Advertisement

ಅಕ್ಷರ ಜಾತ್ರೆಗೆ ಅಚ್ಚುಕಟ್ಟು ವ್ಯವಸ್ಥೆ

02:35 AM Jan 02, 2019 | Team Udayavani |

ಧಾರವಾಡ: “ಅಖೀಲ ಭಾರತ 84 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲಾಡಳಿತ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಮಾಡಿಕೊಂಡಿರುವ ಸಿದ್ಧತೆಗಳು ತೃಪ್ತಿಕರವಾಗಿವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ. ದೇಶಪಾಂಡೆ ಹೇಳಿದರು.

Advertisement

ಇಲ್ಲಿಯ ಕೃಷಿ ವಿವಿ ಆವರಣದಲ್ಲಿ ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆ, ಪುಸ್ತಕ ಮಳಿಗೆ ಹಾಗೂ ಬೋಜನ ಸಭಾ ಸಿದ್ಧತೆಗೆಳನ್ನು ಪರಿಶೀಲಿಸಿದ ಬಳಿಕ ಜಿಪಂ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಇನ್ನೂ ಎರಡು ದಿನಗಳ ಕಾಲಾವಕಾಶವಿದ್ದು, ಅಂತಿಮ ಹಂತದ ಕಾರ್ಯ ಚಟುವಟಿಕೆಗಳನ್ನು ಸಮರೋಪಾದಿಯಲ್ಲಿ ಪೂರ್ಣಗೊಳಿಸಬೇಕು’ ಎಂದರು. 

“ಸಾಹಿತ್ಯ, ಸಂಸ್ಕೃತಿಗೆ ಹೆಸರಾಗಿರುವ ಧಾರವಾಡ ತನ್ನ ಹಿರಿಮೆ, ಗರಿಮೆಗಳನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಪೂರಕವಾಗುವಂತೆ ಸಮ್ಮೇಳನವನ್ನು ಅಚ್ಚುಕಟ್ಟಾಗಿ ಆಯೋಜಿಸಬೇಕು. ಜಿಲ್ಲಾಧಿಕಾರಿಗಳು, ಪೊಲೀಸ್‌ ಅಧಿಕಾರಿಗಳು ಸೇರಿ ಜಿಲ್ಲಾಡಳಿತದ ಎಲ್ಲ ಅಧಿಕಾರಿಗಳು ನಿಷ್ಠೆಯಿಂದ ಶ್ರಮಿಸುತ್ತಿದ್ದಾರೆ. ಸಿದ್ಧತೆಗಳು ತೃಪ್ತಿಕರವಾಗಿವೆ. ಸ್ಥಳೀಯ ಸಾಹಿತಿಗಳು, ಕಲಾವಿದರು, ಸಾರ್ವಜನಿಕರು  ಸೇರಿ ಎಲ್ಲರೂ ಸಮ್ಮೇಳನಕ್ಕಾಗಿ ಒಗ್ಗಟ್ಟಿನಿಂದ ದುಡಿಯಬೇಕು’ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮನು ಬಳಿಗಾರ ಮಾತನಾಡಿ, “ಮೂರು ತಿಂಗಳಿಂದ ಜಿಲ್ಲೆಯ ಎಲ್ಲ ಅ ಧಿಕಾರಿಗಳು ಅಹರ್ನಿಶಿ ದುಡಿಯುತ್ತಿದ್ದಾರೆ. ಊಟ, ವಸತಿ, ಸಾರಿಗೆ ಸೌಕರ್ಯಗಳು ಯಶಸ್ವಿಯಾದರೆ ಸಮ್ಮೇಳನ ಬಹುತೇಕ ಯಶಸ್ವಿಯಾದಂತೆ. ಅರ್ಥಪೂರ್ಣ ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಅಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು’ ಎಂದರು. ಇದೇ ಸಂದರ್ಭದಲ್ಲಿ ಧಾರವಾಡದ ವಿಜೇತ ಹೊಸಮಠ ಅವರು ನಿರ್ಮಿಸಿರುವ ಧಾರವಾಡ ಕುರಿತ ವಿಡಿಯೋ ತುಣುಕನ್ನು ಸಚಿವರು ಬಿಡುಗಡೆ ಮಾಡಿದರು. 

ಸಹಾಯವಾಣಿ ಸ್ಥಾಪನೆ 
ಸಮ್ಮೇಳನದ ಸಂಪೂರ್ಣ ಮಾಹಿತಿಗೆ ಸಹಾಯವಾಣಿ ಸ್ಥಾಪಿಸಲಾಗಿದೆ.
1800-425-0741 (ಉಚಿತ) 94498 47641, ವಸತಿ ಸಮಿತಿ ಸಹಾಯ ಕೇಂದ್ರ-0836-2447544, 94498 47640,
ಸಾರಿಗೆ ಸಮಿತಿ ಸಹಾಯ ಕೇಂದ್ರ-0836-2445566 ಸಂಪರ್ಕಿಸಬಹುದು ಎಂದು ಡೀಸಿ ದೀಪಾ ಚೋಳನ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next