ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಭಾರತದ ಕಾಲೆಳೆಯಲು ನಕಲಿ ವಿಡಿಯೋ ಅಪ್ಲೋಡ್ ಮಾಡಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ವಿರುದ್ಧ ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ವಾಗ್ದಾಳಿ ನಡೆಸಿದ್ದಾರೆ.
ಭಾರತದ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ವಿರೊಧಿಸುವ ಬರದಲ್ಲಿ ಇಮ್ರಾನ್ ಖಾನ್, ಪೊಲೀಸರು ವ್ಯಕ್ತಿಯೊಬ್ಬನಿಗೆ ಥಳಿಸುತ್ತಿರುವ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿ ‘ಮುಸ್ಲಿಮರ ಮೇಲೆ ಭಾರತದ ಪೊಲೀಸರು ದೌರ್ಜನ್ಯ ನೋಡಿ ಎಂದು ಟ್ವೀಟ್ ಮಾಡಿದ್ದರು. ಆ ಮೂಲಕ ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೀಡು ಮಾಡಲು ಯತ್ನಿಸಿದ್ದರು.
ಆದರೇ ಈ ವಿಡಿಯೋ ಏಳು ವರ್ಷದ ಹಿಂದೆ ಬಾಂಗ್ಲಾದೇಶದಲ್ಲಿ (ಆರ್ ಎಬಿ- ರ್ಯಾಪಿಡ್ ಆ್ಯಕ್ಷನ್ ಬೆಟಾಲಿಯನ್) ಪೊಲೀಸರು ಅಲ್ಲಿನ ಉಗ್ರಗಾಮಿ ಸಂಘಟನೆ ಸದಸ್ಯ ತಪ್ಪಿಸಿಕೊಂಡು ಹೋಗುತ್ತಿರುವಾಗ ಥಳಿಸಿದ್ದ ಘಟನೆಯಾಗಿದೆ. ಆದರೀಗ ಇಮ್ರಾನ್ ಖಾನ್ ಅವರ ಹಳೆಯ ದುರಾಭ್ಯಾಸಗಳು ಕಷ್ಟಪಟ್ಟು ಸಾಯುತ್ತವೆ “ಎಂದು ಸೈಯದ್ ಅಕ್ಬರುದ್ದೀನ್ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವಿಚಾರವಾಗಿ ಕೇಂದ್ರ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಅವರೂ ಕೂಡ ಟ್ವೀಟ್ ಮಾಡಿದ್ದು, ಇಮ್ರಾನ್ ಖಾನ್ ಟ್ವೀಟ್ ಮಾಡಿರುವ ವಿಡಿಯೋ ಭಾರತದ್ದು ಅಲ್ಲ. 2013ರ ಮೇ ತಿಂಗಳಿನಲ್ಲಿ ಬಾಂಗ್ಲಾದೇಶದ ರ್ಯಾಪಿಡ್ ಆ್ಯಕ್ಷನ್ ಬೆಟಾಲಿಯನ್ ನಡೆಸಿದ್ದ ಕಾರ್ಯಾಚರಣೆಯಾಗಿದೆ ಎಂದು ತಿಳಿಸಿದ್ದಾರೆ.
ಈ ವಿಚಾರ ತಿಳಿಯದೇ ಇಮ್ರಾನ್ ಖಾನ್ ವಿಡಿಯೋ ಅಪ್ಲೋಡ್ ಮಾಡಿದ್ದರು. ಆದರೆ ಈ ವಿಚಾರವನ್ನು ಪತ್ತೆ ಮಾಡಿದ ನೆಟ್ಟಿಗರು ಇಮ್ರಾನ್ ಖಾನ್ ರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಟ್ವೀಟ್ ವೈರಲ್ ಆಗುತ್ತಿದ್ದಂತೆಯೇ ಇಮ್ರಾನ್ ಖಾನ್ ಖಾತೆಯಿಂದ ಆ ಟ್ವೀಟ್ ಡಿಲೀಟ್ ಮಾಡಲಾಗಿದೆ.