Advertisement

T20 Cricket:  ಶ್ರೀಲಂಕಾ ವಿರುದ್ಧ 43 ರನ್‌ಗಳಿಂದ ಗೆದ್ದ ಭಾರತ

11:29 PM Jul 27, 2024 | Team Udayavani |

ಪಲ್ಲೆಕೆಲೆ: ಟಿ20 ವಿಶ್ವ ಚಾಂಪಿಯನ್‌ ಭಾರತ ಮೊದಲ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾವನ್ನು 43 ರನ್ನುಗಳಿಂದ ಮಣಿಸಿ ಶುಭಾರಂಭ ಮಾಡಿದೆ. ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 7 ವಿಕೆಟಿಗೆ 213 ರನ್‌ ಪೇರಿಸಿದರೆ, ಶ್ರೀಲಂಕಾ 19.2 ಓವರ್‌ಗಳಲ್ಲಿ 170ಕ್ಕೆ ಆಲೌಟ್‌ ಆಯಿತು.

Advertisement

ಅಬ್ಬರದ ಆರಂಭ
ಭಾರತದ ಆರಂಭ ಅಬ್ಬರದಿಂದ ಕೂಡಿತ್ತು. ಜೈಸ್ವಾಲ್‌ ಮೊದಲ ಎಸೆತವನ್ನೇ ಬೌಂಡರಿಗೆ ಬಡಿದಟ್ಟಿ ಸ್ಫೋಟಕ ಆಟದ ಸೂಚನೆಯಿತ್ತರು. ಪವರ್‌ ಪ್ಲೇಯಲ್ಲಿ ಜೈಸ್ವಾಲ್‌-ಗಿಲ್‌ ಸೇರಿಕೊಂಡು ಲಂಕಾ ದಾಳಿಯನ್ನು ಪುಡಿಗಟ್ಟಿದರು. ರನ್‌ ಸರಾಗವಾಗಿ ಹರಿದುಬರತೊಡಗಿತು. ಇನ್ನೇನು 6 ಓವರ್‌ ಮುಗಿಯಬೇಕು ಎನ್ನುವಷ್ಟರಲ್ಲಿ ಲಂಕಾ ಮೊದಲ ಯಶಸ್ಸು ಸಾಧಿಸಿತು.

ಪವರ್‌ ಪ್ಲೇಯ ಕೊನೆಯ ಎಸೆತದಲ್ಲಿ ಗಿಲ್‌ ವಿಕೆಟ್‌ ಬಿತ್ತು. ಮೊದಲ ವಿಕೆಟಿಗೆ 74 ರನ್‌ ಹರಿದು ಬಂತು. ಗಿಲ್‌ ಗಳಿಕೆ 16 ಎಸೆತಗಳಿಂದ 34 ರನ್‌ (6 ಫೋರ್‌, 1 ಸಿಕ್ಸರ್‌). ಈ ವಿಕೆಟ್‌ ಮದುಶಂಕ ಪಾಲಾಯಿತು. ಶ್ರೀಲಂಕಾ ವಿರುದ್ಧ ಪವರ್‌ ಪ್ಲೇಯಲ್ಲಿ ಭಾರತ ಗಳಿಸಿದ ಅತ್ಯಧಿಕ ರನ್‌ ಇದಾಗಿದೆ.

7ನೇ ಓವರ್‌ನಲ್ಲಿ ದಾಳಿಗೆ ಇಳಿದ ವನಿಂದು ಹಸರಂಗ ಮೊದಲ ಎಸೆತದಲ್ಲೇ ದೊಡ್ಡದೊಂದು ಬೇಟೆಯಾಡಿದರು. ಮುನ್ನುಗ್ಗಿ ಬಂದ ಜೈಸ್ವಾಲ್‌ ಸ್ಟಂಪ್ಡ್ ಆದರು. ಜೈಸ್ವಾಲ್‌ ಕೊಡುಗೆ 21 ಎಸೆತಗಳಿಂದ 40 ರನ್‌. ಸಿಡಿಸಿದ್ದು 5 ಬೌಂಡರಿ, 2 ಸಿಕ್ಸರ್‌. ಹೀಗೆ ಸತತ 2 ಎಸೆತಗಳಲ್ಲಿ 2 ವಿಕೆಟ್‌ ಉಡಾಯಿಸಿದ ಶ್ರೀಲಂಕಾ ನಿಟ್ಟುಸಿರೆಳೆಯಿತು. ಆದರೆ ಭಾರತದ ಓಟದ ಗತಿಗೇನೂ ತೊಂದರೆ ಆಗಲಿಲ್ಲ. ನಾಯಕ ಸೂರ್ಯಕುಮಾರ್‌ ಯಾದವ್‌ ಸಿಡಿಯಲಾರಂಭಿಸಿದರು. ಅರ್ಧ ಹಾದಿ ಕ್ರಮಿಸುವಾಗ ಭಾರತದ ಸ್ಕೋರ್‌ 2ಕ್ಕೆ 111 ರನ್‌ ಆಗಿತ್ತು.

