Advertisement

ಸಿಡ್ನಿ ಟೆಸ್ಟ್‌: ಪೂಜಾರ ಮೂರನೇ ಶತಕದ ಪವರ್‌

11:00 PM Jan 03, 2019 | Team Udayavani |

ಸಿಡ್ನಿ: “ಸಿಡ್ನಿ ಕ್ರಿಕೆಟ್‌ ಗ್ರೌಂಡ್‌’ನಲ್ಲಿ ಗುರುವಾರ ಮೊದಲ್ಗೊಂಡ “ನ್ಯೂ ಇಯರ್‌ ಟೆಸ್ಟ್‌’ ಪಂದ್ಯದಲ್ಲಿ ಭಾರತ ಭರವಸೆಯ ಆರಂಭ ಪಡೆದಿದೆ. ಚೇತೇಶ್ವರ್‌ ಪೂಜಾರ ಅವರ ಅಜೇಯ ಶತಕ ಹಾಗೂ ಮಾಯಾಂಕ್‌ ಅಗರ್ವಾಲ್‌ ಅವರ ಅಮೋಘ ಬ್ಯಾಟಿಂಗ್‌ ಸಾಹಸದಿಂದ 4 ವಿಕೆಟಿಗೆ 303 ರನ್‌ ಪೇರಿಸಿದೆ.

Advertisement

ಈ ಟೆಸ್ಟ್‌ ಪಂದ್ಯವನ್ನು ಡ್ರಾ ಮಾಡಿಕೊಂಡರೂ ಭಾರತ ಮೊದಲ ಬಾರಿಗೆ ಆಸ್ಟ್ರೇಲಿಯ ನೆಲದಲ್ಲಿ ಟೆಸ್ಟ್‌ ಸರಣಿ ಗೆದ್ದು ಇತಿಹಾಸ ನಿರ್ಮಿಸಲಿದೆ. ಮೊದಲ ದಿನದಾಟ ಗಮನಿಸಿದಾಗ ಕೊಹ್ಲಿ ಪಡೆಗೆ ಇಂಥದೊಂದು ಹಾದಿ ತೆರೆಯಲ್ಪಟ್ಟಿರುವುದು ಗೋಚರಕ್ಕೆ ಬರುತ್ತದೆ. 450ರ ತನಕ ಸ್ಕೋರ್‌ ವಿಸ್ತರಿಸಿದರೆ ಆಸ್ಟ್ರೇಲಿಯದ ಸಮಬಲದ ಯೋಜನೆ ವಿಫ‌ಲವಾಗುವುದರಲ್ಲಿ ಅನುಮಾನವಿಲ್ಲ. ಅಲ್ಲದೇ, ಕೊನೆಯಲ್ಲಿ ಬ್ಯಾಟಿಂಗ್‌ ನಡೆಸುವ ಕಠಿನ ಸವಾಲು ಕೂಡ ಆಸೀಸ್‌ಗೆ ಎದುರಾಗಲಿದೆ. ಇದು ಭಾರತ ಪಾಲಿಗೊಂದು ಪ್ಲಸ್‌ ಪಾಯಿಂಟ್‌.

ಪೂಜಾರ ಶತಕ ಪರಾಕ್ರಮ
ಪೂಜಾರ ಮಾಸ್ಟರ್‌ ಕ್ಲಾಸ್‌ ಬ್ಯಾಟಿಂಗ್‌ ಮೂಲಕ ಅಜೇಯ 130 ರನ್‌ ಬಾರಿಸಿ ಆಸ್ಟ್ರೇಲಿಯಕ್ಕೆ ಸವಾಲಾಗಿ ಉಳಿದಿದ್ದಾರೆ. ಇದು ಪ್ರಸಕ್ತ ಸರಣಿಯಲ್ಲಿ ಪೂಜಾರ ಬಾರಿಸಿದ 3ನೇ ಶತಕವಾದರೆ, ಒಟ್ಟಾರೆಯಾಗಿ 18ನೇ ಟೆಸ್ಟ್‌ ಸೆಂಚುರಿ. ಇದಕ್ಕೂ ಮೊದಲು ಅಡಿಲೇಡ್‌ನ‌ಲ್ಲಿ 123, ಮೆಲ್ಬರ್ನ್ನಲ್ಲಿ 106 ರನ್‌ ರಾಶಿ ಹಾಕಿದ್ದರು. ಭರ್ತಿ 250 ಎಸೆತಗಳಿಗೆ ಉತ್ತರ ನೀಡಿರುವ ಪೂಜಾರ 16 ಬೌಂಡರಿ ಬಾರಿಸಿ ಮೆರೆದಿದ್ದಾರೆ. ಕಾಂಗರೂಗಳಿಗೆ ಸಿಂಹಸ್ವಪ್ನರಾಗಿ ಉಳಿದಿದ್ದಾರೆ. ಅವರ 100 ರನ್‌ 199 ಎಸೆತಗಳಿಂದ ಬಂತು.

ಸರಣಿಯ ನಡುವೆ ಕರೆ ಪಡೆದ ಕರ್ನಾಟಕದ ಆರಂಭಕಾರ ಮಾಯಾಂಕ್‌ ಅಗರ್ವಾಲ್‌ ಮತ್ತೂಂದು ದಿಟ್ಟ ಪ್ರದರ್ಶನ ತೋರ್ಪಡಿಸಿ 77 ರನ್ನುಗಳ ಕೊಡುಗೆ ಸಲ್ಲಿಸಿದರು. ಇದು 3 ಇನ್ನಿಂಗ್ಸ್‌ಗಳಲ್ಲಿ ಅಗರ್ವಾಲ್‌ ದಾಖಲಿಸಿದ 2ನೇ ಅರ್ಧ ಶತಕ. ಇವರು ಬೇರೂರಿ ನಿಂತಿದ್ದನ್ನು ಗಮನಿಸಿದಾಗ ಶತಕವೊಂದರ ನಿರೀಕ್ಷೆ ದಟ್ಟವಾಗಿತ್ತು. ಆದರೆ ಲಿಯೋನ್‌ ಇದಕ್ಕೆ ಅಡ್ಡಗಾಲಿಕ್ಕಿದರು. ಒಟ್ಟು 112 ಎಸೆತಗಳಿಗೆ ಜವಾಬಿತ್ತ ಅಗರ್ವಾಲ್‌ 7 ಬೌಂಡರಿ ಜತೆಗೆ 2 ಸಿಕ್ಸರ್‌ಗಳನ್ನೂ ಸಿಡಿಸಿ ರಂಜಿಸಿದರು.

ರಾಹುಲ್‌ ಮತ್ತೆ ವೈಫ‌ಲ್ಯ
ಮರಳಿ ಇನ್ನಿಂಗ್ಸ್‌ ಆರಂಭಿಸಲು ಇಳಿದ ಕೆ.ಎಲ್‌. ರಾಹುಲ್‌ ಅವರ ಬ್ಯಾಟಿಂಗ್‌ ಬರಗಾಲ ಮುಂದುವರಿಯಿತು. ತಂಡದ ಸ್ಕೋರ್‌ ಕೇವಲ 10 ರನ್‌ ಆಗಿದ್ದಾಗ, 2ನೇ ಓವರಿನಲ್ಲೇ ರಾಹುಲ್‌ ವಿಕೆಟ್‌ ಉರುಳಿತು. ಅವರ ಗಳಿಕೆ ಕೇವಲ 9 ರನ್‌. 2 ಬೌಂಡರಿ ಸಿಡಿಸಿ ಮುನ್ನುಗ್ಗುವ ಸೂಚನೆ ನೀಡಿದ ರಾಹುಲ್‌ಗೆ ಇನ್ನಿಂಗ್ಸ್‌ ವಿಸ್ತರಿಸಲು ಸಾಧ್ಯವಾಗಲಿಲ್ಲ. ಪರ್ತ್‌ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಸೊನ್ನೆ ಸುತ್ತಿದ ಕಾರಣ ರಾಹುಲ್‌ ಮೆಲ್ಬರ್ನ್ನಲ್ಲಿ ಸ್ಥಾನ ಕಳೆದುಕೊಂಡಿದ್ದರು. ಈಗ ರೋಹಿತ್‌ ಶರ್ಮ ಗೈರಲ್ಲಿ ಪುನಃ ಅವಕಾಶ ಪಡೆದರೂ ಇದನ್ನು ಬಳಸಿಕೊಳ್ಳಲು ಅವರಿಂದಾಗಲಿಲ್ಲ.

