ಮೈಸೂರು: ಹಿಂದಿನ ಸರ್ಕಾರದಲ್ಲಿ ನೇಮಕಗೊಂಡ ಸಿಂಡಿಕೇಟ್ ಸದಸ್ಯರ ಮುಂದುವರಿಕೆ ವಿಚಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ನಡುವೆ ಜಟಾಪಟಿ ಉಂಟಾಗಿದೆ.
ಕಾಂಗ್ರೆಸ್ ಅವಧಿಯಲ್ಲಿ ನೇಮಕಗೊಂಡಿರುವ ಸಿಂಡಿಕೇಟ್ ಮತ್ತು ವ್ಯವಸ್ಥಾಪನಾ ಮಂಡಳಿ ಸದಸ್ಯರನ್ನು ಮುಂದುವರಿಸ
ಬೇಕೆಂದು ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ ಅವರು ಸಿಎಂ ಕುಮಾರಸ್ವಾಮಿಗೆ ಪತ್ರ
ಬರೆದ ಬೆನ್ನಲ್ಲೇ, ಮುಂದುವರಿಸಲು ಸಾಧ್ಯವೇ ಇಲ್ಲ ಎಂದು ಸಚಿವ ಜಿ.ಟಿ. ದೇವೇಗೌಡ ಸೆಡ್ಡು ಹೊಡೆದಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಹೊಸ ಸರ್ಕಾರ ಬಂದಾಗ ನಾಮ ನಿರ್ದೇಶನ ಸದಸ್ಯರು ಬದಲಾಗುತ್ತಾರೆ. ಅದರಂತೆಯೇ ವಿವಿಗಳ ಸಿಂಡಿಕೇಟ್ ಮತ್ತು ವ್ಯವಸ್ಥಾಪನಾ ಮಂಡಳಿ ಸದಸ್ಯರನ್ನು ಬದಲಾಯಿಸುತ್ತೇವೆ ಎನ್ನುವ ಮೂಲಕ ಸಿದ್ದರಾಮಯ್ಯ ಅವರಿಗೆ ಪರೋಕ್ಷ ತಿರುಗೇಟು ನೀಡಿದ್ದಾರೆ. ಬಾದಾಮಿ ಕ್ಷೇತ್ರಕ್ಕೆ ಎಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಕಾಲೇಜು ಮಂಜೂರು ಮಾಡುವಂತೆ ಅಲ್ಲಿನ ಶಾಸಕರೂ ಆಗಿರುವ ಸಿದ್ದರಾಮಯ್ಯ ಪತ್ರ ಬರೆದಿದ್ದು, ಕಾಲೇಜು ಮಂಜೂರು ಮಾಡಿಕೊಡುವುದಾಗಿ ತಿಳಿಸಿದರು.