Advertisement

ಸ್ವಿಸ್‌ ಪ್ರವಾಸ ರದ್ದು?; ಸಂಪುಟ ವಿಸ್ತರಣೆಗಾಗಿ ಈ ನಿರ್ಧಾರ ಸಾಧ್ಯತೆ

10:18 AM Jan 11, 2020 | mahesh |

ಬೆಂಗಳೂರು: ರಾಜ್ಯದಲ್ಲಿನ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಮತ್ತಷ್ಟು ಗೋಜಲಾಗಿದ್ದು, ಇದಕ್ಕಾಗಿ ವಿದೇಶ ಪ್ರವಾಸವನ್ನೇ ಕೈಬಿಡಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನಿರ್ಧರಿಸಿದಂತೆ ಕಾಣುತ್ತಿದೆ. ಈ ಬಗ್ಗೆ ಅವರೇ ಸುಳಿವು ನೀಡಿದ್ದು, ಸ್ವಿಟ್ಸರ್‌ಲೆಂಡ್‌ ಪ್ರವಾಸ ಬಹುತೇಕ ಕೈಗೊಳ್ಳುವುದಿಲ್ಲ ಎಂದಿದ್ದಾರೆ.

Advertisement

ಇದರ ಮಧ್ಯೆಯೇ ಸಂಪುಟ ವಿಸ್ತರಣೆ ಬಗ್ಗೆ ಗಮನ ನೀಡಿರುವ ಅವರು, ಜ.11 ಅಥವಾ 12ರಂದು ದಿಲ್ಲಿಗೆ ತೆರಳುವ ಸಾಧ್ಯತೆ ಇದೆ. ಅಲ್ಲಿ ಪಕ್ಷದ ವರಿಷ್ಠರ ಜತೆ ಮಾತುಕತೆ ನಡೆಸಲಿದ್ದಾರೆ. ವರಿಷ್ಠರ ಒಪ್ಪಿಗೆ ದೊರತರೆ ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ರಾಜ್ಯ ಬಿಜೆಪಿ ಕೋರ್‌ ಕಮಿಟಿ ಸಭೆ ಕೂಡ ಶನಿವಾರ ಆಯೋಜನೆಯಾಗಿದ್ದು, ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಯಲಿದೆ. ಹಾಗಾಗಿ ಸಚಿವಾಕಾಂಕ್ಷಿಗಳಲ್ಲಿ ಉತ್ಸಾಹ ಮೂಡಿಸಿದ್ದು, ಹಲವು ಶಾಸಕರು ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸಚಿವ ಸ್ಥಾನಕ್ಕಾಗಿ ಲಾಬಿ ಮುಂದು ವರಿಸಿದ್ದಾರೆ. ನಿರೀಕ್ಷೆಯಂತೆ ನಡೆದರೆ ಜ. 20ರೊಳಗೆ ಸಂಪುಟ ವಿಸ್ತರಣೆಯಾಗಬಹುದು ಇಲ್ಲದಿದ್ದರೆ ಫೆಬ್ರವರಿ ಮೊದಲ ವಾರದವರೆಗೆ ಮುಂದೂಡಿಕೆಯಾಗಬಹುದು.

ಸ್ವಿಟ್ಸರ್‌ಲೆಂಡ್‌ನ‌ ದಾವೋಸ್‌ನಲ್ಲಿ ಜ. 20ರಿಂದ 24ರ ವರೆಗೆ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆಯ 50ನೇ ವಾರ್ಷಿಕ ಸಭೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಆಹ್ವಾನವಿದೆ. ಕೇಂದ್ರ ಸರಕಾರ ಹಾಗೂ ಪಕ್ಷದ ವರಿಷ್ಠರಿಗೂ ಮುಖ್ಯಮಂತ್ರಿಗಳು ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂಬ ಆಶಯವಿದೆ. ಆದರೆ ಮೊದಲಿನಿಂದಲೂ ಪ್ರವಾಸಕ್ಕೆ ಹಿಂದೇಟು ಹಾಕುತ್ತಿದ್ದ ಯಡಿಯೂರಪ್ಪ ಅವರು ಕೊನೆಗೂ ಪ್ರವಾಸ ಕೈಗೊಳ್ಳುವ ಮನಸ್ಸು ಮಾಡಿದಂತಿತ್ತು. ಈ ಬಗ್ಗೆ ವಿಧಾನಸೌಧದಲ್ಲಿ ಇತ್ತೀಚೆಗೆ ಪ್ರತಿಕ್ರಿಯಿಸಿದ್ದ ಯಡಿಯೂರಪ್ಪ, ನನಗೆ ಸ್ವಿಟ್ಸರ್‌ಲೆಂಡ್‌ ಪ್ರವಾಸ ಕೈಗೊಳ್ಳಬೇಕು ಎಂದು ಒತ್ತಡವಿದೆ. ಹಾಗಾಗಿ ಪ್ರವಾಸ ಕೈಗೊಳ್ಳುತ್ತಿದ್ದೇನೆ ಎಂದು ಹೇಳಿದ್ದರು. ಜ. 19ಕ್ಕೆ ತೆರಳಿ ಜ. 23ಕ್ಕೆ ಹಿಂದಿರುವುದು ಬಹುತೇಕ ನಿರ್ಧಾರವಾಗಿತ್ತು.

