ಮಧ್ಯಮ ವರ್ಗದ ಸಂಪ್ರದಾಯಸ್ಥ ಕುಟುಂಬ ನಮ್ಮದು. ದುಡಿಯುವ ಕೈ ಎರಡಾದರೆ, ತಿನ್ನುವ ಬಾಯಿ ಹತ್ತು. ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ ಅನ್ನುವಂತಹ ಸ್ಥಿತಿ. ಮಡಿ- ಮೈಲಿಗೆ ಹೆಚ್ಚು. ಹಬ್ಬ, ಹರಿದಿನಗಳನ್ನು ಒಂದೂ ಬಿಡದೆ, ಆಚರಿಸಲೇಬೇಕಾದ ಜರೂರತ್ತು! ಹಬ್ಬ-ಹುಣ್ಣಿಮೆಗಳ ಖರ್ಚು ನಿಭಾಯಿಸಿ, ಉಸ್ಸಪ್ಪಾ ಎಂದು ನಿಟ್ಟುಸಿರು ಬಿಡುವ ಹೊತ್ತಿಗೇ ತಿಥಿ, ಪಕ್ಷಗಳು! ಮನೆ ಬಾಡಿಗೆ ಕಟ್ಕೊಂಡು, ನಮ್ಮ ಸ್ಕೂಲ್ ಫೀಸು, ಪುಸ್ತಕ, ಬಟ್ಟೆ ಬರೆಗಳನ್ನು ಹೊಂದಿಸೋಕೆ, ