Advertisement

ದೇವೇಗೌಡರ ಮನೆಯಲ್ಲಿದೆ ಸಿಂಡಿಕೇಟ್‌: ನಾರಾಯಣ ಗೌಡ

10:43 PM Aug 03, 2019 | Team Udayavani |

ಬೆಂಗಳೂರು: ದೇವೇಗೌಡರ ಮನೆಯಲ್ಲಿ ಒಂದು ಸಿಂಡಿಕೇಟ್‌ ಇದೆ. ಆ ಸಿಂಡಿಕೇಟನ್ನು ದೇವೇಗೌಡರ ಕುಟುಂಬ ಬೆಳೆಸಿದೆ ಎಂದು ಅನರ್ಹ ಜೆಡಿಎಸ್‌ ಶಾಸಕ ನಾರಾಯಣ ಗೌಡ ಆರೋಪಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, “ದೇವೇಗೌಡರ ಮನೆಗೆ ಹೋದರೆ, ಒಂದು ಕಪ್‌ ಟಿ ಕೊಡುವುದಿಲ್ಲ. ಕೆ.ಆರ್‌.ಪೇಟೆಯಲ್ಲಿ ಅವರು ಯಾರನ್ನು ಬೇಕಾದರೂ ನಿಲ್ಲಿಸಲಿ. ಅವರು ದೊಡ್ಡವರು. ಅವರು ಅಭ್ಯರ್ಥಿ ಹಾಕುವ ಬಗ್ಗೆ ನಾನು ಮಾತನಾಡುವುದಿಲ್ಲ’ ಎಂದು ಹೇಳಿದರು.

Advertisement

“ನಾನೊಬ್ಬ ಒಕ್ಕಲಿಗ. ಮಹಾರಾಷ್ಟ್ರದಲ್ಲಿ ಉದ್ಯಮ ನಡೆಸುತ್ತಿದ್ದೇನೆ. ಒಕ್ಕಲಿಗ ಸಮುದಾಯಕ್ಕೆ ಅಲ್ಲೊಂದು ಶಕ್ತಿ ತಂದಿದ್ದೇನೆ. ಒಬ್ಬ ಒಕ್ಕಲಿಗನನ್ನೇ ಅವರು ಬೆಳೆಸಲಿಲ್ಲ. ಕಿಡಿಗೇಡಿಗಳ ಗುಂಪಿನ ಮಾತು ಕೇಳಿ ನೋವು ಕೊಟ್ಟಿದ್ದಾರೆ. ಬಿಜೆಪಿ ಸೇರುವಂತೆ ನಮಗೆ ಎಲ್ಲಿಯೂ ಬೇಡಿಕೆ ಬಂದಿಲ್ಲ. ಬಿಜೆಪಿ ಸೇರುವ ಬಗ್ಗೆ ಕಾರ್ಯಕರ್ತರೊಂದಿಗೆ ಚರ್ಚಿಸಿ ತೀರ್ಮಾನ ಮಾಡುತ್ತೇನೆ’ ಎಂದು ಹೇಳಿದರು.

“ನಾವು ಪದವಿ, ಹಣಕ್ಕಾಗಿ ರಾಜೀನಾಮೆ ನೀಡಿರಲಿಲ್ಲ. ಕ್ಷೇತ್ರದಲ್ಲಿ ನಮಗೆ ತುಂಬಾ ನೋವಿತ್ತು. ಒಬ್ಬ ಶಾಸಕನಾಗಿ ಕೆಲಸ ಮಾಡಲು ಬಿಡಲಿಲ್ಲ. ವಿಧಾನಮಂಡಲ ಅಧಿವೇಶನ ಆರಂಭಕ್ಕೂ ಮುನ್ನವೇ ನಾವು ರಾಜೀನಾಮೆ ಸಲ್ಲಿಸಿದ್ದೇವು. ಆದರೂ, ರಮೇಶ್‌ಕುಮಾರ್‌ ನಮ್ಮನ್ನು ಅನರ್ಹಗೊಳಿಸಿದ್ದಾರೆ. ಅವರ ತೀರ್ಮಾನ ನೋವು ತಂದಿದೆ. ನಮಗೆ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯ ಸಿಗುವ ವಿಶ್ವಾಸ ಇದೆ’ ಎಂದರು.

