Advertisement
ಸುಳ್ಯದ ಕೃಷಿಕ ನವೀನ್ ಚಾತುಬಾಯಿ ಎರಡು ವರ್ಷಗಳಿಂದ ಯಶಸ್ವಿಯಾಗಿ ಸಿಹಿನೀರಿನ ಮುತ್ತು ಬೆಳೆ ತೆಗೆಯುತ್ತಿದ್ದಾರೆ.
Related Articles
ಮುತ್ತು ಕೃಷಿಗಾಗಿ ಮನೆಯ ಅಂಗಳದಲ್ಲಿಯೇ ನವೀನ್ 5 ಸಾವಿರ ಲೀ. ಸಾಮರ್ಥ್ಯದ ಎರಡು ಟ್ಯಾಂಕ್‌ಗಳನ್ನು ಟರ್ಪಾಲು ಹಾಕಿ ನಿರ್ಮಿಸಿದ್ದಾರೆ. ಅದರಲ್ಲಿ ಬೆಂಗಳೂರಿನಿಂದ ತಂದ ಮಸಲ್ಸ್ (ಕಪ್ಪೆ ಚಿಪ್ಪು)ಗಳನ್ನು ಬಿಟ್ಟು ಸಾಕುತ್ತಿದ್ದಾರೆ. “ಕಲ್ಚರ್ಡ್ ಪರ್ಲ್’ ಎಂದು ಕರೆಯಲಾಗುವ ಈ ಸಿಹಿನೀರಿನ ಮುತ್ತು ಕೃಷಿಗೆ ಶುದ್ಧವಾದ ಸಿಹಿನೀರು ಮುಖ್ಯ ಅಗತ್ಯ. ಆ ನೀರಿನಲ್ಲಿ ಸಾಕುವ ಕಪ್ಪೆ ಚಿಪ್ಪುಗಳಿಗೆ ಆಲಂಕಾರಿಕ ವಿನ್ಯಾಸಗಳನ್ನು ಅಳವಡಿಸಬೇಕಾಗುತ್ತದೆ. ಕಪ್ಪೆ ಚಿಪ್ಪೊಂದರ ಎರಡೂ ಬದಿಗಳಲ್ಲಿ ಅಕ್ರಿಲಿಕ್ ಪೌಡರ್‌ನಿಂದ ತಯಾರಿಸಿದ ವಿನ್ಯಾಸಗಳನ್ನು ಅಳವಡಿಸುವ ಮೂಲಕ ಆಲಂಕಾರಿಕ ಮುತ್ತುಗಳನ್ನು ಪಡೆಯಬಹುದು. ಕಪ್ಪೆ ಚಿಪ್ಪಿನ ಆಹಾರವಾದ ಪಾಚಿ ಕೊಳದಲ್ಲಿ ಲಭ್ಯವಾಗುವಂತೆ ಮಾಡುವುದು ಹಾಗೂ ನೀರಿನ ಶುಚಿತ್ವವನ್ನು ಆಗಾಗ್ಗೆ ಗಮನಿಸುತ್ತಿದ್ದರೆ ಮುತ್ತು ಕೃಷಿ ಅಷ್ಟೇನೂ ತ್ರಾಸದಾಯಕವಲ್ಲ ಎಂದು ನವೀನ್ ವಿವರಿಸುತ್ತಾರೆ.
Advertisement
ಈ ಕೊಳಗಳಲ್ಲಿ ಕಪ್ಪೆ ಚಿಪ್ಪುಗಳ ಜತೆಗೆ ಮೀನು ಕೂಡ ಸಾಕಬಹುದು. ಕೊಳ, ತೊಟ್ಟಿ, ನೀರಿನ ಟ್ಯಾಂಕ್, ಹೊಂಡಗಳಲ್ಲಿ ಕೂಡ ನೀರು ತುಂಬಿ ಮುತ್ತು ಕೃಷಿ ಮಾಡಬಹುದು. 5 ಸಾವಿರ ಲೀ. ನೀರಿನ ಕೊಳದಲ್ಲಿ ಸುಮಾರು 500 ಕಪ್ಪೆ ಚಿಪ್ಪುಗಳನ್ನು ಸಾಕಬಹುದು ಎನ್ನುತ್ತಾರೆ ನವೀನ್. ಅವರು ಇದೇ ಕೊಳಗಳಲ್ಲಿ ಕಾಟ್ಲಾ, ರೋಹ್, ತಿಲಿಫಿಯಾ ಪ್ರಭೇದಗಳ ಮೀನು ಸಾಕುತ್ತಿದ್ದಾರೆ. ಅಡಿಕೆ, ತೆಂಗು, ಬಾಳೆ, ರಬ್ಬರ್, ಕಾಳುಮೆಣಸು, ನಾಟಿ ಕೋಳಿ ಸಾಕಣೆ, ಜೇನು ಕೃಷಿ, ಹಣ್ಣಿನ ಕೃಷಿ ಸೇರಿದಂತೆ ವಿವಿಧ ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.
ಕಪ್ಪೆ ಚಿಪ್ಪುಗಳನ್ನು ಕೊಳದಿಂದ ಹೊರತೆಗೆದು ಕ್ಲೋವ್ ಬೆರೆಸಿದ ನೀರಿನಲ್ಲಿ ಒಂದು ತಾಸು ಇರಿಸಿದಾಗ ಅವು ಸ್ಮತಿ ಕಳೆದುಕೊಳ್ಳುತ್ತವೆ. ಆಗ ಚಿಪ್ಪನ್ನು ತೆರೆದು ಚಿಪ್ಪಿನೊಳಗೆ ವಿನ್ಯಾಸವನ್ನು ಅಳವಡಿಸಲಾಗುತ್ತದೆ. ಬಳಿಕ ಚಿಪ್ಪನ್ನು ಕೊಳಕ್ಕೆ ಬಿಡಲಾಗುತ್ತದೆ. ಒಂದು ವಾರ ನಿಗಾ ಇರಿಸಬೇಕಾಗುತ್ತದೆ. ಕೆಲವು ಸಾಯುವ ಸಾಧ್ಯತೆ ಇದ್ದು, ಅವುಗಳನ್ನು ಹೊರತೆಗೆಯಬೇಕಾಗುತ್ತದೆ. ಬದುಕುಳಿದ ಚಿಪ್ಪುಗಳಲ್ಲಿ ಒಂದು ವರ್ಷದೊಳಗೆ ವಿನ್ಯಾಸವು ಮುತ್ತಾಗಿ ರೂಪುಗೊಳ್ಳುತ್ತದೆ. ಮತ್ತೆ ಹೊಸ ಚಿಪ್ಪುಗಳಲ್ಲಿ ಕೃಷಿಯನ್ನು ಆರಂಭಿಸಬೇಕಾಗುತ್ತದೆ. ಕಪ್ಪೆಚಿಪ್ಪು ತಲಾ 10 ರೂ.ನಂತೆ ಲಭ್ಯವಾಗುತ್ತದೆ. ಒಂದು ಚಿಪ್ಪಿನಲ್ಲಿ ಉತ್ಪತ್ತಿಯಾಗುವ ಎರಡು ಮುತ್ತುಗಳಿಗೆ 300 ರೂ. ಮಾರುಕಟ್ಟೆ ದರವಿದೆ.– ನವೀನ್ ಚಾತುಬಾಯಿ, ಕೃಷಿಕ – ಸತ್ಯಾ ಕೆ.