Advertisement
ಟಿ. ಮೋಹನದಾಸ್ ಪೈ ಸಂಪಾದಕ ರಲ್ಲದಿದ್ದರೂ ದಿನ ಪತ್ರಿಕೆ, ಮಾಸ ಪತ್ರಿಕೆ ಹಾಗೂ ವಾರ ಪತ್ರಿಕೆ ಕುರಿತು ಆಳವಾದ ಅಧ್ಯಯನ ಮಾಡಿ ಯಾವ ಸುದ್ದಿ ಎಷ್ಟರ ಮಟ್ಟಿಗೆ ಹಾಗೂ ಯಾವ ಭಾಗಕ್ಕೆ ಮಹತ್ವ ಎಂಬುದರ ಬಗ್ಗೆ ಸ್ಪಷ್ಟತೆ ಹೊಂದಿರುತ್ತಿದ್ದರು. ಆವರ ಜತೆ ಮಾತನಾಡುವುದರಿಂದ ಹೊಸ ಹೊಸ ವಿಷಯಗಳ ಬಗ್ಗೆ ತಿಳಿದುಕೊಳ್ಳುವುದಕ್ಕೆ ಸಾಧ್ಯವಾಗುತ್ತಿತ್ತು.
ಮೋಹನದಾಸ್ ಪೈ ಜಗತ್ತಿನ ವಿವಿಧ ದೇಶಗಳಿಗೆ ಪ್ರವಾಸ ಮಾಡುತ್ತಿದ್ದರು. ಅಲ್ಲಿನ ಪತ್ರಿಕೆ, ವಿದ್ಯುನ್ಮಾನ ಮಾಧ್ಯಮ, ರೇಡಿಯೋಗಳಲ್ಲಿ ಪ್ರಸಾರವಾಗುವ ಸುದ್ದಿಗಳ ಬಗ್ಗೆ ಸದಾ ಗಮನಹರಿಸುತ್ತಿದ್ದರು. ಅವರಲ್ಲಿನ ವಿಶೇಷ ಗುಣ ಎಂದರೆ ಅವರಿಗೆ ಪತ್ರಿಕೋದ್ಯಮದ ಬಗ್ಗೆ ಸ್ಪಷ್ಟ ಕಲ್ಪನೆ ಇತ್ತು. ಹೀಗಾಗಿಯೇ ಮಣಿಪಾಲದಂತಹ ಸಣ್ಣ ಪ್ರದೇಶದಲ್ಲಿ 50 ವರ್ಷಗಳ ಹಿಂದೆಯೇ ಪತ್ರಿಕೆ ಆರಂಭಿಸುವ ಧೈರ್ಯ ಮಾಡಿದರು. ಅವರಿಗೆ ಹೆಗಲು ಕೊಟ್ಟು ದುಡಿದವರು ಟಿ. ಸತೀಶ್ ಪೈ ಅವರು. ಎಂಎ ಮುಗಿಸಿದ ಬಳಿಕ ನಾನು ಉದಯವಾಣಿಗೆ ಬೆಂಗಳೂರಿನ ವರದಿಗಾರನಾಗಿ ನೇಮಕಗೊಂಡೆ. ಪ್ರತಿದಿನ ಅವರು ಸಂಜೆ 7 ಗಂಟೆಗೆ ದೂರವಾಣಿ ಕರೆ ಮಾಡಿ ಆ ದಿನದ ಪ್ರಮುಖ ಸುದ್ದಿ, ಬೆಂಗಳೂರಿಗೆ ಯಾವ ಸುದ್ದಿ ಮುಖ್ಯ, ಕರಾವಳಿ ಭಾಗಕ್ಕೆ ಯಾವುದು ಪ್ರಮುಖ ಮುಂತಾಗಿ ಚರ್ಚೆ ಮಾಡುತ್ತಿದ್ದರು.
