ಕಕ್ಕೇರಾ(ಸುರಪುರ): ಅತ್ತ ಪೂರ್ಣಗೊಳ್ಳದ ಸೇತುವೆ, ಇತ್ತ ಬದುಕಿನ ನೊಗ…ಪ್ರತಿ ಬಾರಿ ಬಸವಸಾಗರ ಜಲಾಶಯ ಭರ್ತಿಯಾಗಿ ಕೃಷ್ಣಾನದಿಗೆ ನೀರು ಹೊರಬಿಟ್ಟ ಕೂಡಲೇ ನಿಲಕಂಠರಾಯನ ಗಡ್ಡಿ ಗ್ರಾಮದ ಜನರಿಗೆ ಬದುಕಿನ ಪ್ರಶ್ನೆಗಳು ಏಳುತ್ತವೆ. ಇದಕ್ಕೆ ಕಾರಣ ನದಿಯಲ್ಲಿನ ಪ್ರವಾಹ. 40 ಗ್ರಾಮಗಳ ಈ ಹಳ್ಳಿಯ ಜನ ದೈನಂದಿನ ಬದುಕಿಗೆ ಆಶ್ರಯಿಸಿರುವುದು ನೆರೆಯ ಕಕ್ಕೇರಾ. ಅವರು ಪ್ರವಾಹವಿದ್ದರೂ, ಇಲ್ಲದಿದ್ದರೂ ನದಿ ದಾಟಿ ಇಲ್ಲಿಗೆ ಬಂದು ದಿನಸಿ ಸೇರಿದಂತೆ ಪ್ರತಿಯೊಂದು ವಸ್ತುಗಳನ್ನೂ ಖರೀದಿಸಿ ಹೋಗಬೇಕು.
ಇದೀಗ ಭಾರಿ ಮಳೆಯಾಗುತ್ತಿರುವ ಕಾರಣ ಜಲಾಶಯದಿಂದ ನದಿಗೆ ನೀರು ಹರಿಸಲಾಗಿದ್ದು, ಗಡ್ಡಿ ಸುತ್ತಲು ಪ್ರವಾಹ ಆವರಿಸಿದೆ. ಸಂಚಾರ ಸ್ಥಗಿತಗೊಂಡಿದ್ದರೂ ದೈನಂದಿನ ಬದುಕಿನ ವಸ್ತುಗಳಿಗಾಗಿ ಕಕ್ಕೇರಾಗೆ ಬಂದ ಲಕ್ಷ್ಮಣ, ಅಮರೇಶ, ಕನಕಪ್ಪ ಸೇರಿದಂತೆ ಆರು ಜನ ಆಹಾರ ಸಾಮಗ್ರಿಗಳನ್ನು ಖರೀದಿಸಿ ಈಜುಗಾಯಿಯೊಂದಿಗೆ ರಭಸವಾಗಿ ಹರಿಯುತ್ತಿರುವ ನದಿ ಈಜುವ ಸಾಹಸಕ್ಕೆ ಕೈ ಹಾಕಿ ಕೊನೆಗೂ ನದಿ ದಾಟಿ ನೀಲಕಂಠರಾಯನ ಗಡ್ಡಿ ತಲುಪಿದ್ದಾರೆ.
ಈಗಾಗಲೇ ಸೇತುವೆ ಕಾಮಗಾರಿಯೂ ಶುರುವಾಗಿದ್ದು ಇನ್ನೂ ಪೂರ್ಣವಾಗದೇ ಇರುವುದು ಇವರ ಸಮಸ್ಯೆಗೆ ಕಾರಣ. ಇವರ ಕ್ಷೇತ್ರದಲ್ಲಿದೆ ಈ ಗ್ರಾಮ: ಅಂದಹಾಗೆ ಇದು ರಾಯಚೂರು ಲೋಕಸಭಾ ಕ್ಷೇತ್ರದ ಸಂಸದ ಬಿ.ವಿ.ನಾಯಕ್,ಸುರಪುರ ವಿಧಾನಸಭೆ ಕ್ಷೇತ್ರದ ಶಾಸಕ ರಾಜೂಗೌಡ ನಾಯಕ್ ಅವರ ಕ್ಷೇತ್ರದಲ್ಲಿರುವ ಊರು.
ಸುಮಾರು ವರ್ಷಗಳಿಂದ ಪ್ರವಾಹ ಸಮಸ್ಯೆ ಇದೆ. ಸೇತುವೆ ನಿರ್ಮಿಸುತ್ತಿರುವುದು ಸಂತಸವಾದರೂ ಅದು ಪೂರ್ಣಗೊಳ್ಳ
ದಿರುವುದೇ ಸಂಚಾರಕ್ಕೆ ಸಮಸ್ಯೆಯಾಗಿದೆ.
– ಲಕ್ಷ್ಮಣ, ಗಡ್ಡಿ ಗ್ರಾಮಸ್ಥ
– ಬಾಲಪ್ಪ ಎಂ. ಕುಪ್ಪಿ