ರಾಗ ಬದಲಿಸಿದ ಯಡಿಯೂರಪ್ಪ
ಈಗ ಯಡಿಯೂರಪ್ಪ ಅವರು ರಾಗ ಬದಲಿಸಿದ್ದಾರೆ. ಗೃಹ ಕಚೇರಿ “ಕೃಷ್ಣಾ’ದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಸಿಎಂ, ಸ್ವಿಟ್ಸರ್‌ಲೆಂಡ್‌ಪ್ರವಾಸ ಬಹುತೇಕ ಕೈಗೊಳ್ಳುವುದಿಲ್ಲ ಎಂದು ಹೇಳಿದರು. ಇದಕ್ಕೆ ಕಾರಣವೇನೆಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡದ ಅವರ ನಡೆ ಸದ್ಯ ಕುತೂಹಲಕ್ಕೆ ಕಾರಣವಾಗಿದೆ.

Advertisement

ಶನಿವಾರ ಕೋರ್‌ ಕಮಿಟಿ ಸಭೆ
ರಾಜ್ಯ ಬಿಜೆಪಿ ಕಚೇರಿಯಲ್ಲಿ ಶನಿವಾರ ಕೋರ್‌ ಕಮಿಟಿ ಸಭೆ ಕರೆಯಲಾಗಿದೆ. ಸಭೆಯಲ್ಲಿ ಪ್ರಮುಖವಾಗಿ ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆ, ಉಪ ಮುಖ್ಯಮಂತ್ರಿ ಹುದ್ದೆ ಮುಂದುವರಿಕೆ ಇಲ್ಲವೇ ರದ್ದತಿ, ಹೊಸ ಹುದ್ದೆ ಸೃಷ್ಟಿ ಸಹಿತ ಇತರ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆಯಾಗುವ ಸಂಭವವಿದೆ.

ಸಚಿವಾಕಾಂಕ್ಷಿಗಳ ಒತ್ತಡ
ಉಪ ಚುನಾವಣೆ ನಡೆದು ಈಗಾಗಲೇ ಸುಮಾರು ಸಮಯ ಆಗಿದ್ದು, ಈ ಮೊದಲು ತಿಳಿಸಿದಂತೆ ಇನ್ನೂ ಸಚಿವ ಪದವಿ ಸಿಕ್ಕಿಲ್ಲ ಎಂದು ಪಕ್ಷಾಂತರಗೊಂಡು, ಹೊಸದಾಗಿ ಆಯ್ಕೆಗೊಂಡಿರುವ ಶಾಸಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅವರ ಒತ್ತಡ ಹೆಚ್ಚಾಗುತ್ತಿರುವುದು ಕೂಡ ಮುಖ್ಯಮಂತ್ರಿಗಳ ವಿದೇಶ ಪ್ರವಾಸ ರದ್ದುಗೊಳ್ಳಲು ಕಾರಣ ಎನ್ನಲಾಗುತ್ತಿದೆ. ಸಂಕ್ರಾಂತಿಯ ಬೆನ್ನಲ್ಲೇ ಸಂಪುಟ ವಿಸ್ತರಿಸಿ ಅಥವಾ ಪುನರ್‌ ರಚಿಸಿ ಚುನಾವಣೆಯಲ್ಲಿ ಆಯ್ಕೆಯಾಗಿರುವ ಎಲ್ಲ ಶಾಸಕರಿಗೂ ಸಚಿವ ಸ್ಥಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಹಿಂದೆಯೇ ಆಶ್ವಾಸನೆ ನೀಡಿದ್ದರು.

