ಅಡಿಲೇಡ್: ಪ್ರವಾಸಿ ಶ್ರೀಲಂಕಾ ವಿರುದ್ಧ ಬುಧವಾರ ನಡೆದ ಮೂರನೇ ಟ್ವೆಂಟಿ-20 ಪಂದ್ಯದಲ್ಲಿ ಆಸ್ಟ್ರೇಲಿಯ ತಂಡವು 41 ರನ್ನುಗಳಿಂದ ಜಯ ಸಾಧಿಸುವ ಮೂಲಕ ವೈಟ್‌ವಾಶ್ ಸೋಲು ತಪ್ಪಿಸಿಕೊಂಡಿತು.
ಟ್ವೆಂಟಿ-20 ಸರಣಿಯ ಮೊದಲೆರಡು ಪಂದ್ಯ ಜಯಿಸಿದ್ದ ಶ್ರೀಲಂಕಾ ತಂಡ ಈ ಪಂದ್ಯದಲ್ಲಿಯೂ ಗೆಲ್ಲುವ ವಿಶ್ವಾಸದಲ್ಲಿತ್ತು. ಹಾಗಾಗಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಆರನ್ ಫಿಂಚ್ ಮತ್ತು ಮೈಕಲ್ ಕ್ಲಿಂಗರ್ ಅವರ ಭರ್ಜರಿ ಆಟದಿಂದಾಗಿ ಆಸ್ಟ್ರೇಲಿಯ ತಂಡವು 6 ವಿಕೆಟಿಗೆ 187 ರನ್ನುಗಳ ಉತ್ತಮ ಮೊತ್ತ ಪೇರಿಸಿತು.
ಗೆಲ್ಲಲು 188 ರನ್ ಗಳಿಸುವ ಗುರಿ ಪಡೆದ ಶ್ರೀಲಂಕಾ ತಂಡ ಈ ಪಂದ್ಯದಲ್ಲಿ ಆಸ್ಟ್ರೇಲಿಯದ ದಾಳಿಯನ್ನು ಎದುರಿಸಲು ವಿಫಲವಾಗಿ 18 ಓವರ್‌ಗಳಲ್ಲಿ 146 ರನ್ನಿಗೆ ಆಲೌಟಾಗಿ ಶರಣಾಯಿತು. ಈ ಸೋಲಿನಿಂದಾಗಿ ಶ್ರೀಲಂಕಾ ತಂಡವು 2-1 ಅಂತರದಿಂದ ಟ್ವೆಂಟಿ-20 ಸರಣಿ ತನ್ನದಾಗಿಸಿಕೊಂಡಿತು.
ಫಿಂಚ್ ಮತ್ತು ಕ್ಲಿಂಗರ್ ಭರ್ಜರಿಯಾಗಿ ಆಡಿ ಆಸ್ಟ್ರೇಲಿಯಕ್ಕೆ ಉತ್ತಮ ಆರಂಭ ಒದಗಿಸಿದರು. ಅವರಿಬ್ಬರು 8.3 ಓವರ್‌ಗಳಲ್ಲಿ ಮೊದಲ ವಿಕೆಟಿಗೆ 79 ರನ್ ಪೇರಿಸಿದರು. ಈ ಹಂತದಲ್ಲಿ 32 ಎಸೆತಗಳಲ್ಲಿ 53 ರನ್ ಗಳಿಸಿದ್ದ ಫಿಂಚ್ ಔಟಾದರು. 5 ಬೌಂಡರಿ ಮತ್ತು 3 ಸಿಕ್ಸರ್ ಬಾರಿಸಿದ್ದ ಫಿಂಚ್ ಪ್ರಸನ್ನ ಅವರಿಗೆ ವಿಕೆಟ್ ಒಪ್ಪಿಸಿದರು. ಫಿಂಚ್‌ಗೆ ಉತ್ತಮ ಬೆಂಬಲ ನೀಡಿದ ಕ್ಲಿಂಗರ್ 43 ಎಸೆತಗಳಿಂದ 62 ರನ್ ಹೊಡೆದರು.
ಕಠಿನ ಗುರಿ ಇದ್ದರೂ ಶ್ರೀಲಂಕಾ ಭರ್ಜರಿಯಾಗಿ ಆಟ ಆರಂಭಿಸಿತ್ತು. ದಿಲ್ಶನ್ ಮುನವೀರ ಮತ್ತು ಉಪುಲ್ ತರಂಗ 3.4 ಓವರ್‌ಗಳಲ್ಲಿ ಮೊದಲ ವಿಕೆಟಿಗೆ 41 ರನ್ ಪೇರಿಸಿದ್ದರು. ಆದರೆ ಈ ಜೋಡಿ ಮುರಿದ ಬಳಿಕ ತಂಡ ಕುಸಿಯತೊಡಗಿತು. ಇತರ ಯಾವುದೇ ಆಟಗಾರ ಉತ್ತಮ ಜತೆಯಾಟದಲ್ಲಿ ಪಾಲ್ಗೊಳ್ಳದ ಕಾರಣ ತಂಡ 18 ಓವರ್‌ಗಳಲ್ಲಿ 146 ರನ್ನಿಗೆ ಆಲೌಟಾಯಿತು.
ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯ 6 ವಿಕೆಟಿಗೆ 187 (ಫಿಂಚ್ 53, ಕ್ಲಿಂಗರ್ 62, ಬೆನ್ ಡಂಕ್ 28, ಟ್ರ್ಯಾವಿಸ್ ಹೆಡ್ 30, ಲಸಿತ ಮಾಲಿಂಗ 35ಕ್ಕೆ 2, ಡಾಸನ್ ಶಣಕ 27ಕ್ಕೆ 2); ಶ್ರೀಲಂಕಾ 18 ಓವರ್‌ಗಳಲ್ಲಿ 146 (ದಿಲ್ಶನ್ ಮುನವೀರ 37, ಮಿಲಿಂದ ಸಿರಿವರ್ಧನ 35, ಜೇಮ್ಸ್ ಫಾಕ್ನರ್ 20ಕ್ಕೆ 3, ಆ್ಯಡಂ ಝಂಪ 25ಕ್ಕೆ 3).