Advertisement

ರಾಹುಲ್‌ ವಿಕೆಟನ್ನು ಬೇಗನೇ ಕಿತ್ತು ಭಾರತದ ಮೇಲೆ ಸವಾರಿ ಮಾಡುವ ಯೋಜನೆಯಲ್ಲಿದ್ದ ಆತಿಥೇಯರಿಗೆ ಅಗರ್ವಾಲ್‌-ಪೂಜಾರ ನುಂಗಲಾರದ ತುತ್ತಾಗಿ ಪರಿಣಮಿಸಿದರು. ಇಬ್ಬರೂ ಸೇರಿಕೊಂಡು ಆಸೀಸ್‌ ದಾಳಿಯನ್ನು ಲೀಲಾಜಾಲವಾಗಿ ಎದುರಿಸಿದರು. 2ನೇ ವಿಕೆಟಿಗೆ 116 ರನ್‌ ಒಟ್ಟುಗೂಡಿಸಿ ಪರಿಸ್ಥಿತಿಯನ್ನು ಸುಧಾರಿಸಿದರು.

ಕೊಹ್ಲಿ 19 ಸಾವಿರ ರನ್‌
ನಾಯಕ ವಿರಾಟ್‌ ಕೊಹ್ಲಿ ಮತ್ತು ಉಪನಾಯಕ ಅಜಿಂಕ್ಯ ರಹಾನೆ ಕ್ರೀಸ್‌ ಆಕ್ರಮಿಸಿಕೊಳ್ಳಲು ವಿಫ‌ಲರಾದರು. ಕೊಹ್ಲಿ 59 ಎಸೆತಗಳಿಂದ 23 ರನ್‌ ಮಾಡಿ ಔಟಾದರೆ (4 ಬೌಂಡರಿ), ರಹಾನೆ 55 ಎಸೆತಗಳಿಂದ 18 ರನ್‌ ಮಾಡಿ ವಿಕೆಟ್‌ ಒಪ್ಪಿಸಿದರು. ಕೊಹ್ಲಿ ಬೇಗನೇ ಔಟಾದರೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 19 ಸಾವಿರ ರನ್‌ ಪೂರೈಸಿದ ಹಿರಿಮೆಗೆ ಪಾತ್ರರಾದರು. ಇದಕ್ಕೆ ಅವರು ಕೇವಲ 11 ರನ್‌ ಮಾಡಿದರೆ ಸಾಕಿತ್ತು.

ಪೂಜಾರ ಅವರೊಂದಿಗೆ 39 ರನ್‌ ಮಾಡಿರುವ ಹನುಮ ವಿಹಾರಿ ಕ್ರೀಸಿನಲ್ಲಿದ್ದಾರೆ (58 ಎಸೆತ, 5 ಬವಂಡರಿ). ಮೆಲ್ಬರ್ನ್ನಲ್ಲಿ ಮೊದಲ ಸಲ ಇನ್ನಿಂಗ್ಸ್‌ ಆರಂಭಿಸಿದ ವಿಹಾರಿ ಅವರನ್ನು ಮತ್ತೆ ಮಾಮೂಲು ಕ್ರಮಾಂಕಕ್ಕೆ ಕಳುಹಿಸಲಾಗಿತ್ತು.

ಕಪ್ಪುಪಟ್ಟಿ ಧರಿಸಿ ಆಡಿದ ಕ್ರಿಕೆಟಿಗರು
ಕಾಕತಾಳೀಯವೆಂಬಂತೆ, ಸಿಡ್ನಿ ಟೆಸ್ಟ್‌ ಪಂದ್ಯದ ಮೊದಲ ದಿನ ಎರಡೂ ತಂಡಗಳ ಆಟಗಾರರು ಕಪ್ಪುಪಟ್ಟಿ ಧರಿಸಿ ಆಡಲಿಳಿದಿದ್ದರು. ಬುಧವಾರ ನಿಧನ ಹೊಂದಿದ ಕ್ರಿಕೆಟ್‌ ಕೋಚ್‌ ರಮಾಕಾಂತ ಅಚೆÅàಕರ್‌ ಅವರಿಗೆ ಸಂತಾಪ ಸೂಚಿಸಲು ಟೀಮ್‌ ಇಂಡಿಯಾ ಸದಸ್ಯರೆಲ್ಲ ಕಪ್ಪುಪಟ್ಟಿ ಕಟ್ಟಿಕೊಂಡಿದ್ದರು.

