ವಿಜಯಪುರ: ಕಾಂಗ್ರೆಸ್ ಪಕ್ಷದಲ್ಲಿ ದಲಿತ ಸಿಎಂ ಸ್ಥಾನ ಸಿಗುವ ಹಂತದಲ್ಲಿ ದಲಿತ ನಾಯಕತ್ವವನ್ನು ವ್ಯವಸ್ಥಿತ ದಮನ ಮಾಡುತ್ತಲೇ ಬರಲಾಗುತ್ತಿದೆ. ಆದರೆ ಬಿಜೆಪಿ ಪಕ್ಷ ಹೋರಾಟಕ್ಕೆ ಅವಕಾಶ ಇಲ್ಲದಂತೆ, ಯಾರನ್ನೂ ಕೇಳದೇ, ಹೇಳದೇ ದಲಿತರಿಗೆ ರಾಷ್ಟ್ರಪತಿ ಹುದ್ದೆಯಂತಹ ಅವಕಾಶ ನೀಡುತ್ತಿದೆ ಎಂದು ಬಿಜೆಪಿ ಎಸ್ಪಿ ಮೋರ್ಚಾ ರಾಜ್ಯಾಧ್ಯಕ್ಷ, ಮೇಲ್ಮನೆ ಶಾಸಕ ಚಲವಾದಿ ನಾರಾಯಣಸ್ವಾಮಿ ಹೇಳಿದರು.
ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಬಸವಲಿಂಗಪ್ಪ ಅವರಿಗೆ ಮುಖ್ಯಮಂತ್ರಿ ಅವಕಾಶ ತಪ್ಪಿಸಿದ್ದು ವೀರಪ್ಪ ಮೊಯ್ಲಿ ಮಾಡಿದ ಕುತಂತ್ರ. ಜಿ.ಪರಮೇಶ್ವರ ಅವರಿಗೆ ಎರಡು ಬಾರಿ ರಾಜ್ಯದಲ್ಲಿ ಪಕ್ಷ ಕಟ್ಟುವ ಜವಾಬ್ದಾರಿ ನೀಡಿದರೂ ವ್ಯವಸ್ಥಿತ ಕುತಂತ್ರದಿಂದ ಅವರನ್ನು ಸೋಲಿಸಿದ್ದು ಸಿದ್ದರಾಮಯ್ಯ. ಜೊತೆಗೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲಾಯಿತು. ಈಗ ಸಂಸತ್ ವಿಪಕ್ಷ ನಾಯಕ ಸ್ಥಾನ ನೀಡಿದ್ದರೆ ಅದಕ್ಕೆ ಕಾರಣ ದಲಿತರಿಗೆ ನೀಡಿದ ಅವಕಾಶವಲ್ಲ. ಬದಲಾಗಿ ಕಾಂಗ್ರೆಸ್ ಪಕ್ಷದಲ್ಲಿ ಈಗ ದಲಿತ ನಾಯಕರೇ ಇಲ್ಲದ ಅನಿವಾರ್ಯ ಕಾರಣದಿಂದ ಎಂದು ದೂರಿದರು.
ಹೀಗೆ ಕಾಂಗ್ರೆಸ್ ದಲಿತ ನಾಯಕತ್ವವನ್ನು ತುಳಿಯುವ ವ್ಯವಸ್ಥಿತ ಹುನ್ನಾರ ನಡೆಯುತ್ತಲೇ ಇದೆ. ಕೇವಲ ಆರು ವರ್ಷದ ಹಿಂದೆ ಪಕ್ಷಕ್ಕೆ ಬಂದ ಸಿದ್ದರಾಮಯ್ಯ ಇಡೀ ದಲಿತ ನಾಯಕತ್ವವನ್ನೇ ದಮನ ಮಾಡಿ ಮುಖ್ಯಮಂತ್ರಿಯಾದರು ಎಂದು ಹರಿಹಾಯ್ದರು.
ಬಿಜೆಪಿ ಪಕ್ಷದಲ್ಲಿ ಹೋರಾಟ ಮಾಡದೇ, ಆಗ್ರಹ ಮಾಡದೇ ಗೋವಿಂದ ಕಾರಜೋಳ ಅವರನ್ನು ಡಿಸಿಎಂ ಮಾಡಿದೆ. ದೇಶದ ಅತ್ಯುನ್ನತ ರಾಷ್ಟ್ರಪತಿ ಹುದ್ದೆಯಿಂದ ವಿವಿಧ ರಾಜ್ಯಗಳಲ್ಲಿ ದಲಿತರಿಗೆ ಹತ್ತು ಹಲವು ರಾಜಕೀಯ ಅಧಿಕಾರ ನೀಡಿದೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ 60 ಸ್ಥಾನ ಗೆಲ್ಲುವುದೂ ಕಷ್ಟವಾಗಿರುವ ದುಸ್ಥಿತಿ ಇದ್ದರೂ ಇಲ್ಲದ ಮುಖ್ಯಮಂತ್ರಿ ಸ್ಥಾನಕ್ಕೆ ಡಜನ್ ನಾಯಕರು ಈಗಲೇ ಕಿತ್ತಾಟ ಆರಂಭಿಸಿದ್ದಾರೆ. ಆದರೆ ಬಿಜೆಪಿ 150 ಸ್ಥಾನಕ್ಕಿಂತ ಹೆಚ್ಚಿನ ಸ್ಥಾನ ಪಡೆಯುವ ಮೂಲಕ ರಾಜ್ಯದಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ಬರಲಿದೆ ಎಂದರು.