Advertisement

Syed Mushtaq Ali Trophy: ಸೆಮಿಫೈನಲ್‌ ಸೆಣಸಾಟಕ್ಕೆ ಅಖಾಡ ಸಜ್ಜು

11:37 PM Dec 11, 2024 | Team Udayavani |

ಬೆಂಗಳೂರು: “ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿ’ ಟಿ20 ಕ್ರಿಕೆಟ್‌ ಪಂದ್ಯಾವಳಿಯ ಸೆಮಿಫೈನಲ್‌ ಅಖಾಡ ಸಜ್ಜುಗೊಂಡಿದೆ. ಬೆಂಗಳೂರಿನಲ್ಲಿ ಬುಧವಾರ ನಡೆದ 4 ಕ್ವಾರ್ಟರ್‌ ಫೈನಲ್‌ ಪಂದ್ಯಗಳಲ್ಲಿ ಮಧ್ಯಪ್ರದೇಶ, ಬರೋಡಾ, ಮುಂಬಯಿ ಮತ್ತು ದಿಲ್ಲಿ ತಂಡಗಳು ಜಯ ಸಾಧಿಸಿ ಮುನ್ನಡೆದವು. ಶುಕ್ರವಾರ ಸೆಮಿ ಸೆಣಸಾಟ ನಡೆಯಲಿದೆ.

Advertisement

ಸೆಮಿಫೈನಲ್‌ನಲ್ಲಿ ಬರೋಡಾ- ಮುಂಬಯಿ, ಮಧ್ಯಪ್ರದೇಶ-ದಿಲ್ಲಿ ಎದುರಾಗಲಿವೆ.

ಮಧ್ಯಪ್ರದೇಶ ಜಯ
ದಿನದ ಮೊದಲ ಕ್ವಾರ್ಟರ್‌ ಫೈನಲ್‌ ನಲ್ಲಿ ಮಧ್ಯಪ್ರದೇಶ 6 ವಿಕೆಟ್‌ಗಳಿಂದ ಸೌರಾಷ್ಟ್ರವನ್ನು ಮಣಿಸಿತು. ಚಿರಾಗ್‌ ಜಾನಿ ಅವರ ಅಜೇಯ 80 ರನ್‌ ನೆರವಿನಿಂದ ಸೌರಾಷ್ಟ್ರ 7 ವಿಕೆಟಿಗೆ 173 ರನ್‌ ಪೇರಿಸಿದರೆ, ಮಧ್ಯಪ್ರದೇಶ 19.2 ಓವರ್‌ಗಳಲ್ಲಿ 4 ವಿಕೆಟಿಗೆ 174 ರನ್‌ ಬಾರಿಸಿತು. ಅರ್ಪಿತ್‌ ಗೌಡ್‌ 42, ವೆಂಕಟೇಶ್‌ ಅಯ್ಯರ್‌ ಅಜೇಯ 38, ನಾಯಕ ರಜತ್‌ ಪಾಟೀದಾರ್‌ 28 ಮತ್ತು ಹರ್‌ಪ್ರೀತ್‌ ಸಿಂಗ್‌ ಭಾಟಿಯಾ ಅಜೇಯ 22 ರನ್‌ ಬಾರಿಸಿ ಮಧ್ಯಪ್ರದೇಶವನ್ನು ದಡ ಸೇರಿಸಿದರು. 2 ವಿಕೆಟ್‌ ಕಿತ್ತು ಬೌಲಿಂಗ್‌ನಲ್ಲೂ ಮಿಂಚಿದ ಅಯ್ಯರ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಬಂಗಾಲ ವಿಫ‌ಲ
ದ್ವಿತೀಯ ಮುಖಾಮುಖೀಯಲ್ಲಿ ಬರೋಡಾ 41 ರನ್ನುಗಳಿಂದ ಬಂಗಾಲ ವನ್ನು ಮಣಿಸಿತು. ಆಕ್ರಮಣಕಾರಿ ಆರಂಭ ಪಡೆದ ಬರೋಡ 7ಕ್ಕೆ 172 ರನ್‌ ಗಳಿಸಿತು. ಬ್ಯಾಟಿಂಗ್‌ನಲ್ಲಿ ವೈಫ‌ಲ್ಯ ಅನುಭವಿಸಿದ ಬಂಗಾಲ 18 ಓವರ್‌ಗಳಲ್ಲಿ 131ಕ್ಕೆ ಕುಸಿಯಿತು.

