Advertisement

ಕೋವಿಡ್ ವಿರುದ್ಧ ಹೋರಾಟ: ಮೊದಲ ಸಾಲಲ್ಲಿ ಸ್ವಿಟ್ಸರ್ಲಂಡ್‌

01:00 PM Jun 09, 2020 | sudhir |

ಹಾಂಗ್‌ಕಾಂಗ್‌: ಚೀನದ ವುಹಾನ್‌ನಿಂದ ಪ್ರಾರಂಭವಾದ ಕೋವಿಡ್‌-19 ಸೋಂಕು ಇಂದು ವಿಶ್ವದ ಹಲವು ದೇಶಗಳಲ್ಲಿ ಹಾನಿಯನ್ನುಂಟುಮಾಡಿದ್ದು, ಜಗತ್ತಿನ ಬಹುತೇಕ ರಾಷ್ಟ್ರಗಳಿಗೆ ಹರಡಿ ಮರಣ ಮೃದಂಗ ಬಾರಿಸುತ್ತಲೇ ಇದೆ. ದಿನೇದಿನೆ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿರುವ ಕೋವಿಡ್ ಗೆ ಈಗಾಗಲೇ ವಿಶ್ವದ್ಯಾಂತ ಲಕ್ಷಾಂತರ ಜನ ಬಲಿಯಾಗಿದ್ದು, ಸೋಂಕಿತರ ಸಂಖ್ಯೆಯೂ ಏರುತ್ತಿದೆ. ಈ ಮಹಾಮರಿಯನ್ನು ಕಟ್ಟಿ ಹಾಕಲು ನಾನಾ ರಾಷ್ಟ್ರಗಳು ಕಠಿನ ಕ್ರಮಗಳನ್ನು ಜಾರಿ ಮಾಡಿದ್ದು, ಕಡಿವಾಣ ಹಾಕುವುದರಲ್ಲಿ ತಕ್ಕಮಟ್ಟಿನ ಯಶಸ್ಸು ಸಾಧಿಸಿದೆ.

Advertisement

ಈ ಹಿನ್ನೆಲೆಯಲ್ಲಿಯೇ ತಜ್ಞರ ತಂಡವೊಂದು ಸೋಂಕನ್ನು ಮಟ್ಟ ಹಾಕಿದ ವಿಶ್ವದ 100 ರಾಷ್ಟ್ರಗಳ ಕುರಿತಾಗಿ ವರದಿಯೊಂದನ್ನು ಸಿದ್ಧಪಡಿಸಿದ್ದು, ಸೋಂಕನ್ನು ನಿಯಂತ್ರಿಸುವಲ್ಲಿ ಮತ್ತು ಸುರಕ್ಷಾ ಕ್ರಮಗಳನ್ನು ಜಾರಿ ಮಾಡುವ ನಿಟ್ಟಿನಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ರಾಷ್ಟ್ರಗಳನ್ನು ಪಟ್ಟಿ ಮಾಡಿದೆ. ಈ ಕುರಿತಾದ ವರದಿ ಇಲ್ಲಿದೆ.

2014ರಲ್ಲಿ ಹಾಂಗ್‌ಕಾಂಗ್‌ನಲ್ಲಿ ಸ್ಥಾಪನೆಯಾಗಿದ್ದ ಡೀಪ್‌ ನಾಲೆಡ್ಜ್ ವೆಂಚರ್ಸ್‌ ಒಡೆತನದ ಹೂಡಿಕೆ ಸಂಸ್ಥೆಯಾಗಿರುವ ಡೀಪ್‌ ನಾಲೆಡ್ಜ್ ಗ್ರೂಪ್‌ ಕಂಪೆನಿಯ ಒಕ್ಕೂಟವು ಸಮೀಕ್ಷೆ ನಡೆಸಿ ಈ ವರದಿಯನ್ನು ಸಿದ್ಧಪಡಿಸಿದೆ.