Related Articles
ಬೆಂಗಳೂರಿನ ಆವೃತ್ತಿ ಪ್ರಾರಂಭಿಸಬೇಕು ಎಂದು ಮೊದಲಿಗೆ ಯೋಚಿಸಿದವರೂ ಮೋಹನದಾಸ್ ಪೈ ಅವರೇ.
Advertisement
ಸ್ವಂತ ಮುದ್ರಣ ಘಟಕ ಪ್ರಾರಂಭ ದಲ್ಲಿ ಕಷ್ಟ ಎಂದು ಐದಾರು ಮುದ್ರಣ ಘಟಕಗಳಿಗೆ ಭೇಟಿ ನೀಡಿ ನಮ್ಮ ಪತ್ರಿಕೆ ಮುದ್ರಣ ಮಾಡಿಕೊಡುವ ಹಾಗೂ ನಮ್ಮ ನಿರೀಕ್ಷೆಗೆ ತಕ್ಕಂತೆ ಮುದ್ರಿಸಿಕೊಡುವ ಸಾಮರ್ಥ್ಯ ಇರುವ ಬಗ್ಗೆ ಖಾತರಿಪಡಿಸಿಕೊಂಡು ಸಂಜೆವಾಣಿಯಲ್ಲಿ ಮುದ್ರಣಕ್ಕೆ ಒಪ್ಪಿಕೊಂಡರು.
ಆಗೆಲ್ಲ ಉದಯವಾಣಿ ಬೆಂಗಳೂರಿನಲ್ಲಿ ಆವೃತ್ತಿ ಪ್ರಾರಂಭಿಸಲಿದೆ ಎಂದಾಗ ಕೆಲವರು ಅಚ್ಚರಿಗೊಂಡರು. ಕೆಲವರು ಕೊಂಕು ಮಾತನಾಡಿದರು. ಆ ಬಗ್ಗೆ ನಾನು ಮೋಹನದಾಸ್ ಪೈ ಅವರ ಗಮನಕ್ಕೆ ತಂದಾಗ, ಆ ಬಗ್ಗೆ ತಲೆಕಡಿಸಿಕೊಳ್ಳುವುದು ಬೇಡ. ಬೆಂಗಳೂರು ಈಗ ಸಣ್ಣ ಊರಲ್ಲ, ಕರಾವಳಿ ಭಾಗದವರು ಮುಂಬಯಿಗೆ ಹೋಗಿ ಹೊಟೇಲ್, ವ್ಯಾಪಾರ ಮಾಡಿದಂತೆ ಬೆಂಗ ಳೂರಿಗೆ ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಿದ್ದಾರೆ. ನಮ್ಮ ಭಾಗದಲ್ಲಿ ಆರಂಭವಾದ ಸಿಂಡಿಕೇಟ್, ಕೆನರಾ, ವಿಜಯ, ಕರ್ಣಾಟಕ ಬ್ಯಾಂಕ್‌ಗಳ ಶಾಖೆಗಳೂ ಇವೆ. ಮುಂದೆ ಹಳೆ ಮೈಸೂರು ಭಾಗ ಹಾಗೂ ಉತ್ತರ ಕರ್ನಾಟಕ ಭಾಗಕ್ಕೆ ನಾವು ತಲುಪಲೇಬೇಕು. ಹೀಗಾಗಿ, ಈಗಿನಿಂದಲೇ ನಮ್ಮ ಪ್ರಯತ್ನ ಇರಬೇಕು ಎಂದು ಧೈರ್ಯ ತುಂಬಿದರು.