ಇನ್ನೊಂದೆಡೆ ಆಸ್ಟ್ರೇಲಿಯ ಕ್ರಿಕೆಟಿಗರು, ಇತ್ತೀಚೆಗೆ ನಿಧನರಾದ ಮಾಜಿ ಕ್ರಿಕೆಟಿಗ ಬಿಲ್‌ ವಾಟ್ಸನ್‌ (87) ಗೌರವಾರ್ಥ ಕಪ್ಪುಪಟ್ಟಿ ಧರಿಸಿದ್ದರು. 41 ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿದ್ದ ವಾಟ್ಸನ್‌ 1,958 ರನ್‌ ಗಳಿಸಿದ್ದರು. ಇದರಲ್ಲಿ 6 ಶತಕ, 5 ಅರ್ಧ ಶತಕ ಒಳಗೊಂಡಿತ್ತು.

ಸ್ಕೋರ್‌ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್‌
ಮಾಯಾಂಕ್‌ ಅಗರ್ವಾಲ್‌    ಸಿ ಸ್ಟಾರ್ಕ್‌ ಬಿ ಲಿಯೋನ್‌    77
ಕೆ.ಎಲ್‌. ರಾಹುಲ್‌    ಸಿ ಮಾರ್ಷ್‌ ಬಿ ಹ್ಯಾಝಲ್‌ವುಡ್‌    9
ಚೇತೇಶ್ವರ್‌ ಪೂಜಾರ    ಬ್ಯಾಟಿಂಗ್‌    130
ವಿರಾಟ್‌ ಕೊಹ್ಲಿ    ಸಿ ಪೇನ್‌ ಬಿ ಹ್ಯಾಝಲ್‌ವುಡ್‌    23
ಅಜಿಂಕ್ಯ ರಹಾನೆ    ಸಿ ಪೇನ್‌ ಬಿ ಸ್ಟಾರ್ಕ್‌    18
ಹನುಮ ವಿಹಾರಿ    ಬ್ಯಾಟಿಂಗ್‌    39
ಇತರ        7
ಒಟ್ಟು  (4 ವಿಕೆಟಿಗೆ)        303
ವಿಕೆಟ್‌ ಪತನ: 1-10, 2-126, 3-180, 4-228.
ಬೌಲಿಂಗ್‌:
ಮಿಚೆಲ್‌ ಸ್ಟಾರ್ಕ್‌        18-0-75-1
ಜೋಶ್‌ ಹ್ಯಾಝಲ್‌ವುಡ್‌        20-7-51-2
ಪ್ಯಾಟ್‌ ಕಮಿನ್ಸ್‌        19-3-62-0
ನಥನ್‌ ಲಿಯೋನ್‌        29-5-88-1
ಮಾರ್ನಸ್‌ ಲಬುಶೇನ್‌        4-0-25-0