ಬರೋಡ ಆರಂಭಿಕರಾದ ಶಾಶ್ವತ್‌ ರಾವತ್‌ (40) ಮತ್ತು ಅಭಿಮನ್ಯು ಸಿಂಗ್‌ (37) 9.4 ಓವರ್‌ಗಳಲ್ಲಿ 90 ರನ್‌ ರಾಶಿ ಹಾಕಿದರು. ಬಂಗಾಲ ಪರ ಶಾಬಾಜ್‌ ಅಹ್ಮದ್‌ ಏಕಾಂಗಿಯಾಗಿ ಹೋರಾಡಿ ಈ ಪಂದ್ಯದ ಏಕೈಕ ಅರ್ಧ ಶತಕಕ್ಕೆ ಸಾಕ್ಷಿಯಾದರು (55). ಟೀಮ್‌ ಇಂಡಿಯಾಕ್ಕೆ ಮರಳಲು ಸಜ್ಜಾಗಿರುವ ಮೊಹಮ್ಮದ್‌ ಶಮಿ 43 ರನ್ನಿತ್ತು 2 ವಿಕೆಟ್‌ ಕೆಡವಿದರು.

Advertisement

17 ರನ್ನಿಗೆ 3 ವಿಕೆಟ್‌ ಉರುಳಿಸಿದ ಲುಕ್‌ಮಾನ್‌ ಮೆರಿವಾಲಾ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು. ಹಾರ್ದಿಕ್‌ ಪಾಂಡ್ಯ, ಅತಿತ್‌ ಶೇs… ಕೂಡ 3 ವಿಕೆಟ್‌ ಉರುಳಿಸಿದರು.

ರಹಾನೆ ಬ್ಯಾಟಿಂಗ್‌ ಬಿರುಸು
3ನೇ ಪಂದ್ಯದಲ್ಲಿ ವಿದರ್ಭದ ದೊಡ್ಡ ಮೊತ್ತವನ್ನು ಬೆನ್ನಟ್ಟಿಕೊಂಡು ಹೋದ ಮುಂಬಯಿ 6 ವಿಕೆಟ್‌ಗಳ ಜಯ ಸಾಧಿಸಿತು. ಅಜಿಂಕ್ಯ ರಹಾನೆ ಬಿರುಸಿನ ಬ್ಯಾಟಿಂಗ್‌ ಮೂಲಕ ಗೆಲುವಿನ ರೂವಾರಿಯಾಗಿ ಮೂಡಿಬಂದರು.

ವಿದರ್ಭ 6 ವಿಕೆಟಿಗೆ 221 ರನ್‌ ಪೇರಿಸಿದರೆ, ಮುಂಬಯಿ 19.2 ಓವರ್‌ಗಳಲ್ಲಿ 4 ವಿಕೆಟಿಗೆ 224 ರನ್‌ ಬಾರಿಸಿತು. ಆರಂಭಕಾರ ಅಜಿಂಕ್ಯ ರಹಾನೆ 45 ಎಸೆತಗಳಿಂದ 84 ರನ್‌ ಹೊಡೆದರು (10 ಬೌಂಡರಿ, 3 ಸಿಕ್ಸರ್‌). ಪೃಥ್ವಿ ಶಾ ಗಳಿಕೆ 26 ಎಸೆತಗಳಿಂದ 49 ರನ್‌ (5 ಬೌಂಡರಿ, 4 ಸಿಕ್ಸರ್‌). ಇದರೊಂದಿಗೆ ರಹಾನೆ ಕಳೆದ 5 ಪಂದ್ಯಗಳಲ್ಲಿ 321 ರನ್‌ ಪೇರಿಸಿದಂತಾಯಿತು.

ದಿಲ್ಲಿಗೆ ಗೆಲುವು
ಕೊನೆಯ ಪಂದ್ಯದಲ್ಲಿ ದಿಲ್ಲಿ 19 ರನ್ನುಗಳಿಂದ ಉತ್ತರಪ್ರದೇಶವನ್ನು ಪರಾಭವಗೊಳಿಸಿತು. ದಿಲ್ಲಿ 3 ವಿಕೆಟಿಗೆ 193 ರನ್‌ ಗಳಿಸಿದರೆ, ಯುಪಿ ಭರ್ತಿ 20 ಓವರ್‌ಗಳಲ್ಲಿ 174ಕ್ಕೆ ಆಲೌಟ್‌ ಆಯಿತು. ದಿಲ್ಲಿ ಪರ ಅನುಜ್‌ ರಾವತ್‌ ಅಜೇಯ 73 ರನ್‌ ಹೊಡೆದರು. ಪ್ರಿನ್ಸ್‌ ಯಾದವ್‌ 3, ಸುಯಶ್‌ ಶರ್ಮ ಮತ್ತು ನಾಯಕ ಆಯುಷ್‌ ಬದೋನಿ 2 ವಿಕೆಟ್‌ ಉರುಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next