Advertisement

ತಾ.ಪಂ.-ಜಿ.ಪಂ. ಮೀಸಲಾತಿ ನಿಗದಿ ವಿಳಂಬ: ಸರಕಾರಕ್ಕೆ ನ್ಯಾಯಾಂಗ ನಿಂದನೆ ತೂಗುಗತ್ತಿ

01:09 AM Jun 25, 2024 | Team Udayavani |

ಬೆಂಗಳೂರು: ನ್ಯಾಯಾಲಯಕ್ಕೆ ಕೊಟ್ಟ ಭರವಸೆಯಂತೆ ನಿಗದಿತ ಅವಧಿಯಲ್ಲಿ ಜಿ.ಪಂ. ಹಾಗೂ ತಾ.ಪಂ. ಕ್ಷೇತ್ರಗಳಿಗೆ ಮೀಸಲಾತಿ ಅಂತಿಮಗೊಳಿಸದ ರಾಜ್ಯ ಸರಕಾರದ ವಿರುದ್ಧ ರಾಜ್ಯ ಚುನಾವಣ ಆಯೋಗ ಹೈಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ.

Advertisement

ಆಯೋಗ ಸಲ್ಲಿಸಿರುವ ಈ ಸಿವಿಲ್‌ ನ್ಯಾಯಾಂಗ ನಿಂದನೆ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎನ್‌.ವಿ. ಅಂಜಾರಿಯಾ ಹಾಗೂ ನ್ಯಾ| ಕೆ.ವಿ. ಅರವಿಂದ್‌ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು.

ಈ ವೇಳೆ ರಾಜ್ಯ ಚುನಾವಣ ಆಯೋಗದ ಪರ ಹಿರಿಯ ವಕೀಲ ಕೆ.ಎನ್‌. ಫ‌ಣೀಂದ್ರ ಅವರು, ನ್ಯಾಯಾಲಯಕ್ಕೆ ನೀಡಿದ ಭರವಸೆಯಂತೆ ಸರಕಾರ ನಡೆದುಕೊಂಡಿಲ್ಲ. ಆದ್ದರಿಂದ ಸರಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿದೆ ಎಂದರು.

ಜು. 11ಕ್ಕೆ ವಿಚಾರಣೆ ಮುಂದೂಡಿಕೆ
ಸರಕಾರದ ಪರ ಹಾಜರಾದ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಪ್ರತಿಮಾ ಹೊನ್ನಾಪುರ ಪ್ರತಿಕ್ರಿಯಿಸಿ, ಈ ವಿಚಾರವಾಗಿ ಅಡ್ವೋಕೇಟ್‌ ಜನರಲ್‌ ವಾದ ಮಂಡಿಸಲಿದ್ದಾರೆ. ಹಾಗಾಗಿ ಕಾಲಾವಕಾಶ ಬೇಕು ಎಂದು ಕೋರಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ ವಿಚಾರಣೆಯನ್ನು ಜುಲೈ 11ಕ್ಕೆ ಮುಂದೂಡಿತು.

ಸರಕಾರ ಕೊಟ್ಟಿದ್ದ ಭರವಸೆ ಏನು?
ರಾಜ್ಯದ ಜಿ.ಪಂ., ತಾ.ಪಂ. ಕ್ಷೇತ್ರಗಳ ಭೌಗೋಳಿಕ ಗಡಿಗಳನ್ನು ನಿರ್ಧರಿಸುವ ಹಾಗೂ ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆ ಚುರುಕುಗೊಳಿಸಲಾಗಿದೆ.

Advertisement

ಕೊಡಗು ಜಿಲ್ಲೆ ಹೊರತುಪಡಿಸಿ ಉಳಿದ 30 ಜಿಲ್ಲೆಗಳ ಕ್ಷೇತ್ರ ಪುನರ್‌ವಿಂಗಡಣೆ ಅಧಿಸೂಚನೆಯನ್ನು ಡಿ. 19ರಂದು ಪ್ರಕಟಿಸಲಾಗುವುದು. ಮುಂದಿನ ಏಳು ದಿನಗಳಲ್ಲಿ ಕೊಡಗು ಜಿಲ್ಲೆಯ ಕ್ಷೇತ್ರ ಪುನರ್‌ವಿಂಗಡಣೆ ಅಧಿಸೂಚನೆ ಪ್ರಕಟಿಸಲಾಗುವುದು. ಇದಾದ ಏಳು ದಿನಗಳಲ್ಲಿ ಮೀಸಲಾತಿ ಕರಡು ಅಧಿಸೂಚನೆ ಹೊರಡಿಸಲಾಗುವುದು. ಮೀಸಲಾತಿ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು 10 ದಿನ ಕಾಲಾವಕಾಶ ನೀಡಲಾಗುವುದು.

ಅದಾದ ಎರಡು ವಾರಗಳಲ್ಲಿ ಮೀಸಲಾತಿ ಅಂತಿಮಗೊಳಿಸಲಾಗುವುದು ಎಂದು ಸರಕಾರವು 2023ರ ಡಿ. 19ರಂದು ಕೋರ್ಟ್‌ಗೆ ಭರವಸೆ ಕೊಟ್ಟಿತ್ತು. ಈ ಕುರಿತು ನಿರ್ದೇಶನ ನೀಡಿದ್ದ ನ್ಯಾಯಾಲಯವು ಇದನ್ನು ದಾಖಲಿಸಿಕೊಂಡು, ಸರಕಾರಕ್ಕೆ ನಿರ್ದೇಶನ ನೀಡಿದ್ದ ನ್ಯಾಯಾಲಯ ಅರ್ಜಿಯನ್ನು ಅಂದೇ ಇತ್ಯರ್ಥಪಡಿಸಿತ್ತು. ಜತೆಗೆ ಸರಕಾರ ನೀಡಿದ ಭರವಸೆಯಂತೆ ನಡೆದುಕೊಳ್ಳದಿದ್ದರೆ ಚುನಾವಣ ಆಯೋಗವು ನ್ಯಾಯಾಲಯದ ಮೊರೆ ಹೋಗಬಹುದು ಎಂದಿತ್ತು.

ಈಗ ರಾಜ್ಯ ಸರಕಾರ ನ್ಯಾಯಾಲಯಕ್ಕೆ ನೀಡಿದ ಭರವಸೆಯಂತೆ ತಾ.ಪಂ., ಜಿ.ಪಂ. ಕ್ಷೇತ್ರಗಳ ಮೀಸಲಾತಿ ಅಂತಿಮಗೊಳಿಸಿಲ್ಲ. 2023ರ ಡಿ. 19ರಂದು ನ್ಯಾಯಾಲಯ ನೀಡಿದ ಅಂತಿಮ ಆದೇಶ ಪಾಲಿಸದ ರಾಜ್ಯ ಸರಕಾರದ ವಿರುದ್ಧ ನ್ಯಾಯಾಂಗ ನಿಂದನೆ ಆರೋಪದಡಿ ಕ್ರಮ ಜರುಗಿಸಬೇಕು ಎಂದು ಚುನಾವಣ ಆಯೋಗ ಮನವಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next