ವರದಿಯ ಪ್ರಕಾರ ಸ್ವಿಟ್ಸರ್ಲಂಡ್‌ ಕೋವಿಡ್‌-19 ಅನ್ನು ಎದುರಿಸುವಲ್ಲಿ ಸಫಲವಾಗಿದ್ದು, ಅತ್ಯಂತ ಸುರಕ್ಷಾ ಗುರುತಿಸಲ್ಪಟ್ಟು ಅಗ್ರಸ್ಥಾನದಲ್ಲಿದೆ. ಆಫ್ರಿಕಾ, ದಕ್ಷಿಣ ಅಮೆರಿಕ, ಮಧ್ಯಪ್ರಾಚ್ಯ ಹಾಗೂ ಏಷ್ಯಾ ಪೆಸಿಫಿಕ್‌ನ ಕೆಲವು ದೇಶಗಳು ಸದ್ಯ ಸೋಂಕಿನ ತೀವ್ರತೆಗೆ ತೆರೆದುಕೊಳ್ಳುವ ಮೂಲಕ ಹೆಚ್ಚು ಅಪಾಯಕಾರಿ ಪ್ರದೇಶಗಳಾಗಿ ಗುರುತಿಸಿಕೊಂಡಿವೆ ಎಂದು ವರದಿ ತಿಳಿಸಿದೆ.

ಈ ವರದಿಯು 130 ಪರಿಮಾಣಾತ್ಮಕ ಮತ್ತು ಗುಣಾತ್ಮಕ ಮಾನದಂಡಗಳನ್ನು ಆಧರಿಸಿಕೊಂಡಿದೆ. ಮುಖ್ಯವಾಗಿ ಸಂಪರ್ಕತಡೆ ನಿಯಮವನ್ನು ಪಾಲಿಸುವಲ್ಲಿ ದಕ್ಷತೆ, ಸೋಂಕು ಪ್ರದೇಶಗಳ ಕುರಿತಾದ ಮೇಲ್ವಿಚಾರಣೆ ಮತ್ತು ಪತ್ತೆ, ಆರೋಗ್ಯ ಸಿದ್ಧತೆ ಮತ್ತು ಸರಕಾರದ ದಕ್ಷತೆ ಸಹಿತ ಹಲವು ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಸುಮಾರು 11,400ಕ್ಕೂ ದಾಟಾಗಳನ್ನು ಒಳಗೊಂಡಿತ್ತು. ಈ ಎಲ್ಲ ಅಂಶಗಳ ಅನ್ವಯ ವರದಿ ಸಿದ್ಧಪಡಿಸಿದ್ದು, ಮಾನದಂಡಗಳ ಆಧಾರದ ಮೇಲೆ ದರ್ಜೆಯನ್ನು ನೀಡಲಾಗಿದೆ.

Advertisement

ವಿಶೇಷವೆಂದರೆ ಬಿಕ್ಕಟ್ಟಿನ ಪ್ರಾರಂಭದಲ್ಲಿ ಅತಿ ಹೆಚ್ಚು ಸಾವು ನೋವುಗಳನ್ನು ಅನುಭವಿಸಿದ ರಾಷ್ಟ್ರಗಳೇ ಈಗ ಅತ್ಯುನ್ನತ ಸ್ಥಾನದಲ್ಲಿದ್ದು, ಪಿಡುಗಿನಿಂದ ಚೇತರಿಸಿಕೊಳ್ಳುವುದರೊಂದಿಗೆ ಆರ್ಥಿಕವಾಗಿಯೂ ಬಲವಾಗುತ್ತಿವೆ ಎಂದು ವರದಿ ಹೇಳಿದೆ.
ಟಾಪ್‌ ಹತ್ತು ರಾಷ್ಟ್ರಗಳಲ್ಲಿ ಸ್ವಿಟ್ಸರ್ಲಂಡ್‌, ಜರ್ಮನಿ, ಇಸ್ರೇಲ್‌, ಸಿಂಗಾಪುರ, ಜಪಾನ್‌, ಆಸ್ಟ್ರಿಯಾ, ಚೀನ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್‌ ಹಾಗೂ ದಕ್ಷಿಣ ಕೊರಿಯಾ ಗುರುತಿಸಿಕೊಂಡಿವೆ. ಭಾರತ 56ನೇ ಸ್ಥಾನದಲ್ಲಿದೆ.

