ಬೆಂಗಳೂರು: ಸರ್ಕಾರಿ ಸ್ವಾಮ್ಯದ ಸಿಂಡಿಕೇಟ್ ಬ್ಯಾಂಕ್, 2018-19ನೇ ಸಾಲಿನ ಹಣಕಾಸು ವರ್ಷದ ನಾಲ್ಕನೇ ತ್ತೈಮಾಸಿಕದಲ್ಲಿ 128 ಕೋಟಿ ರೂ.ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ-ಸಿಇಒ ಮೃತ್ಯುಂಜಯ ಮಹಾಪಾತ್ರ ತಿಳಿಸಿದ್ದಾರೆ.
ಶುಕ್ರವಾರ ನಗರದ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ತ್ತೈಮಾಸಿಕದಲ್ಲಿ ಗಳಿಸಿದ್ದ 108 ಕೋಟಿ ರೂ.ಲಾಭಕ್ಕಿಂತ 20 ಕೋಟಿ ರೂ.ಅಧಿಕ ಲಾಭ ಗಳಿಸಿ ಬ್ಯಾಂಕ್ ಪ್ರಗತಿ ಹಾದಿಯನ್ನು ಕಂಡುಕೊಂಡಿದೆ. ಪ್ರತಿ ತ್ತೈಮಾಸಿಕದಲ್ಲೂ ಲಾಭಾಂಶವನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿರುವ ಬ್ಯಾಂಕು ತನ್ನ ಕಾಸಾ (ಡೊಮೆಸ್ಟಿಕ್) ಠೇವಣಿಯನ್ನು ಶೇ.44.44 ರಿಂದ ಶೇ.36.77ಕ್ಕೆ ಹೆಚ್ಚಳ ಮಾಡಿಕೊಂಡಿದೆ.
ಬ್ಯಾಂಕಿನ ಜಾಗತಿಕ ವಹಿವಾಟು, ಮಾರ್ಚ್ 31 ರಂದು 4,77,046 ಕೋಟಿ ರೂ.ಗೆ ತಲುಪಿದ್ದು, ಡಿಸೆಂಬರ್ 2018ರಲ್ಲಿದ್ದ ರಿಟೇಲ್ ಅವಧಿ ಠೇವಣಿಯ ಪ್ರಮಾಣ ಶೇ.63.54 ರಿಂದ 2019ರ ಮಾರ್ಚ್ 31ಕ್ಕೆ ಶೇ.66.45 ರಷ್ಟು ಹೆಚ್ಚಳ ಮಾಡಿಕೊಂಡಿದೆ. ಕಾರ್ಯ ನಿರ್ವಹಣಾ ಲಾಭದಲ್ಲೂ ಗಣನೀಯವಾಗಿ ಏರಿಕೆಯಾಗಿದ್ದು, ನಾಲ್ಕನೇ ತ್ತೈಮಾಸಿಕಾಂತ್ಯಕ್ಕೆ ಶೇ.67ರಷ್ಟು ಏರಿಕೆಯಾಗಿ 1057 ಕೋಟಿ ರೂ.ಗೆ ತಲುಪಿದೆ ಎಂದರು.
ನಿವ್ವಳ ಬಡ್ಡಿ ಆದಾಯ (ಎನ್‌ಐಐ) ಶೇ.16 ರಷ್ಟು ಹೆಚ್ಚಳವಾಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿದ್ದ 1,679 ಕೋಟಿ ರೂ.ಗಳಿಂದ 1,952 ಕೋಟಿಗೆ ತಲುಪಿದೆ. ನಿವ್ವಳ ಬಡ್ಡಿ ಮಾರ್ಜಿನ್ (ಎನ್‌ಐಎಂ -ಡೊಮೆಸ್ಟಿಕ್) 39 ಬಿಪಿಎಸ್ (ಶೇ.2.80 ರಿಂದ ಶೇ.3.19)ಗೆ ಬಂದು ನಿಂತಿದೆ. ಆದ್ಯತಾ ವಲಯಕ್ಕೆ ನೀಡಿರುವ ಸಾಲದ ಪ್ರಮಾಣ 73,733 ಕೋಟಿ ರೂ.ಅಂದರೆ ಶೇ.40.54 ರಷ್ಟು ಏರಿಕೆಯಾದರೆ,
ಕೃಷಿ ಕ್ಷೇತ್ರಕ್ಕೆ ನೀಡಿರುವ ಸಾಲದ ಪ್ರಮಾಣ 34,439 ಕೋಟಿ ರೂ., ಶೇ. 18.94ರಷ್ಟು ಹೆಚ್ಚಳವಾಗಿದೆ. ಇತರ ಕ್ಷೇತಕ್ಕೆ 39,294 ಕೋಟಿ ರೂ.ನೀಡಲಾಗಿದ್ದು, ಅದರ ಪ್ರಮಾಣದಲ್ಲಿ 21.60ರಷ್ಟು ಏರಿಕೆ ಮಾಡಲಾಗಿದೆ. 4ನೇ ತ್ತೈಮಾಸಿಕಾಂತ್ಯದ ಅನುತ್ಪಾದಕ ಆಸ್ತಿ (ಎನ್‌ಪಿಎ) ಪ್ರಮಾಣ ತೃಪ್ತಿದಾಯಕವಾಗಿದ್ದು, ಡಿ.31ರ ಲೆಕ್ಕಾಚಾರದಲ್ಲಿ ನಿವ್ವಳ ಎನ್‌ಪಿಎ ಶೇ.6.75 ರಿಂದ ಶೇ.6.16ಕ್ಕೆ ಇಳಿಕೆಯಾಗಿದೆ ಎಂದರು.
ಬ್ಯಾಂಕ್ ಸದಾ ಎಂಎಸ್‌ಎಂಇ ಮತ್ತು ಕೃಷಿ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದ್ದು, ಇದನ್ನು ಮುಂದಿನ ದಿನಗಳಲ್ಲೂ ಮುಂದುವರಿಸಲಿದೆ. ಇದರೊಟ್ಟಿಗೆ ರಿಟೈಲ್ ಹಾಗೂ ಕಾರ್ಪೋರೇಟ್ ಕ್ಷೇತ್ರದತ್ತವೂ ಗಮನ ಹರಿಸಲಿದೆ ಎಂದು ಅವರು ತಿಳಿಸಿದರು.