ಸ್ಟಾಡ್: ಇಟಲಿಯ ಮ್ಯಾಟಿಯೊ ಬರೆಟಿನಿ ಮೊದಲ ಬಾರಿಗೆ “ಸ್ವಿಸ್ ಓಪನ್ ಟೆನಿಸ್’ ಪ್ರಶಸ್ತಿ ಜಯಿಸಿದ್ದಾರೆ. ರವಿವಾರದ ಫೈನಲ್‌ನಲ್ಲಿ ಅವರು ದ್ವಿತೀಯ ಶ್ರೇಯಾಂಕದ ಸ್ಪೇನ್ ಆಟಗಾರ ರಾಬರ್ಟೊ ಬಟಿಸ್ಟ ಅಗುಟ್ ವಿರುದ್ಧ 7-6 (9), 6-4 ಅಂತರದ ಗೆಲುವು ಸಾಧಿಸಿದರು.
ನೇರ ಸೆಟ್‌ಗಳ ಜಯ
ಇದು 22ರ ಹರೆಯದ ಬರೆಟಿನಿ ಆಡಿದ ಮೊದಲ ಟೂರ್ ಲೆವೆಲ್ ಫೈನಲ್ ಪಂದ್ಯವಾಗಿತ್ತು. ಫೈನಲ್ ಹಾದಿಯಲ್ಲಿ ಅವರು 2016ರ ಚಾಂಪಿಯನ್ ಫೆಲಿಶಿಯಾನೊ ಲೋಪೆಜ್, 4ನೇ ಶ್ರೇಯಾಂಕದ ಆ್ಯಂಡ್ರೆ ರುಬ್ಲೇವ್ ಮೊದಲಾದವರನ್ನು ಹಿಂದಿಕ್ಕಿದ್ದರು. ಈ ಕೂಟದಲ್ಲಿ ಒಂದೂ ಸೆಟ್ ಕಳೆದುಕೊಳ್ಳದೆ ಚಾಂಪಿಯನ್ ಎನಿಸಿದ್ದು ಬರೆಟಿನಿ ಹೆಗ್ಗಳಿಕೆ.
“ಅತ್ಯಂತ ಕಠಿನವಾದ ಪಂದ್ಯ ಇದಾಗಿತ್ತು. ಅಕಸ್ಮಾತ್ ನಾನು ಟೈ ಬ್ರೇಕರ್‌ನಲ್ಲಿ ಹಿನ್ನಡೆ ಕಂಡದ್ದಿದ್ದರೆ ಪ್ರಶಸ್ತಿ ಎತ್ತುವ ಬಗ್ಗೆ ಅನುಮಾನವಿತ್ತು’ ಎಂಬುದಾಗಿ ಬರೆಟಿನಿ ಪ್ರತಿಕ್ರಿಯಿಸಿದ್ದಾರೆ.