ಬೆಂಗಳೂರು: ಪರಿಷತ್ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದ ಬೆನ್ನಲ್ಲೇ ಜೆಡಿಎಸ್ ಕೂಡಾ ಟಿಕೆಟ್ ಫೈನಲ್ ಮಾಡಿದೆ. ಟಿ.ಎ.ಶರವಣಗೆ ಜೆಡಿಎಸ್ ಟಿಕೆಟ್ ನೀಡಲಾಗಿದೆ.
ಜೆಡಿಎಸ್ ನಲ್ಲಿ ಒಂದು ಕ್ಷೇತ್ರದ ಟಿಕೆಟ್ ಗಾಗಿ ಹತ್ತಕ್ಕೂ ಹೆಚ್ಚು ಮಂದಿ ಕಸರತ್ತು ನಡೆಸಿದ್ದರು. ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಟಿ.ಎ.ಶರವಣ ಮತ್ತು ವೀರೆಂದ್ರ ಪ್ರಬಲ ಅಭ್ಯರ್ಥಿಗಳಾಗಿದ್ದರು. ಆದರೆ ಟಿ.ಎ.ಶರವಣಗೆ ಟಿಕೆಟ್ ಅಂತಿಮಗೊಳಿಸಲಾಗಿದೆ.
ಇದನ್ನೂ ಓದಿ:ಬದಲಾಯ್ತು ಬಿಜೆಪಿ ಪಟ್ಟಿ: ಲಕ್ಷ್ಮಣ ಸವದಿ, ಹೇಮಲತಾ ನಾಯಕ್ ಗೆ ಪರಿಷತ್ ಟಿಕೆಟ್
ನಾಮಪತ್ರ ಸಲ್ಲಿಕೆಗೆ ಮಂಗಳವಾರ ಕೊನೆಯ ದಿನವಾದರೂ ಸೋಮವಾರ ತಡರಾತ್ರಿವರೆಗೆ ಜೆಡಿಎಸ್ ಅಭ್ಯರ್ಥಿ ಅಂತಿಮಗೊಂಡಿರಲಿಲ್ಲ. ಒಂದು ಸ್ಥಾನಕ್ಕೆ ಹಲವು ಮಂದಿ ಆಕಾಂಕ್ಷಿಗಳು ಇರುವುದು ಪಕ್ಷದ ವರಿಷ್ಠರ ತಲೆಬಿಸಿಗೆ ಕಾರಣವಾಗಿತ್ತು. ಈ ವಿಚಾರವಾಗಿ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾತನಾಡಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, “2-3 ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ. ಮಂಗಳವಾರ ಬೆಳಗ್ಗೆ ಪಟ್ಟಿ ಬಿಡುಗಡೆ ಮಾಡುತ್ತೇವೆ. ಸಿ.ಎಂ.ಇಬ್ರಾಹಿಂ ಅವರೂ ಸಹ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್‌ನಲ್ಲಿ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದಿದ್ದಾರೆ. ಈ ಬಗ್ಗೆ ಅವರೂ ನಮ್ಮ ಬಳಿ ಚರ್ಚಿಸಿದರು. ಅವರೂ ಕೂಡ ದೇವೇಗೌಡರ ತೀರ್ಮಾನಕ್ಕೆ ಬದ್ಧ ಎಂದಿದ್ದಾರೆ. ಮುಖಂಡರಾದ ಟಿ.ಎ ಶರವಣ ಹಾಗೂ ವೀರೇಂದ್ರ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಹತ್ತು ಮಂದಿ ಟಿಕೆಟ್ ನೀಡಬೇಕು ಎಂದು ಒತ್ತಡ ಹೇರಿದ್ದರು’ ಎಂದು ವಿವರಿಸಿದ್ದರು.
ಬಿಜೆಪಿ ಟಿಕೆಟ್ ಫೈನಲ್: ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳಾಗಿ ಲಕ್ಷ್ಮಣ ಸವದಿ, ಹೇಮಲತಾ ನಾಯಕ್, ಕೇಶವ ಪ್ರಸಾದ್ ಮತ್ತು ಚಲವಾದಿ ನಾರಾಯಣ ಸ್ವಾಮಿಗೆ ಟಿಕೆಟ್ ಅಂತಿಮ ಮಾಡಲಾಗಿದೆ. ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಬಸವರಾಜ ಹೊರಟ್ಟಿಯವರಿಗೆ ಟಿಕೆಟ್ ನೀಡಲಾಗಿದೆ.
ಕಾಂಗ್ರೆಸ್ ಟಿಕೆಟ್: ಪ್ರತಿಪಕ್ಷ ಕಾಂಗ್ರೆಸ್ ಹಿಂದುಳಿದ ವರ್ಗದ ಯಾದವ ಹಾಗೂ ಅಲ್ಪಸಂಖ್ಯಾತ ವರ್ಗದ ಮುಸ್ಲಿಂ ಅಭ್ಯರ್ಥಿಗೆ ಮಣೆ ಹಾಕಿದೆ. ಪಕ್ಷದ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಅಬ್ದುಲ್ ಜಬ್ಟಾರ್ ಜತೆಗೆ ಅಚ್ಚರಿ ಅಭ್ಯರ್ಥಿಯಾಗಿ ಹಿಂದುಳಿದ ವರ್ಗದ ಎಂ. ನಾಗರಾಜ್ ಯಾದವ್ ಅವರಿಗೆ ಟಿಕೆಟ್ ನೀಡಿದೆ. ಜಬ್ಟಾರ್ ಈ ಹಿಂದೆ ವಿಧಾನ ಪರಿಷತ್ ಸದಸ್ಯರಾಗಿದ್ದರು. ನಾಗರಾಜ್ ಯಾದವ್ ಬಿಎಂಟಿಸಿ ಅಧ್ಯಕ್ಷರಾಗಿ, ಕೆಪಿಸಿಸಿ ವಕ್ತಾರರಾಗಿ, ಪುಲಕೇಶಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು.