Advertisement
ಕಾಂಗ್ರೆಸ್-ಜೆಡಿಎಸ್‌ನ ಮೈತ್ರಿ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಹಾಗೂ ಬಿಜೆಪಿಯ ಎಸ್.ಐ.ಚಿಕ್ಕನಗೌಡ್ರ ಇಬ್ಬರೂ ಅನುಕಂಪ ಗಿಟ್ಟಿಸಿಕೊಳ್ಳಲು, ಆ ಮೂಲಕವೇ ಮತದಾರರ ಮೇಲೆ ಪ್ರಭಾವ ಬೀರುವ ಮೂಲಕ ಮತಬೇಟೆಗೆ ಮುಂದಾಗಲು ಯೋಜಿಸಿದ್ದಾರೆ.
Related Articles
Advertisement
ಈ ಕಾರಣಕ್ಕಾಗಿಯೇ ಶಿವಳ್ಳಿ ಅವರ ಪತ್ನಿ ಕುಸುಮಾವತಿ ಶಿವಳ್ಳಿಗೆ ಟಿಕೆಟ್ ನೀಡಲು ಕಾಂಗ್ರೆಸ್ ನಿರ್ಧರಿಸಿತ್ತು. ಕಾಂಗ್ರೆಸ್‌ನಿಂದ ಸುಮಾರು 18 ಜನರು ಟಿಕೆಟ್ ಆಕಾಂಕ್ಷಿಗಳಾಗಿದ್ದರೂ ಕಾಂಗ್ರೆಸ್ ವರಿಷ್ಠರು ಶಿವಳ್ಳಿ ಅವರ ಪತ್ನಿಯನ್ನು ಅಭ್ಯರ್ಥಿಯಾಗಿಸಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒತ್ತಾಸೆ, ಧಾರವಾಡ ಜಿಲ್ಲೆಯ ಕಾಂಗ್ರೆಸ್ ಮುಖಂಡರ ಒತ್ತಾಸೆಯೂ ಇದರ ಹಿಂದೆ ಬಹುದೊಡ್ಡ ರೀತಿಯಲ್ಲಿ ಕೆಲಸ ಮಾಡಿದೆ.
ಬಿಜೆಪಿ ಅಸ್ತ್ರ: ಕಾಂಗ್ರೆಸ್ ಅಭ್ಯರ್ಥಿ ಅನುಕಂಪವನ್ನು ಹೆಚ್ಚಿನ ರೀತಿಯಲ್ಲಿ ನೆಚ್ಚಿಕೊಂಡಿದ್ದರಿಂದ ಇದಕ್ಕೆ ಪ್ರತಿಯಾಗಿ ಬಿಜೆಪಿ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡ್ರ ಸಹ ಅನುಕಂಪದ ಅಸ್ತ್ರವನ್ನೇ ಬಳಸಿಕೊಳ್ಳಲು ಮುಂದಾಗಿದ್ದಾರೆ. ಸತತ ಎರಡು ಬಾರಿ ಸೋಲುಂಡಿದ್ದು, ತಮ್ಮ ಕೈ ಹಿಡಿಯುವ ಮೂಲಕ ರಾಜಕೀಯ ಪುನರ್ಜನ್ಮ ನೀಡುವಂತೆ ಮತದಾರರ ಮೇಲೆ ಅನುಕಂಪದ ಅಸ್ತ್ರ ಪ್ರಯೋಗಿಸಲು ತೀವ್ರ ಯತ್ನ ನಡೆಸಿದ್ದಾರೆ.
ಕಲಘಟಗಿ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಎಸ್.ಐ.ಚಿಕ್ಕನಗೌಡ್ರ, ಕ್ಷೇತ್ರ ಪುನರ್‌ವಿಂಗಡಣೆಯಿಂದಾಗಿ 2008ರಲ್ಲಿ ಕುಂದಗೋಳ ಕ್ಷೇತ್ರಕ್ಕೆ ವಲಸೆ ಬಂದಿದ್ದರು. ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ಗೆಲುವು ಸಾಧಿಸಿದ್ದರು. 2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ, ಸಿ.ಎಸ್.ಶಿವಳ್ಳಿ ಎದುರು ಸೋತಿದ್ದರೂ, ಎರಡನೇ ಸ್ಥಾನ ಪಡೆಯುವ ಮೂಲಕ ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳುವಂತೆ ಮಾಡಿದ್ದರು.
2018ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಎಸ್.ಐ.ಚಿಕ್ಕನಗೌಡ್ರ, ಸಿ.ಎಸ್.ಶಿವಳ್ಳಿ ಅವರ ವಿರುದ್ಧ ಕೇವಲ 634 ಮತಗಳ ಅಂತರದಿಂದ ಸೋಲು ಕಂಡಿದ್ದರು. ಎಸ್.ಐ.ಚಿಕ್ಕನಗೌಡ್ರ ಸತತ ಎರಡು ಬಾರಿ ಸೋಲುಂಡಿದ್ದರೆ, ಸಿ.ಎಸ್.ಶಿವಳ್ಳಿಯವರು ಸುಮಾರು 56 ವರ್ಷಗಳ ನಂತರ ಸತತ ಎರಡು ಬಾರಿ ಗೆದ್ದ ಮೊದಲ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಇದೀಗ ಮತ್ತೆ ಬಿಜೆಪಿ ಅಭ್ಯರ್ಥಿಯಾಗಿರುವ ಎಸ್.ಐ.ಚಿಕ್ಕನಗೌಡ್ರ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೇವಲ 634 ಮತಗಳ ಅಂತರದ ಸೋಲು ಕಂಡಿದ್ದೇನೆ. ನನಗೆ ಈ ಬಾರಿ ಗೆಲುವು ನೀಡಿ ಎಂಬ ಅನುಕಂಪದ ದಾಳ ಉರುಳಿಸಲು ಮುಂದಾಗಿದ್ದಾರೆ.
ಬಗೆಹರಿಯದ ಅಸಮಾಧಾನ: ಕುಂದಗೋಳ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ಬಗೆಗಿನ ಅಸಮಾಧಾನ ಇನ್ನೂ ಪೂರ್ಣ ಪ್ರಮಾಣದಲ್ಲಿ ಬಗೆಹರಿದಿಲ್ಲ. ಬಿಜೆಪಿಯವರಾದ ಎಸ್.ಐ.ಚಿಕ್ಕನಗೌಡ್ರ, ಎಂ.ಆರ್.ಪಾಟೀಲರ ಬೆಂಬಲಿಗರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆಗಳ ಸಮರ ನಡೆದಿದೆ.
ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯಕಾರಿ ಸದಸ್ಯರೊಬ್ಬರು ಕುಂದಗೋಳ ಕ್ಷೇತ್ರದ ಟಿಕೆಟ್ ನೀಡಿಕೆ ಕುರಿತಾಗಿ ಪಕ್ಷದ ನಿಲುವ ಪ್ರಶ್ನಿಸುವ, ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧ ನೇರವಾಗಿ ವಾಗ್ಧಾಳಿ ನಡೆಸುವ ಕಾರ್ಯ ನಡೆಸಿದ್ದಾರೆ. ಆದರೆ, ಇದುವರೆಗೂ ಅವರ ವಿರುದ್ಧ ಒಂದೇ ಒಂದು ಸಣ್ಣ ಶಿಸ್ತು ಕ್ರಮ ಕೈಗೊಳ್ಳದಿರುವುದು ಶಿಸ್ತಿನ ಪಕ್ಷದಲ್ಲಿ ಇಂತಹ ಅಶಿಸ್ತುಗೆ ಅಸ್ತು ಎನ್ನಲಾಗಿದೆಯೋ ಅಥವಾ ಇದರ ಹಿಂದೆ ಯಾವುದಾದರೂ ಬಲವಾದ ಶಕ್ತಿ ಕಾರ್ಯ ನಿರ್ವಹಿಸುತ್ತಿದೆಯೋ ಎಂಬ ಅನುಮಾನ ಕಾಣುತ್ತಿದೆ.
* ಅಮರೇಗೌಡ ಗೋನವಾರ