Advertisement

ನಾಯಕನ ಜವಾಬ್ದಾರಿಯ ನಡುವೆಯೂ ದಿಟ್ಟ ಬ್ಯಾಟಿಂಗ್‌ ಪ್ರದರ್ಶಿಸಿದ ಸೂರ್ಯ 20ನೇ ಅರ್ಧ ಶತಕ ಬಾರಿಸಿ ಮಿಂಚಿದರು. ಇದು ಲಂಕಾ ವಿರುದ್ಧ ಆಡಿದ 6 ಪಂದ್ಯಗಳಲ್ಲಿ ಸೂರ್ಯ ಸಿಡಿಸಿದ 4ನೇ 50 ಪ್ಲಸ್‌ ಗಳಿಕೆ. ಇದರಲ್ಲಿ ಒಂದು ಶತಕವೂ ಸೇರಿದೆ. ಸೂರ್ಯ 26 ಎಸೆತಗಳಿಂದ 58 ರನ್‌ ಸಿಡಿಸಿದರು (8 ಬೌಂಡರಿ, 2 ಸಿಕ್ಸರ್‌). ಸೂರ್ಯ-ಪಂತ್‌ ಜೋಡಿಯಿಂದ 7.1 ಓವರ್‌ಗಳಲ್ಲಿ 76 ರನ್‌ ಒಟ್ಟುಗೂಡಿತು. ರಿಷಭ್‌ ಪಂತ್‌ ಆರಂಭದಲ್ಲಿ ತೀರಾ ನಿಧಾನಿಯಾಗಿದ್ದರು. ಸೂರ್ಯ ಔಟಾದ ಬಳಿಕ ಬಿರುಸಿನ ಆಟಕ್ಕಿಳಿದು 49 ರನ್‌ ಮಾಡಿದರು (33 ಎಸೆತ, 6 ಬೌಂಡರಿ, 1 ಸಿಕ್ಸರ್‌).

ನಿಸ್ಸಂಕ-ಮೆಂಡಿಸ್‌ ಬಿರುಸು
ಭಾರತದಂತೆ ಲಂಕಾ ಆರಂಭವೂ ಬಿರುಸಿನಿಂದ ಕೂಡಿತ್ತು. ಪಥುಮ್‌ ನಿಸ್ಸಂಕ-ಕುಸಲ್‌ ಮೆಂಡಿಸ್‌ 8.4 ಓವರ್‌ಗಳಿಂದ 84 ರನ್‌ ಪೇರಿಸಿದರು. ನಿಸ್ಸಂಕ 48 ಎಸೆತಗಳಿಂದ 79 (7 ಬೌಂಡರಿ, 4 ಸಿಕ್ಸರ್‌), ಮೆಂಡಿಸ್‌ 45 ರನ್‌ ಬಾರಿಸಿದರು. ಪರಾಗ್‌ ಕೇವಲ 5 ರನ್‌ ವೆಚ್ಚದಲ್ಲಿ 3 ವಿಕೆಟ್‌ ಉರುಳಿಸಿದರು.

ಸಂಕ್ಷಿಪ್ತ ಸ್ಕೋರ್‌: ಭಾರತ-7 ವಿಕೆಟಿಗೆ 213 (ಸೂರ್ಯಕುಮಾರ್‌ 58, ಪಂತ್‌ 49, ಜೈಸ್ವಾಲ್‌ 40, ಗಿಲ್‌ 34, ಪತಿರಣ 40ಕ್ಕೆ 4). ಶ್ರೀಲಂಕಾ-19.2 ಓವರ್‌ಗಳಲ್ಲಿ 170 (ನಿಸ್ಸಂಕ 79, ಮೆಂಡಿಸ್‌ 45, ಪರಾಗ್‌ 5ಕ್ಕೆ 3, ಅರ್ಷದೀಪ್‌ 24ಕ್ಕೆ 2, ಅಕ್ಷರ್‌ 38ಕ್ಕೆ 2).

ಪಂದ್ಯಶ್ರೇಷ್ಠ: ಸೂರ್ಯಕುಮಾರ್‌ ಯಾದವ್‌

Advertisement

Udayavani is now on Telegram. Click here to join our channel and stay updated with the latest news.

Next