Advertisement

ಟಿ20: ಬೇರ್‌ಸ್ಟೊ ಬಿರುಗಾಳಿಗೆ ಬೆದರಿದ ಆಫ್ರಿಕಾ; ಇಂಗ್ಲೆಂಡ್‌ 5 ವಿಕೆಟ್‌ ವಿಕ್ರಮ

06:16 PM Nov 28, 2020 | mahesh |

ಕೇಪ್‌ಟೌನ್‌: ಜಾನಿ ಬೇರ್‌ಸ್ಟೊ ಅವರ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ ದಕ್ಷಿಣ ಆಫ್ರಿಕಾ ಎದುರಿನ ದೊಡ್ಡ ಮೊತ್ತದ ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್‌ 5 ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ.

Advertisement

ಕೇಪ್‌ಟೌನ್‌ನ “ನ್ಯೂಲ್ಯಾಂಡ್ಸ್‌’ನಲ್ಲಿ ನಡೆದ ಡೇ-ನೈಟ್‌ ಮುಖಾಮುಖಿಯಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ದಕ್ಷಿಣ ಆಫ್ರಿಕಾ 6 ವಿಕೆಟಿಗೆ 179 ರನ್‌ ಪೇರಿಸಿ ಸವಾಲೊಡ್ಡಿತು. ಚೇಸಿಂಗ್‌ ವೇಳೆ ಇಂಗ್ಲೆಂಡ್‌ 3 ವಿಕೆಟ್‌ಗಳನ್ನು ಕ್ಷಿಪ್ರಗತಿಯಲ್ಲಿ ಕಳೆದುಕೊಂಡರೂ ಬೇರ್‌ಸ್ಟೊ ಬಿರುಗಾಳಿಯಾಗಿ ಪರಿಣಮಿಸಿದರು. 19.2 ಓವರ್‌ಗಳಲ್ಲಿ 5 ವಿಕೆಟಿಗೆ 183 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು.

ರನ್‌ ಖಾತೆ ತೆರೆಯಲ್ಪಡುವ ಮೊದಲೇ ಆರಂಭಕಾರ ಜಾಸನ್‌ ರಾಯ್‌ ಪೆವಿಲಿಯನ್‌ ಸೇರಿಕೊಂಡರು. ಮತ್ತೋರ್ವ ಓಪನರ್‌ ಜಾಸ್‌ ಬಟ್ಲರ್‌ ಕೇವಲ 7 ರನ್‌ ಮಾಡಿ ನಿರ್ಗಮಿಸಿದರು. ಡೇವಿಡ್‌ ಮಾಲನ್‌ (19) 3ನೇ ವಿಕೆಟ್‌ ರೂಪದಲ್ಲಿ ವಾಪಸಾಗುವಾಗ ಇಂಗ್ಲೆಂಡ್‌ 5.3 ಓವರ್‌ಗಳಲ್ಲಿ 3 ವಿಕೆಟಿಗೆ 34 ರನ್‌ ಮಾಡಿ ಆತಂಕಕ್ಕೆ ಸಿಲುಕಿತ್ತು. ಆದರೆ 4ನೇ ಕ್ರಮಾಂಕದಲ್ಲಿ ಆಡಲಿಳಿದ ಬೇರ್‌ಸ್ಟೊ ಪಂದ್ಯದ ಚಿತ್ರಣವನ್ನೇ ಬದಲಿಸಿದರು.

8.2 ಓವರ್‌ಗಳಿಂದ 85 ರನ್‌
ಹರಿಣಗಳ ಮೇಲೆರಗಿ ಹೋದ ಬೇರ್‌ಸ್ಟೊ ಅಜೇಯ 86 ರನ್ನುಗಳ ಬೊಂಬಾಟ್‌ ಬ್ಯಾಟಿಂಗ್‌ ಪ್ರದರ್ಶಿಸಿದರು. 48 ಎಸೆತಗಳ ಈ ಸ್ಫೋಟಕ ಆಟದ ವೇಳೆ 9 ಬೌಂಡರಿ, 4 ಸಿಕ್ಸರ್‌ ಸಿಡಿಯಲ್ಪಟ್ಟಿತು. ಅವರಿಗೆ ಬೆನ್‌ ಸ್ಟೋಕ್ಸ್‌ (37) ಉತ್ತಮ ಬೆಂಬಲವಿತ್ತರು. ಈ ಜೋಡಿ 8.2 ಓವರ್‌ಗಳಿಂದ 85 ರನ್‌ ಸೂರೆಗೈದಿತು.

ದಕ್ಷಿಣ ಆಫ್ರಿಕಾ ಬ್ಯಾಟಿಂಗ್‌ ಸರದಿಯಲ್ಲಿ ಫಾ ಡು ಪ್ಲೆಸಿಸ್‌ 58, ವಾನ್‌ ಡರ್‌ ಡುಸೆನ್‌ 37, ಕ್ವಿಂಟನ್‌ ಡಿ ಕಾಕ್‌ 30 ರನ್‌ ಹೊಡೆದರು.

Advertisement

ಸಂಕ್ಷಿಪ್ತ ಸ್ಕೋರ್‌: ದಕ್ಷಿಣ ಆಫ್ರಿಕಾ-6 ವಿಕೆಟಿಗೆ 179 (ಡು ಪ್ಲೆಸಿಸ್‌ 58, ಡುಸೆನ್‌ 37, ಡಿ ಕಾಕ್‌ 30, ಸ್ಯಾಮ್‌ ಕರನ್‌ 28ಕ್ಕೆ 3, ಆರ್ಚರ್‌ 28ಕ್ಕೆ 1).

ಇಂಗ್ಲೆಂಡ್‌-19.2 ಓವರ್‌ಗಳಲ್ಲಿ 4 ವಿಕೆಟಿಗೆ 183 (ಬೇರ್‌ಸ್ಟೊ ಔಟಾಗದೆ 86, ಸ್ಟೋಕ್ಸ್‌ 37, ಮಾಲನ್‌ 19, ಲಿಂಡೆ 20ಕ್ಕೆ 2, ಎನ್‌ಗಿಡಿ 31ಕ್ಕೆ 2).

ಪಂದ್ಯಶ್ರೇಷ್ಠ: ಜಾನಿ ಬೇರ್‌ಸ್ಟೊ.

Advertisement

Udayavani is now on Telegram. Click here to join our channel and stay updated with the latest news.

Next