ಬೆಂಗಳೂರು: ಮುಡಾ ಹಗರಣದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ಶನಿವಾರ (ಆ 17) ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ಬೆನ್ನಲ್ಲೇ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಬ್ರಾಹಂ ‘ಸೋಮವಾರ ಕೇವಿಯಟ್ ಹಾಕುತ್ತೇನೆ. ಸಣ್ಣ ಸ್ಪಷ್ಟನೆಗಾಗಿ ನನ್ನನ್ನು ರಾಜ್ಯಪಾಲರು ಕರೆದಿದ್ದರು. ಭೇಟಿಯಾಗಿ ಆ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ’ ಎಂದು ತಿಳಿಸಿದರು.
‘ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಪ್ರತಿಯನ್ನು ಕೋರ್ಟ್ಗೆ ಸಲ್ಲಿಸುತ್ತೇನೆ. ಕೋರ್ಟ್ ನಿರ್ದೇಶನದಂತೆ ಎಫ್ಐಆರ್ ದಾಖಲಾಗಲಿದ್ದು, ಈಗಾಗಲೆ ವಿಚಾರ ಕೋರ್ಟ್ನಲ್ಲಿದೆ. ಲೋಕಾಯುಕ್ತಕ್ಕೆ ಪ್ರತಿಯನ್ನು ಕಳಿಸಲಾಗುತ್ತದೆ’ ಎಂದರು.
‘ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿ ಎಂದು ನಾವು ಕೇಳಿಲ್ಲ, ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ ಎಂದು ಕೇಳಿದ್ದೆವು. ಅಕ್ರಮವನ್ನ ಮನವರಿಕೆ ಮಾಡಿದ್ದು, ನಮ್ಮ ಮನವಿಯಂತೆ ರಾಜ್ಯಪಾಲರು ಅನುಮತಿ ಕೊಟ್ಟಿದ್ದಾರೆ.ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಕ್ಕೆ ರಾಜ್ಯಪಾಲರಿಗೆ ಧನ್ಯವಾದ ಸಲ್ಲಿಸಿದ್ದೇನೆ’ ಎಂದು ಅಬ್ರಾಹಂ ಹೇಳಿದರು.
ಎಸ್. ಎಂ. ಕೃಷ್ಣ,ಧರಂ ಸಿಂಗ್, ಎಚ್.ಡಿ.ಕುಮಾರಸ್ವಾಮಿ,ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ ಅವರ ಮೇಲೂ ಹಿಂದೆ ದೂರು ನೀಡಿದ್ದು,ಆ ಕೇಸ್‌ಗಳಲ್ಲಿ ಅನುಮತಿ ನೀಡದ ವಿಚಾರಕ್ಕೆ ಪ್ರತಿಕ್ರಿಯಿಸಿ ”ಅದು ನನಗೆ ಸಂಬಂಧ ಪಡದ ವಿಚಾರ. ರಾಜಕೀಯ ಆರೋಪಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ” ಎಂದು ಅಬ್ರಾಹಂ ಹೇಳಿದರು.
ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಅಬ್ರಹಾಂ ಸಲ್ಲಿಸಿದ ಅರ್ಜಿಯ ಆಧಾರದ ಮೇಲೆ ರಾಜ್ಯಪಾಲ ಗೆಹ್ಲೋಟ್ ಅವರು ಜುಲೈ 26 ರಂದು “ಶೋಕಾಸ್ ನೋಟಿಸ್” ಜಾರಿ ಮಾಡಿ ಪ್ರಾಸಿಕ್ಯೂಷನ್‌ಗೆ ಏಕೆ ಅನುಮತಿ ನೀಡಬಾರದು ಎಂಬುದಕ್ಕೆ ಏಳು ದಿನಗಳೊಳಗೆ ತಮ್ಮ ವಿರುದ್ಧದ ಆರೋಪಗಳಿಗೆ ಉತ್ತರವನ್ನು ಸಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೂಚಿಸಿದ್ದರು.