ಎಕ್ಸ್‌ಟ್ರಾ ಇನ್ನಿಂಗ್ಸ್‌
* ಚೇತೇಶ್ವರ್‌ ಪೂಜಾರ ಆಸ್ಟ್ರೇಲಿಯದ ಟೆಸ್ಟ್‌ ಸರಣಿಯೊಂದರಲ್ಲಿ 3 ಶತಕ ಹೊಡೆದ ಭಾರತದ 3ನೇ ಆಟಗಾರ. 1977-78ರಲ್ಲಿ ಸುನೀಲ್‌ ಗಾವಸ್ಕರ್‌, 2014-15ರಲ್ಲಿ ವಿರಾಟ್‌ ಕೊಹ್ಲಿ ಈ ಸಾಧನೆ ಮಾಡಿದ್ದರು.
* ಪೂಜಾರ ಸರಣಿಯೊಂದರಲ್ಲಿ 458 ರನ್‌ ಬಾರಿಸಿ ವೈಯಕ್ತಿಕ ದಾಖಲೆ ನಿರ್ಮಿಸಿದರು. ಇಂಗ್ಲೆಂಡ್‌ ಎದುರಿನ 2012ರ ತವರಿನ ಸರಣಿಯಲ್ಲಿ 438 ರನ್‌ ಗಳಿಸಿದ್ದು ಅವರ ಅತ್ಯುತ್ತಮ ನಿರ್ವಹಣೆಯಾಗಿತ್ತು.
* ಪೂಜಾರ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ 3ನೇ ಸಲ 400 ಪ್ಲಸ್‌ ರನ್‌ ಬಾರಿಸಿದರು. 2013 ಹಾಗೂ 2017ರ ತವರಿನ ಸರಣಿಯಲ್ಲಿ ಅವರಿಂದ ಈ ಸಾಧನೆ ದಾಖಲಾಗಿತ್ತು. ಇವೆರಡೂ ತವರಿನ ಸರಣಿಗಳಾಗಿದ್ದವು.
* ಪೂಜಾರ ಭಾರತ-ಆಸ್ಟ್ರೇಲಿಯ ನಡುವಿನ ಸರಣಿಯಲ್ಲಿ 3 ಸಲ 400 ಪ್ಲಸ್‌ ರನ್‌ ಹೊಡೆದ 3ನೇ ಬ್ಯಾಟ್ಸ್‌ಮನ್‌. ಉಳಿದಿಬ್ಬರೆಂದರೆ ಮ್ಯಾಥ್ಯೂ ಹೇಡನ್‌ ಮತ್ತು ಸಚಿನ್‌ ತೆಂಡುಲ್ಕರ್‌.
* ಈ ಸರಣಿಯಲ್ಲಿ 5 ಜತೆಯಾಟ ನಡೆಸಿದ ಪೂಜಾರ-ಕೊಹ್ಲಿ 3ನೇ ವಿಕೆಟಿಗೆ 373 ರನ್‌ ಒಟ್ಟುಗೂಡಿಸಿದರು. ಇದು ಆಸೀಸ್‌ ವಿರುದ್ಧದ ಸರಣಿಯೊಂದರಲ್ಲಿ 3ನೇ ವಿಕೆಟಿಗೆ ಭಾರತೀಯ ಜೋಡಿಯೊಂದು ಪೇರಿಸಿದ ಅತ್ಯಧಿಕ ಮೊತ್ತವಾಗಿದೆ. 2003-04ರ ಸರಣಿಯಲ್ಲಿ ದ್ರಾವಿಡ್‌-ತೆಂಡುಲ್ಕರ್‌ 363 ರನ್‌ ಒಟ್ಟುಗೂಡಿಸಿದ ದಾಖಲೆ ಪತನಗೊಂಡಿತು.
* ವಿರಾಟ್‌ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 19 ಸಾವಿರ ರನ್‌ ಪೂರ್ತಿಗೊಳಿಸಿದರು. ಅವರು ಈ ಸಾಧನೆಗೈದ ವಿಶ್ವದ 12ನೇ ಹಾಗೂ ಭಾರತದ 3ನೇ ಕ್ರಿಕೆಟಿಗ. ಉಳಿದಿಬ್ಬರೆಂದರೆ ತೆಂಡುಲ್ಕರ್‌ (34,357) ಮತ್ತು ದ್ರಾವಿಡ್‌ (24,208).
* ಕೊಹ್ಲಿ ಅತೀ ಕಡಿಮೆ ಇನ್ನಿಂಗ್ಸ್‌ಗಳಲ್ಲಿ (399) 19 ಸಾವಿರ ರನ್‌ ಬಾರಿಸಿ ತೆಂಡುಲ್ಕರ್‌ ದಾಖಲೆ ಮುರಿದರು (432 ಇನ್ನಿಂಗ್ಸ್‌). ಬ್ರಿಯಾನ್‌ ಲಾರಾ 3ನೇ ಸ್ಥಾನದಲ್ಲಿದ್ದಾರೆ (433).
* ಮಾಯಾಂಕ್‌ ಅಗರ್ವಾಲ್‌ ಮೊದಲ 3 ಟೆಸ್ಟ್‌ ಇನ್ನಿಂಗ್ಸ್‌ಗಳಲ್ಲಿ 2 ಅರ್ಧ ಶತಕ ಹೊಡೆದ ಭಾರತದ 3ನೇ ಆರಂಭಕಾರ. ಗಾವಸ್ಕರ್‌, ಪೃಥ್ವಿ ಶಾ ಉಳಿದಿಬ್ಬರು.

Advertisement

Udayavani is now on Telegram. Click here to join our channel and stay updated with the latest news.

Next