ಚಿಕ್ಕೋಡಿ: ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸ್ಟಾಫ್ ಆ್ಯಂಡ್ ವರ್ಕರ್ಸ್ ಯೂನಿಯನ್(ಎಐಟಿಯುಸಿ) ಮಂಗಳವಾರ ನಗರದ ಮಿನಿ ವಿಧಾನಸೌಧ ಮುಂಭಾಗದಲ್ಲಿ ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಇಡೀ ದೇಶದಲ್ಲಿ ನಂಬರ ಒನ್ ಸ್ಥಾನದಲ್ಲಿದೆ. ಇಲ್ಲಿಯವರಿಗೆ 200ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ಸಂಸ್ಥೆಯ ಏಳ್ಗೆಗಾಗಿ ಎಲ್ಲ ಕಾರ್ಮಿಕರು ಪ್ರಾಮಾಣಿಕವಾಗಿ ದುಡಿಯುತ್ತಿದ್ದಾರೆ. ಆದರೆ ಇತ್ತೀಚಿನ ದಿನಮಾನಗಳಲ್ಲಿ ಕಾರ್ಮಿಕರು ಬಹಳ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಪ್ರತಿಯೊಂದು ಕೆಲಸಕ್ಕೂ ಭ್ರಷ್ಟಾಚಾರ ಮಾರ್ಗ ಅನಿವಾರ್ಯವಾಗಿದೆ. ಇಂಥ ಒತ್ತಡದ ಬದುಕಿಗೆ ಬೇಸತ್ತು ಅದೇಷ್ಟೋ ಕಾರ್ಮಿಕರು ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದಾರೆ. ಆರ್ಥಿಕವಾಗಿ ಕಾರ್ಮಿಕರಿಗೆ ಸಿಗಬೇಕಾದ ಹಣಕಾಸು ಸಕಾಲಕ್ಕೆ ಸಿಗದೇ ಅವರ ಮಕ್ಕಳ ವಿದ್ಯಾಭ್ಯಾಸ, ಆರೋಗ್ಯದ ಖರ್ಚು, ಮದುವೆ ಹೀಗೆ ಕೌಟುಂಬಿಕ ಖರ್ಚುವೆಚ್ಚಗಳಿಗಾಗಿ ಸಾಲಗಾರರಾಗಿ ಬದುಕುವಂತಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸಬೇಕೆಂದು ಧರಣಿ ಕುಳಿತ ಕಾರ್ಮಿಕರು ಸರ್ಕಾರವನ್ನು ಆಗ್ರಹಿಸಿದರು.
ನಂತರ ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಡಾ| ಸಂತೋಷ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಧರಣಿ ಕುಳಿತ ಕಾರ್ಮಿಕರು ಸಲ್ಲಿಸಿರುವ ಮನವಿ ಪತ್ರವನ್ನು ಮುಖ್ಯಮಂತ್ರಿಯವರ ಕಚೇರಿಗೆ ಕಳಿಸಿಕೊಡಲಾಗುತ್ತದೆ ಎಂದು ತಹಸೀಲ್ದಾರ್ ಸಂತೋಷ ಬಿರಾದಾರ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘಟನೆ ಪ್ರಧಾನ ಕಾರ್ಯದರ್ಶಿ ಬಿ.ಎ. ಮುಕ್ಕೇರಿ, ಎಂ.ಎಸ್. ಚಿಂಚಲಿ, ನಾಗೇಶ ಸಾತೇರಿ, ಎಸ್.ಬಿ. ಜಂಬಗಿ, ಐ.ಎಂ. ಪಟೇಲ, ಅಶೋಖ ಗೋರಿ, ಇಮ್ರಾನ ಚಿಂಚಲಿ, ಬಸವರಾಜ ಹೂಬಳ್ಳಿ, ಹೂಗಾರ ಸೇರಿದಂತೆ ನೂರಾರು ಕಾರ್ಮಿಕರು ಪಾಲ್ಗೊಂಡಿದ್ದರು.