ಬೆಂಗಳೂರು: ಸಿಂಡಿಕೇಟ್ ಬ್ಯಾಂಕ್ ವಿಲೀನ ವಿರೋಧಿಸಿ ಗಾಂಧಿ ನಗರದ ಸಿಂಡಿಕೇಟ್ ಬ್ಯಾಂಕ್ ಕೇಂದ್ರ ಕಚೇರಿ ಮುಂಭಾಗ ಬ್ಯಾಂಕ್ ಅಧಿಕಾರಿ ಹಾಗೂ ಸಿಬ್ಬಂದಿಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು. ವಿಲೀನ ಪ್ರಕ್ರಿಯೆಗೆ ಒಪ್ಪಿಗೆ ಸೂಚಿಸುವ ಕುರಿತು ಸಿಂಡಿಕೇಟ್ ಬ್ಯಾಂಕ್ ಬೋರ್ಡ್ ಸಭೆ ನಡೆಸುತ್ತಿರುವ ಹಿನ್ನೆಲೆ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯಲ್ಲಿ 500ಕ್ಕೂ ಹೆಚ್ಚು ಸಿಂಡಿಕೇಟ್ ಬ್ಯಾಂಕ್ ನೌಕರರು ಭಾಗವಹಿಸಿ, ವಿಲೀನ ಪ್ರಕ್ರಿಯೆ ಸಮಂಜಸವಲ್ಲ. ಕೇಂದ್ರ ಸರ್ಕಾರ ಈ ನಿಲುವನ್ನು ಹಿಂಪಡೆಯಬೇಕು. ಶತಮಾನದ ಹೊಸ್ತಿಲಲ್ಲಿರುವ ಸಿಂಡಿಕೇಟ್ ಬ್ಯಾಂಕನ್ನು ಉಳಿಸಿಕೊಡಬೇಕು ಎಂದು ಘೋಷಣೆ ಕೂಗಿದರು.
ಸಿಂಡಿಕೇಟ್ ಬ್ಯಾಂಕ್ ಅಧಿಕಾರಿಗಳ ಸಂಸ್ಥೆಯ ಉಪ ಪ್ರಧಾನ ಕಾರ್ಯದರ್ಶಿ ಸಾಯಿರಾಂ ಮಾತನಾಡಿ, ಬ್ಯಾಂಕ್ ಬೋರ್ಡ್ ಸಭೆ ನಡೆಯುತ್ತಿದೆ. ವಿಲೀನ ಪ್ರಕ್ರಿಯೆಗೆ ಒಪ್ಪಿಗೆ ಸೂಚಿಸಲು ಸದಸ್ಯರು ಮುಂದಾಗಿದ್ದಾರೆ. ಈ ವಿಲೀನ ನೀತಿಯಿಂದ ಕರ್ನಾಟಕ ಮೂಲದ 4 ರಾಷ್ಟ್ರೀಕೃತ ಬ್ಯಾಂಕ್‌ಗಳ ಪೈಕಿ ಒಂದೇ ಬ್ಯಾಂಕ್ ಉಳಿಯಲಿದೆ. ದಶಕಗಳಿಂದ ನಷ್ಟದಲ್ಲಿರುವ ಉತ್ತರ ಭಾರತ ಅನೇಕ ಬ್ಯಾಂಕ್‌ಗಳನ್ನು ಬಿಟ್ಟು ಲಾಭದಲ್ಲಿರುವ ಉತ್ತಮ ವಹಿವಾಟು ಹೊಂದಿರುವ ಸಿಂಡಿಕೇಟ್ ಬ್ಯಾಂಕ್ ವಿಲೀನ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಮೂಲಕ ಮತ್ತೂಂದು ಬ್ಯಾಂಕನ್ನು ತನ್ನಲ್ಲೇ ವಿಲೀನ ಮಾಡಿಕೊಳ್ಳುವಷ್ಟು ಸಾಮರ್ಥ್ಯದ ಸಿಂಡಿಕೇಟ್ ಬ್ಯಾಂಕ್ ರಾಜಕೀಯ ಕುತಂತ್ರಕ್ಕೆ ಬಲಿಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವಿತ್ತ ಸಚಿವರು ಸಿಂಡಿಕೇಟ್ ಬ್ಯಾಂಕನ್ನು ಕೆನರಾ ಬ್ಯಾಂಕ್‌ನೊಂದಿಗೆ ವಿಲೀನ ಮಾಡುವುದಾಗಿ ದಿಢೀರ್ ಘೋಷಣೆ ಮಾಡಿದರು. ಇದರಿಂದ ಸಾವಿರಾರು ನೌಕರರಿಗೆ ಒಮ್ಮೆಗೆ ಅಚ್ಚರಿ ಉಂಟಾಗಿದೆ. ಸಿಂಡಿಕೇಟ್ ಬ್ಯಾಂಕ್ ಉತ್ತಮವಾಗಿಯೇ ಕಾರ್ಯನಿರ್ವಹಿಸುತ್ತಿದ್ದು, ಭಾರೀ ನಷ್ಟದಲ್ಲಿ ಇರಲಿಲ್ಲ. ಕರ್ನಾಟಕದಲ್ಲಿ 800ಕ್ಕೂ ಹೆಚ್ಚು ಶಾಖೆಗಳಿದ್ದು, ಎಲ್ಲವೂ ಉತ್ತಮವಾಗಿ ನಡೆಯುತ್ತಿತ್ತು. ಆದರೂ ಏಕೆ ವಿಲೀನ ನಿರ್ಧಾರ ಎಂಬುದು ಇಂದಿಗೂ ತಿಳಿದಿಲ್ಲ. ಕನ್ನಡಿಗರು ಬ್ಯಾಂಕಿಂಗ್ ಕ್ಷೇತ್ರಕ್ಕೆ ಬರೋದು ಕಡಿಮೆಯಾಗಿದೆ. ಈ ನಡುವೆ ಕೇವಲ ಐದು ತಿಂಗಳ ಅಂತರದಲ್ಲಿ ಕರ್ನಾಟಕ ಮೂಲದ ಮತ್ತೆರಡು ಬ್ಯಾಂಕ್‌ಗಳು ವಿಲೀನಗೊಂಡಿವೆ ಎಂದರು.
ಶತಮಾನದ ಹೊಸ್ತಿಲಲ್ಲಿರುವ ಸಿಂಡಿಕೇಟ್ ಬ್ಯಾಂಕ್ ವಿಲೀನವಾಗುತ್ತಿವುದು ಎಲ್ಲಾ ನೌಕರರಿಗೂ ನೋವುಂಟು ಮಾಡಿದೆ. ವಿಲೀನ ಬಳಿಕ ಅಕ್ಕ-ಪಕ್ಕದಲ್ಲಿ ಇರುವ ಬ್ಯಾಂಕ್‌ನ ಶಾಖೆಗಳನ್ನು ಮುಚ್ಚುತ್ತಾರೆ. ಒಂದೆ ಕಡೆ ಎಟಿಎಂ ಇದ್ದರೆ ತೆರವು ಮಾಡುತ್ತಾರೆ. ಆಗ ಸಿಬ್ಬಂದಿ ಸಂಖ್ಯೆ ಕಡಿಮೆ ಮಾಡಬೇಕಾಗುತ್ತದೆ. ಮುಂದೆ ಕಾರ್ಯಕ್ಷಮತೆ ಕಾರಣಕೊಟ್ಟು ಸಿಬ್ಬಂದಿ ಕಡಿಮೆ ಮಾಡಬಹುದು ಎಂದು ಆತಂಕ ವ್ಯಕ್ತಪಡಿಸಿದರು.