1992ರಲ್ಲಿ ಬೆಂಗಳೂರಿನಲ್ಲಿ ಆವೃತ್ತಿಯೂ ಪ್ರಾರಂಭ ವಾಯಿತು. ಮೋಹನದಾಸ್ ಪೈ ಅವರು ಹೇಳಿದಂತೆ ಪತ್ರಿಕೆಗೆ ಉತ್ತಮ ಸ್ಪಂದನೆಯೂ ದೊರಕಿತು. ಇಂದು ಉದಯವಾಣಿ ರಾಜ್ಯ ಮಟ್ಟದಲ್ಲಿ ಪ್ರಭಾವಿ ಪತ್ರಿಕೆಯಾಗಿ ರೂಪುಗೊಂಡಿರುವುದರ ಹಿಂದೆ ಅವರ ಶ್ರಮ ಇದೆ. ಸುದ್ದಿ ಆಯ್ಕೆ ಮಾಡುವಲ್ಲಿ ಹಾಗೂ ಸುದ್ದಿಗಳ ಮಹತ್ವ ಕುರಿತು ಅವರು ಸೂಕ್ಷ್ಮಮತಿ. ಒಬ್ಬ ಸಂಪಾದಕರಿಗೆ ಇರಬೇಕಾದ ಎಲ್ಲವೂ ಅರ್ಹತೆಗಳು ಅವರಲ್ಲಿತ್ತು.
ಮುಖಪುಟ, ಶೀರ್ಷಿಕೆ, ವಿದೇಶ ಸುದ್ದಿ, ವಾಣಿಜ್ಯ ಸುದ್ದಿ, ರಾಜಕೀಯ, ಸಿನೆಮಾ, ಕ್ರೀಡೆ ಹೀಗೆ ಎಲ್ಲ ವಿಭಾಗಗಳ ಬಗ್ಗೆಯೂ ಅವರಿಗೆ ನಿಖರ ಮಾಹಿತಿ ಇರುತ್ತಿತ್ತು. ಸದಾ ಓದು ಅವರ ವಿಶೇಷ. ಉದಯವಾಣಿ ಬಿಟ್ಟು ಬೇರೆ ಸಂಸ್ಥೆಯಲ್ಲಿ ದುಡಿದರೂ ನನ್ನ ಹಾಗೂ ಮೋಹನದಾಸ್ ಪೈ ಅವರ ನಡುವಿನ ಆತ್ಮೀಯತೆ, ಸಂಬಂಧ ಹಿಂದಿನಂತೆಯೇ ಇತ್ತು.
ಎರಡು ತಿಂಗಳ ಹಿಂದೆ ನನ್ನೂರಿಗೆ ಹೋಗಿದ್ದಾಗ ಮೋಹನದಾಸ್ ಪೈ ಅವರನ್ನು ಭೇಟಿ ಮಾಡಲು ಅಪೇಕ್ಷಿಸಿದಾಗ ಟಿ. ಸತೀಶ್ ಪೈ ಅವರು ಬನ್ನಿ ಎಂದು ಕರೆದುಕೊಂಡು ಹೋದರು. ಜತೆಗೆ ಕಾಫಿ ಕುಡಿದು ಹಳೆಯ ನೆನಪು ಸ್ಮರಿಸಿಕೊಂಡೆವು.
ಒಟ್ಟಾರೆ, ಟಿ.ಮೋಹನದಾಸ್ ಪೈ ಒಬ್ಬ ವ್ಯಕ್ತಿಯಲ್ಲ ಶಕ್ತಿ. ಅವರ ಜ್ಞಾನ, ಅನುಭವ ಆಪಾರ. ಕಿರಿಯರಿಗೆ ಮಾರ್ಗದರ್ಶನ ಹಾಗೂ ಹೊಸತನದ ಕಲಿಕೆಗೆ ಸದಾ ಉತ್ತೇಜಿಸುತ್ತಿದ್ದರು. ಅವರು ತೆರೆಮರೆಯಲ್ಲಿದ್ದು ಕೊಂಡೇ ಸುದ್ದಿಮನೆ ಬೆಳಗಿದ ಅಕ್ಷರ ಸಂತ.
-ಈಶ್ವರ ದೈತೋಟ, ವಿಶ್ರಾಂತ ಸಂಪಾದಕರು