ಪಟ್ಟಿಯ ಕೊನೆಯಲ್ಲಿ ಪನಾಮ, ಬ್ರೆಜಿಲ್‌, ಮೊರಾಕೊ, ಅಲ್ಜೀರಿಯಾ, ಹೊಂಡುರಾಸ್‌, ಪರಾಗ್ವೆ, ಪೆರು, ಇಂಡೋನೇಷ್ಯಾ, ಕಾಂಬೋಡಿಯಾ, ಲಾವೋಸ್‌, ಬಹಾಮಾಸ್‌ ಮೊದಲಾದ ದೇಶಗಳಿವೆ.

ನ್ಯೂಜಿಲೆಂಡ್‌ ಈಗ ಸೋಂಕುಮುಕ್ತ
ವೆಲ್ಲಿಂಗ್ಟನ್‌: ವಿಶ್ವದೆಲ್ಲೆಡೆ ಇದುವರೆಗೂ 70,81,811ಕ್ಕೂ ಹೆಚ್ಚು ಜನರಿಗೆ ಕೋವಿಡ್ ಸೋಂಕು ತಗುಲಿದ್ದು, 4,05,074ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಈವರೆಗೆ 34,55,104ಕ್ಕೂ ಹೆಚ್ಚು ಜನ ಚೇತರಿಸಿಕೊಂಡಿದ್ದಾರೆ. ಈ ನಡುವೆಯೇ ಇತ್ತ ನ್ಯೂಜಿಲೆಂಡ್‌ ಸೋಂಕುಮುಕ್ತ ದೇಶವಾಗಿದ್ದು, ಸೋಂಕಿಗೆ ಒಳಗಾಗಿದ್ದ ಅಂತಿಮ ವ್ಯಕ್ತಿಯೂ ಚೇತರಿಸಿಕೊಂಡಿದ್ದಾನೆ ಎಂದು ನ್ಯೂಜಿಲೆಂಡ್‌ನ‌ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿ ಸುಮಾರು 17 ದಿನಗಳಿಂದ ಯಾವುದೇ ಹೊಸ ಕೋವಿಡ್‌-19 ಪ್ರಕರಣಗಳು ಪತ್ತೆಯಾಗಿಲ್ಲ. ಆ ಮೂಲಕ ದೇಶದಲ್ಲಿ ಸೋಂಕು ನಿರ್ಮೂಲನೆ ಆಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಆದರೆ ಬೇರೆ ದೇಶಗಳಿಂದ ಸೋಂಕು ಮತ್ತೆ ನ್ಯೂಜಿಲೆಂಡ್‌ಗೆ ಹರಡುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿರುವ ಆರೋಗ್ಯ ಅಧಿಕಾರಿಗಳು, ಈ ನಿಟ್ಟಿನಲ್ಲಿ ಸಾಕಷ್ಟು ಮುಂಜಾಗರೂಕತೆ ಕೈಗೊಂಡಿದ್ದಾರೆ. ದೇಶದ ಗಡಿಗಳನ್ನು ಮುಚ್ಚಲಾಗಿದ್ದು, ಸೀಮಿತ ವರ್ಗಕ್ಕೆ ಕೆಲವು ವಿನಾಯಿತಿಗಳನ್ನು ನೀಡಲಾಗಿದೆ.

50 ಲಕ್ಷ ಜನಸಂಖ್ಯೆ ಹೊಂದಿರುವ ರಾಷ್ಟ್ರಕ್ಕೆ ಸೋಂಕನ್ನು ತೊಡೆದುಹಾಕಲು ಹಲವಾರು ಅಂಶಗಳು ಸಹಾಯ ಮಾಡಿವೆ. ಆರಂಭದ ದಿನಗಳಲ್ಲಿಯೇ ಅಲ್ಲಿನ ಪ್ರಧಾನಿ ಜಸಿಂಡಾ ಅಡೆರ್ನ್ ಅವರು ಕಟ್ಟುನಿಟ್ಟಾದ ಲಾಕ್‌ಡೌನ್‌ ಹೇರಿದ್ದರು. ಇದರ ಫಲವಾಗಿ ನ್ಯೂಜಿಲೆಂಡ್‌ ಕೋವಿಡ್ ಮುಕ್ತವಾಗಿದೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next