಸ್‌ ಸಾಬೀತುಪಡಿಸಿದ ಕೇದಾರ್‌ ಜಾಧವ್‌ ಅವರನ್ನು ವೆಸ್ಟ್‌ಇಂಡೀಸ್‌ ವಿರುದ್ಧದ 4 ಮತ್ತು 5ನೇ ಏಕದಿನಕ್ಕೆ ಕರೆಸಿಕೊಳ್ಳಲಾಗಿದೆ. ಜಾಧವ್‌ ಅವರನ್ನು ಒಳಗೊಂಡ ತಂಡ ದೇವಧರ್‌ನಲ್ಲಿ ಫೈನಲ್‌ ಹಂತ ತಲುಪಿದೆ. ಹಾಗಾಗಿ ಅವರಿಗೆ ಇನ್ನೊಂದು ಅವಕಾಶ ನೀಡಲು ನಾವು ನಿರ್ಧರಿಸಿದ್ದೇವೆ ಎಂದು ಪ್ರಸಾದ್‌ ತಿಳಿಸಿದರು. 

ಕೊಹ್ಲಿಗೆ ವಿಶ್ರಾಂತಿ
ವೆಸ್ಟ್‌ಇಂಡೀಸ್‌ ವಿರುದ್ಧದ 3 ಪಂದ್ಯಗಳ ಟ್ವೆಂಟಿ20 ಸರಣಿಗೆ ನಾಯಕ ವಿರಾಟ್‌ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಈ ಸರಣಿ ನ. 4ರಿಂದ ಆರಂಭವಾಗಲಿದೆ. ಕೊಹ್ಲಿ ಅವರ ಅನುಪಸ್ಥಿತಿಯಲ್ಲಿ ರೋಹಿತ್‌ ಶರ್ಮ ತಂಡವನ್ನು ಮುನ್ನಡೆಸಲಿದ್ದಾರೆ. ಆಸ್ಟ್ರೇಲಿಯ ವಿರುದ್ಧದ ಟೆಸ್ಟ್‌ ಸರಣಿ ವೇಳೆ ಅವರು ತಂಡವನ್ನು ಸೇರಿಕೊಳ್ಳಲಿದ್ದಾರೆ. ಆಬಳಿಕ ಆಸ್ಟ್ರೇಲಿಯ ವಿರುದ್ಧದ ಟ್ವೆಂಟಿ20 ಸರಣಿ ನಡೆಯಲಿದೆ.

Advertisement

ಅಭಿಮಾನಿಗಳ ಆಕ್ರೋಶ
ರಾಂಚಿ:
ವೆಸ್ಟ್‌ ಇಂಡೀಸ್‌, ಆಸ್ಟ್ರೇಲಿಯ ವಿರುದ್ಧದ ಟಿ20 ಸರಣಿಯಿಂದ ಧೋನಿ ಅವರನ್ನು  ಹೊರಗಿಟ್ಟಿರುವುದರ ವಿರುದ್ಧ ಧೋನಿ ಅಭಿಮಾನಿಗಳು ಸಿಟ್ಟಾಗಿದ್ದಾರೆ. ಧೋನಿಗೆ ನಿವೃತ್ತಿ ದಿನಗಳು ಹತ್ತಿರ ಬರುತ್ತಿವೆ ಎನ್ನುವಂತಹ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದರಿಂದ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಆಯ್ಕೆ ಸಮಿತಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next