ಮಂಗಳೂರು/ಉಡುಪಿ/ಸುಳ್ಯ: ಕರಾವಳಿ ಭಾಗದಲ್ಲಿ ಮುಂಗಾರು ದುರ್ಬಲಗೊಂಡಿದ್ದು, ಉರಿಸೆಕೆ ಹೆಚ್ಚಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಗರಿಷ್ಠ ಉಷ್ಣಾಂಶ ಏರಿಕೆಯಾಗುತ್ತಿದ್ದು, ಗುರುವಾರ ಮಂಗಳೂರಿನಲ್ಲಿ 30.2 ಡಿ.ಸೆ. ಗರಿಷ್ಠ ತಾಪಮಾನ ಮತ್ತು 23.5 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು. ವಾಡಿಕೆಗಿಂತ ತಲಾ 1 ಡಿ.ಸೆ. ಹೆಚ್ಚು ಇತ್ತು.
ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಮಾತ್ರ ಗುರುವಾರ ಮಧ್ಯಾಹ್ನದ ವೇಳೆಗೆ ಉತ್ತಮ ಮಳೆಯಾಗಿದೆ. ಉಳಿದಂತೆ ಕರಾವಳಿಯಾದ್ಯಂತ ಮಳೆ ಕಡಿಮೆಯಾಗಿದ್ದು, ಗುರುವಾರ ಬೆಳಗ್ಗೆ ಕೆಲವು ಕಡೆ ಸಾಧಾರಣ ಮಳೆಯಾಗಿದೆ.
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಆ. 18ರಿಂದ ಮೂರು ದಿನಗಳ ಕಾಲ ಕರಾವಳಿ ಭಾಗದಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಮಳೆ ಸುರಿಯುವ ನಿರೀಕ್ಷೆ ಇದೆ.
ಕುಕ್ಕೆಯಲ್ಲಿ ಮಳೆ
ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಗುರುವಾರ ಬೆಳಗ್ಗಿನಿಂದಲೇ ಮೋಡ ಕವಿದ ವಾತವರಣ ಕಂಡುಬಂದಿದ್ದು, ಬೆಳಗ್ಗೆ ಸಾಧಾರಣ ಮಳೆಯಾದರೆ, ಮಧ್ಯಾಹ್ನ ಸುಮಾರು ಒಂದು ತಾಸು ನಿರಂತರ ಮಳೆ ಸುರಿದಿದೆ. ಹಲವು ದಿನಗಳ ಬಳಿಕ ಹಳ್ಳ, ತೋಡುಗಳಲ್ಲಿ ಕೆಂಬಣ್ಣದ ನೀರು ಹರಿಯಿತು.
ಮಳೆಗಾಲವೆಂಬುದನ್ನು ಮರೆತು ಕೊಡೆ, ರೈನ್ ಕೋಟ್ ತರದೇ ಇದ್ದ ಹಲವರು ಮಳೆಗೆ ಒದ್ದೆಯಾದರು. ಹಲವರು ಅಂಗಡಿಗಳು, ಬಸ್ ತಂಗುದಾಣಗಳಲ್ಲಿ ಆಶ್ರಯ ಪಡೆಯುತ್ತಿರುವ ದೃಶ್ಯ ಕಂಡುಬಂತು.