Advertisement

ತ್ರಿವೇಣಿ ಸಂಗಮದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ

03:49 PM May 06, 2023 | Team Udayavani |

ತಿ.ನರಸೀಪುರ: ದಕ್ಷಿಣ ಕಾಶಿ, ಕುಂಭಮೇಳ ಹಾಗೂ ಪಂಚಲಿಂಗ ದರ್ಶನ ಮಹೋತ್ಸವದ ಪ್ರವಾಸಿ ಕ್ಷೇತ್ರಗಳ ತವರೂರು ಎನಿಸಿರುವ ತ್ರಿವೇಣಿ ಸಂಗಮದ ತಿರಮಕೂಡಲು ನರಸೀಪುರ ಪರಿಶಿಷ್ಟ ಜಾತಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ವಿಜಯದ ಪತಾಕೆ ಹಾರಿಸಲು ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಪಕ್ಷಗಳು ಪ್ರಯತ್ನಿಸುತ್ತಿದ್ದು ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

Advertisement

ಜೆಡಿಎಸ್‌ ಅಭ್ಯರ್ಥಿ, ಶಾಸಕ ಅಶ್ವಿ‌ನ್‌ಕುಮಾರ್‌, ಕಾಂಗ್ರೆಸ್‌ ಉಮೇದುವಾರ, ಮಾಜಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಬಿಜೆಪಿಯ ಡಾ.ರೇವಣ್ಣಅವರ ಮಧ್ಯೆ ತ್ರಿಕೋನ ಸ್ಪರ್ಧೆ ಇದೆ. ಕಣದಲ್ಲಿ ಒಟ್ಟು 11 ಮಂದಿ ಇದ್ದಾರೆ.

ಶಾಸಕ ಅಶ್ವಿ‌ನ್‌ಕುಮಾರ್‌ ಕ್ಷೇತ್ರದಲ್ಲಿ ತಾವು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತ ಯಾಚಿಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಅವರು ಗೆದ್ದು ಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಈ ಬಾರಿ ಮರು ಆಯ್ಕೆ ಬಯಸಿದ್ದಾರೆ.

ಕಾಂಗ್ರೆಸ್ಸಿನ ಡಾ.ಎಚ್‌.ಸಿ.ಮಹದೇವಪ್ಪ ಹಿರಿಯ ರಾಜಕಾರಣಿ . ಶಾಸಕರು, ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಕ್ಷೇತ್ರದಲ್ಲಿ ಶಾಸಕರು, ಸಚಿವರಾಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ತಮ್ಮ ಅಧಿಕಾರ ಅವಧಿಯಲ್ಲಿ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಅವರು ಮತ ಯಾಚಿಸುತ್ತಿದ್ದಾರೆ.

ಬಿಜೆಪಿ ಉಮೇದುವಾರ ಡಾ.ರೇವಣ್ಣ ಅವರು ವೃತ್ತಿಯಲ್ಲಿ ವೈದ್ಯರಾಗಿದ್ದರು. ಈ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿ ಸರ್ಕಾರಿ ಸೇವೆಗೆ ರಾಜೀನಾಮೆ ನೀಡಿ ಕಣಕ್ಕೆ ಧುಮುಕಿದ್ದಾರೆ. ಕ್ಷೇತ್ರದಲ್ಲಿ ವೈದ್ಯರಾಗಿ ತಾವು ಸಲ್ಲಿಸಿರುವ ಸೇವೆಯಿಂದ ಗಮನ ಸೆಳೆದಿದ್ದಾರೆ. ಈ ಕ್ಷೇತ್ರದಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್ಸಿಗೆ ಸಂಘಟನೆಯ ಬಲವಿದೆ.

Advertisement

ಬಿಜೆಪಿ 1999ರಲ್ಲಿ ಈ ಕ್ಷೇತ್ರದಲ್ಲಿ ಜಯ ಸಾಧಿಸಿತ್ತು. ಅನಂತರದ ವರ್ಷಗಳಲ್ಲಿ ಬಿಜೆಪಿ ಸಂಘಟನೆ ಇಲ್ಲಿ ದುರ್ಬಲವಾಯಿತು. ಮಾಜಿ ಸಚಿವ ಡಾ.ಮಹದೇವಪ್ಪ ಅವರು ಈ ಕ್ಷೇತ್ರವನ್ನು ಐದು ಬಾರಿ ಪ್ರತಿನಿಧಿಸಿದ್ದಾರೆ. ಡಾ.ಮಹದೇವಪ್ಪ ಅವರು ಇಲ್ಲಿ ಜನತಾಪಕ್ಷ, ಜನತಾದಳ, ಜೆಡಿಎಸ್‌, ಕಾಂಗ್ರೆಸ್‌ನಿಂದ ಗೆದ್ದಿದ್ದಾರೆ.