ಜ. 20ರೊಳಗೆ ಇಲ್ಲವೇ ಫೆಬ್ರವರಿಗೆ?
ಶನಿವಾರ ರಾಜ್ಯ ಬಿಜೆಪಿ ಕೋರ್‌ ಕಮಿಟಿ ಸಭೆ ನಡೆಸಿದ ಬಳಿಕ ಯಡಿಯೂರಪ್ಪ ಅವರು ದಿಲ್ಲಿಯಲ್ಲಿ ವರಿಷ್ಠರನ್ನು ಭೇಟಿಯಾಗುವ ಸಾಧ್ಯತೆ ಹೆಚ್ಚಿದೆ. ಆ ಸಂದರ್ಭ ದಲ್ಲಿ ವರಿಷ್ಠರ ಒಪ್ಪಿಗೆ ದೊರೆತರೆ ಜ. 20ರೊಳಗೆ ಸಂಪುಟ ವಿಸ್ತರಣೆಯಾಗಲಿದೆ. ವರಿಷ್ಠರ ಭೇಟಿ ಸಾಧ್ಯ ವಾಗದಿದ್ದರೆ ಫೆಬ್ರವರಿ ಮೊದಲ ವಾರಕ್ಕೆ ಮುಂದೂಡಿಕೆ ಯಾದರೂ ಆಶ್ಚರ್ಯವಿಲ್ಲ. ಸ್ವಿಟ್ಸರ್‌ಲೆಂಡ್‌ ಪ್ರವಾಸ ಕೈಗೊಳ್ಳದಿದ್ದರೆ ವರಿಷ್ಠರಿಗೂ ಅಸಮಾ ಧಾನವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಜ.13ರಂದು ವರಿಷ್ಠರ ಭೇಟಿ ಸಾಧ್ಯವಾಗದಿದ್ದರೆ ಯಡಿಯೂರಪ್ಪ ಅವರು ಸ್ವಿಸ್‌ ಪ್ರವಾಸ ಕೈಗೊಳ್ಳುವ ಸಂಭವವೂ ಇದೆ ಎಂದು ಮೂಲಗಳು ಹೇಳಿವೆ.

ಸಚಿವಾಕಾಂಕ್ಷಿಗಳ ದೌಡು
ಮುಖ್ಯಮಂತ್ರಿಗಳು ದಾವೋಸ್‌ ಪ್ರವಾಸ ಕೈಬಿಡುವ ಸಾಧ್ಯತೆ ಹಾಗೂ ಬಿಜೆಪಿ ಕೋರ್‌ ಕಮಿಟಿ ಸಭೆ ನಿಗದಿಯಾಗಿರುವ ಸುಳಿವು ಹಿಡಿದ ಹಲವರು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿದರು. ಉಪ ಚುನಾವಣೆಯಲ್ಲಿ ಗೆದ್ದ ಬಿಜೆಪಿ ಶಾಸಕರಾದ ಬಿ.ಸಿ.ಪಾಟೀಲ್‌, ಡಾ| ಕೆ. ಸುಧಾಕರ್‌, ಕೆ.ಗೋಪಾಲಯ್ಯ ಅವರು ಯಡಿಯೂರಪ್ಪ ಅವರನ್ನು ಡಾಲರ್ ಕಾಲನಿ ನಿವಾಸದಲ್ಲಿ ಭೇಟಿಯಾಗಿ ಚರ್ಚಿಸಿದರು. ಬಿಜೆಪಿ ಶಾಸಕ ನೆಹರು ಓಲೇಕಾರ್‌ ಅವರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಚಿವ ಸ್ಥಾನಕ್ಕೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಸಂಪುಟ ವಿಸ್ತರಣೆ ಸೇರಿದಂತೆ ಇತರ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಪ್ರಧಾನಿ, ಕೇಂದ್ರ ಗೃಹ ಸಚಿವರು, ಕೇಂದ್ರ ಹಣಕಾಸು ಸಚಿವರನ್ನು ಜ. 11, 12ರಂದು ಭೇಟಿಯಾಗಲು ಅವಕಾಶ ಕೋರಲಾಗಿದ್ದು, ಸಮಯ ಕೊಟ್ಟರೆ ಭೇಟಿಯಾಗಿ ಚರ್ಚಿಸಲಾಗುವುದು.
– ಬಿ.ಎಸ್‌. ಯಡಿಯೂರಪ್ಪ , ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next