ಅಧಿಕಾರದ ಹಿಂದೆ ಹೋದವನಲ್ಲ: “ನಾನು ಹಣ, ಅಧಿಕಾರದ ಹಿಂದೆ ಹೋದವನಲ್ಲ. ನನಗೆ ಅದರ ಅವಶ್ಯಕತೆಯೂ ಇಲ್ಲ. ದೇವರು ನನಗೆ ಸಾಕಷ್ಟು ಕೊಟ್ಟಿದ್ದಾನೆ. ನನ್ನ ಕ್ಷೇತ್ರಗಳಲ್ಲಿ ಕೆಲಸಗಳು ಆಗುತ್ತಿರಲಿಲ್ಲ. ಹಾಗಾಗಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ಸುಪ್ರೀಂ ಕೋರ್ಟ್‌ನಲ್ಲಿ ಸ್ಪೀಕರ್‌ ತೀರ್ಪಿನ ವಿರುದ್ದ ಅರ್ಜಿ ಸಲ್ಲಿಸಿದ್ಧೇವೆ. ಅಲ್ಲಿ ವಿಚಾರಣೆಗೆ ಬಂದು ತೀರ್ಪು ಪ್ರಕಟವಾಗಬೇಕು.

ನಂತರ ಯಾವ ಪಕ್ಷಕ್ಕೆ ಹೋಗಬೇಕು’ ಎಂದು ತೀರ್ಮಾನ ಮಾಡುತ್ತೇವೆ ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್‌ ಹೇಳಿದ್ದಾರೆ. “ಚುನಾವಣೆಯಲ್ಲಿ ನಾನು ಸ್ಪರ್ಧಿಸಬೇಕಾ? ಅಥವಾ ಪುತ್ರನನ್ನು ಕಣಕ್ಕಿಳಿಸಬೇಕಾ? ಎಂಬ ಬಗ್ಗೆ ತೀರ್ಮಾನ ಮಾಡಿಲ್ಲ. ಮೊದಲು ನ್ಯಾಯಾಲಯದ ತೀರ್ಮಾನ ಬರಲಿ’ ಎಂದು ಹೇಳಿದರು.

Advertisement

ಡಿಕೆಶಿ ಟ್ರಬಲ್‌ ಶೂಟರ್‌ ಅಲ್ಲ-ಸಿಪಿವೈ: ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರು ಕಾಂಗ್ರೆಸ್‌ಗೆ ಟ್ರಬಲ್‌ ಶೂಟರ್‌ ಅಲ್ಲವೇ ಅಲ್ಲ. ಅವರು ನನ್ನ ರಾಜಕಾರಣಕ್ಕೆ ಟ್ರಬಲ್‌ ಆದವರು. ಕಾಂಗ್ರೆಸ್‌ ಪಕ್ಷಕ್ಕೆ ಹಾನಿಯಾಗಿದ್ದರೆ, ಅದಕ್ಕೆ ಡಿ.ಕೆ.ಶಿವಕುಮಾರ್‌ ಕಾರಣ. ಡಿ.ಕೆ.ಶಿವಕುಮಾರ್‌ ಅವರ ಅಹಂಕಾರ, ದರ್ಪ ಎಲ್ಲವನ್ನೂ ಜನರು ಗಮನಿಸುತ್ತಿದ್ದಾರೆ. ಅವರ ರಾಜಕೀಯದ ಅಂತ್ಯದ ದಿನಗಳು ಹತ್ತಿರವಾಗುತ್ತಿವೆ.

ಅವರ ಸ್ನೇಹಿತರು ದೂರ ಆದರು ಎಂದು ಅವರೇ ಮರುಕಪಟ್ಟುಕೊಳ್ಳುತ್ತಿದ್ದಾರೆ. ಈಗ ಅವರ ಸ್ನೇಹಿತರೇ ಪ್ರತಿ ಸವಾಲು ಹಾಕಿದ್ದಾರೆ. ಇದನ್ನು ಡಿ.ಕೆ.ಶಿವಕುಮಾರ್‌ ಅರ್ಥ ಮಾಡಿಕೊಳ್ಳಲಿ. ತಮ್ಮ ನಡವಳಿಕೆಯನ್ನು ಬದಲಾಯಿಸಿಕೊಳ್ಳಲಿ. ಯಶಸ್ಸು ಕಾಣದೇ ರಾಜಕೀಯದಲ್ಲಿ ಅಂತ್ಯ ಕಾಣುವ ರಾಜಕಾರಣಿಗಳಲ್ಲಿ ಡಿ.ಕೆ.ಶಿವಕುಮಾರ್‌ ಒಬ್ಬರಾಗಬಹುದು ಎಂದು ಯೋಗೇಶ್ವರ್‌ ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next