ಬೆಂಗಳೂರು: ಪೊಲೀಸರ ತನಿಖೆಯ ಮೇಲೆ ಅನುಮಾನ ವ್ಯಕ್ತಪಡಿಸುವ ಮೊದಲು ನಿಮ್ಮ ಸಹವಾಸ ಮಾಡಿದ ಮಹಿಳೆಯರೆಲ್ಲರೂ ಸಾವನಪ್ಪಿರುವುದರ ಹಿಂದಿನ ಅನುಮಾನ ಬಗೆಹರಿಸಿ ಎಂದು ಸೀರಿಯಲ್ ಕಿಲ್ಲರ್ ಸೈನೈಡ್ ಮೋಹನನಿಗೆ ಹೈಕೋರ್ಟ್ ಚಾಟಿ ಬೀಸಿದೆ.
ಮೈಸೂರು ಬಸ್‌ನಿಲ್ದಾಣದಲ್ಲಿ ನಡೆದಿದ್ದ ಸುನಂದಾ ಎಂಬಾಕೆಯ ಕೊಲೆ ಪ್ರಕರಣದಲ್ಲಿ ಆರೋಪಿ ಮೋಹನನಿಗೆ ಅಧೀನ ನ್ಯಾಯಾಲಯ ವಿಧಿಸಿರುವ ಮರಣದಂಡನೆ ಶಿಕ್ಷೆ ಖಾಯಂಗೊಳಿಸುವಂತೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಸಲ್ಲಿಸಿದ್ದ ಅರ್ಜಿ ವಿಚರಣೆಯನ್ನು ಸೋಮವಾರ ನ್ಯಾಯಮೂರ್ತಿ ರವಿ ಮಳಿಮಠ ಹಾಗೂ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರಿದ್ದ ವಿಭಾಗೀಯ ಪೀಠ ನಡೆಸಿತು.
ವಿಚಾರಣೆ ವೇಳೆ ಸ್ವತಃ ವಾದ ಮಂಡಿಸಿದ ಸೈನೈಡ್ ಮೋಹನ್, ನಾನು ಸುನಂದಾ ಅವರನ್ನು ಸೈನೈಡ್ ಕೊಟ್ಟು ಕೊಲೆಗೈದಿಲ್ಲ. ಆಕೆ ಕ್ರಿಮಿನಾಶಕ ದ್ರವ್ಯ ಸೇವಿಸಿ ಸಾವನ್ನಪ್ಪಿದ್ದಾರೆ. ಮಹಿಳೆ ಕೊಲೆಯಾದ ಪ್ರದೇಶದಲ್ಲಿ ನನ್ನ ದೂರವಾಣಿ ಸಂಖ್ಯೆ ರೀಚ್ ಆಗುತ್ತಿತ್ತು ಎಂದು ಪೊಲೀಸರು ವಿನಾಕಾರಣ ನನ್ನ ಮೇಲೆ ಆರೋಪ ಹೊರಿಸಿದ್ದಾರೆ. ಅವರು ಸಲ್ಲಿಸಿರುವ ತನಿಖಾ ವರದಿ ಹಾಗೂ ಎಫ್ಎಸ್‌ಎಲ್ ವರದಿಯ ಮೇಲೆ ಅನುಮಾನವಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪೊಲೀಸರು ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಸಿದ್ದಾರೆ. ಅವರ ತನಿಖೆಯ ಬಗ್ಗೆ ಅನುಮಾನ ವ್ಯಕ್ತಪಡಿಸುವ ಮೊದಲು ನಿನ್ನ ಸಹವಾಸ ಮಾಡಿದ ಮಹಿಳೆಯರಲ್ಲರೂ ಕೊಲೆಯಾಗಿದ್ದಾರಲ್ಲ, ಅವರಿಗೆ ಈ ಗತಿ ಬಂದಿರುವ ಅನುಮಾನ ಬಗೆಹರಿಸಿ ಸ್ಪಷ್ಟೀಕರಣ ನೀಡಬೇಕು ಎಂದು ಲಘುದಾಟಿಯಲ್ಲಿ ಪ್ರಶ್ನಿಸಿತು.
ಪ್ರಾಸಿಕ್ಯೂಶನ್ ಪರ ವಾದಿಸಿದ ವಕೀಲರು, ಆರೋಪಿ ಮಹಿಳೆ ಸುನಾಂದರನ್ನು ಕೊಲೆ ಮಾಡಿರುವ ಸಂಬಂಧ ಪೂರಕ ಸಾಕ್ಷ್ಯಾಧಾರಗಳಿವೆ. ಮಹಿಳೆಯನ್ನು ಆತನೇ ಕರೆದುಕೊಂಡು ಹೋದ ಬಗ್ಗೆ ಸಾಕ್ಷ್ಯಾ ಹೇಳಿಕೆಗಳಿವೆ. ಎಫ್ಎಸ್‌ಎಲ್ ವರದಿಯಲ್ಲೂ ಮಹಿಳೆ ಸೈನೈಡ್ ತಿಂದು ಮೃತಪಟ್ಟಿರುವ ಬಗ್ಗೆ ಉಲ್ಲೇಖವಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಶನ್ ಹಾಗೂ ಮೋಹನನ ವಾದ -ಪ್ರತಿವಾದ ಆಲಿಸಿದ ನ್ಯಾಯಪೀಠ, ವಿಚಾರಣೆಯನ್ನು ಮಂಗಳವಾರಕ್ಕೆ (ನ.14)ಮುಂದೂಡಿತು.