ತಿ.ನರಸೀಪುರ ಕ್ಷೇತ್ರದ ಜನತೆ ಆಶೀರ್ವಾದದಿಂದ ಮೂರು ಬಾರಿ ಮಂತ್ರಿಯಾಗಿ ವಿವಿಧ ಖಾತೆಗಳನ್ನು ನಿರ್ವಹಿಸಿ ಕ್ಷೇತ್ರದಲ್ಲಿ ನೂರಾರು ಕೋಟಿ ರೂ. ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ. ರಾಜ್ಯದಲ್ಲಿನ ರಸ್ತೆಗಳ ಸಮಗ್ರ ಅಭಿವೃದ್ಧಿ ಮಾಡಿದ್ದೇನೆ. ಕ್ಷೇತ್ರದ ಜನತೆಯ ವಿಶ್ವಾಸ, ನಂಬಿಕೆ ನನ್ನ ಮೇಲಿದೆ. ಈ ಬಾರಿ ಹೆಚ್ಚಿನ ಮತಗಳಿಂದ ಗೆಲ್ಲಿಸುವ ನಂಬಿಕೆ ಇದೆ. ಡಾ. ಎಚ್‌.ಸಿ. ಮಹದೇವಪ್ಪ, ಕಾಂಗ್ರೆಸ್‌ ಅಭ್ಯರ್ಥಿ

ಜನರ ಏಳಿಗೆ ಹಾಗೂ ಆಶೋತ್ತರಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿ ಕೆಲಸ ಮಾಡಿದ್ದೇನೆ. ಕೊರೊನಾ ಅವಧಿಯಲ್ಲಿ ಕ್ಷೇತ್ರಾದ್ಯಂತ ಸಮರ್ಪಕ ನಿರ್ವಹಣೆ, ಚಿರತೆ ದಾಳಿ ವೇಳೆ ಜನರ ಭಾವನೆಗಳಿಗೆ ಸ್ಪಂದಿಸಿ ಕೆಲಸ ಮಾಡಿದ್ದೇನೆ. ಜನರು ನನ್ನ ಮೇಲೆ ಪ್ರೀತಿ, ಅಭಿಮಾನ, ವಿಶ್ವಾಸವಿಟ್ಟಿದ್ದಾರೆ. ಈ ಬಾರಿಯೂ ಅದೇ ವಿಶ್ವಾಸದಿಂದ ನನಗೆ ಗೆಲುವು ಸಿಗಲಿದೆ. ಎಂ.ಅಶ್ವಿ‌ನ್‌ ಕುಮಾರ್‌, ಜೆಡಿಎಸ್‌ ಅಭ್ಯರ್ಥಿ

ಈ ಕ್ಷೇತ್ರದಲ್ಲಿ ಹೊರಗಿನವರು ಗೆದ್ದಿದ್ದಾರೆ. ಸ್ಥಳೀಯರಿಗೆ ಅವಕಾಶ ಸಿಕ್ಕಿಲ್ಲ. ನಾನು ಈ ಕ್ಷೇತ್ರದ ಮಗ. ಜತೆಗೆ ವೈದ್ಯಾಧಿಕಾರಿಯಾಗಿ ಜನರಿಗೆ ನೀಡಿರುವ ಸೇವೆ ಜನರಲ್ಲಿ ನನ್ನ ಮೇಲಿನ ವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಪಕ್ಷ ನನ್ನ ಮೇಲಿನ ವಿಶ್ವಾಸದೊಂದಿಗೆ ಟಿಕೆಟ್‌ ನೀಡಿದೆ. ಹೋದೆಡೆಯೆಲ್ಲ ಜನರು ಅಭಿಮಾನ ತೋರಿ ಸ್ವಾಗತಿಸುತ್ತಿರುವುದು ಗೆಲುವಿನ ಮುನ್ನುಡಿಗೆ ಸಾಕ್ಷಿಯಾಗಿದೆ. ಡಾ.ಎಂ.ರೇವಣ್ಣ, ಬಿಜೆಪಿ ಅಭ್ಯರ್ಥಿ

ಎಸ್‌.ಬಿ.ಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next