ಹೊಸದಿಲ್ಲಿ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತೆಯು ‘ಜಾಗತಿಕ ಉಗ್ರ’ನೆಂದು ಘೋಷಿಸಿದ ಕೆಲವೇ ದಿನಗಳಲ್ಲಿ ಹಿಜ್‌ಬುಲ್ ಮುಜಾಹಿದೀನ್ (ಎಚ್‌ಎಂ) ಮುಖ್ಯಸ್ಥ ಸಯ್ಯದ್ ಸಲಾಹುದ್ದೀನ್ ತಾನು ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಿದ್ದು ಹೌದೆಂದು ಒಪ್ಪಿಕೊಂಡಿದ್ದಾನೆ.
ಎಎನ್‌ಐ ಸುದ್ದಿ ಸಂಸ್ಥೆ ಇಂದು ಮಾಡಿರುವ ವರದಿಯ ಪ್ರಕಾರ ಸಲಾಹುದ್ದೀನ್ ಪಾಕಿಸ್ಥಾನೀ ಟಿವಿ ವಾಹಿನಿಯೊಂದರ ಜತೆಗೆ ಮಾತನಾಡುತ್ತಾ ‘ಭಾರತದಲ್ಲಿ ನಾನು ಭಯೋತ್ಪಾದಕ ಕೃತ್ಯಗಳನ್ನು ನಡೆಸಿದ್ದೇನೆ’ ಎಂದು ಒಪ್ಪಿಕೊಂಡಿದ್ದಾನೆ.
ಭಾರತದಲ್ಲಿ ತಾನು ಹಲವಾರು ಭಯೋತ್ಪಾದಕ ಕೃತ್ಯಗಳನ್ನು ನಡೆಸಿರುವುದು ನಿಜ ಎಂದಿರುವ ಸಲಾಹುದ್ದೀನ್, ತನ್ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸಿರುವ ಟ್ರಂಪ್ ಆಡಳಿತೆಯು ಮೂರ್ಖನೆಂದು ಹೇಳಿದ್ದಾನೆ.
“ಭಾರತದಿಂದ ಕಾಶ್ಮೀರವನ್ನು ವಿಮೋಚನೆಗೊಳಿಸುವ ತನಕವೂ ನಮ್ಮ ಹೋರಾಟ ಕೊನೆಗೊಳ್ಳುವುದಿಲ್ಲ’ ಎಂದು ಸಲಾಹುದ್ದೀನ್ ಮುಜಫರಾಬಾದ್‌ನಲ್ಲಿ ಅತ್ಯಂತ ಬಿಗಿ ಭದ್ರತೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಷೋಷಿಸಿದ್ದಾನೆ.
ಕಳೆದ ವಾರ ಅಮೆರಿಕವು ಸಲಾಹುದ್ದೀನ್ ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸಿದ ಕ್ರಮವನ್ನು ಪಾಕಿಸ್ಥಾನ “ಸಂಪೂರ್ಣ ಅಸಮರ್ಥನೀಯ’ ಎಂದು ಹೇಳಿತ್ತಲ್ಲದೆ “ಸ್ವಯಂ ಆಡಳಿತೆಯ ಕಾಶ್ಮೀರಿಗಳ ಹಕ್ಕನ್ನು ಬೆಂಬಲಿಸುವ ವ್ಯಕ್ತಿ ಆತ’ ಎಂದು ಸಲಾಹುದ್ದೀನ್ ನನ್ನು ಸಮರ್ಥಿಸಿಕೊಂಡಿತ್ತು.
ಪಾಕಿಸ್ಥಾನದಲ್ಲಿ ನೆಲೆಗೊಂಡಿರುವ ಹಿಜ್‌ಬುಲ್ ಉಗ್ರ ಸಂಘಟನೆಯ ಮುಖ್ಯಸ್ಥನಾಗಿರುವ ಸಲಾಹುದ್ದೀನ್ ಕಳೆ ವರ್ಷ “ಕಾಶ್ಮೀರ ಕಣಿವೆಯನ್ನು ನಾವು ಭಾರತೀಯ ಪಡೆಗಳ ಗೋರಿಯನ್ನಾಗಿ ಪರಿವರ್ತಿಸುವೆವು’ ಎಂದು ಧಮ್ಕಿ ಹಾಕಿದ್ದ.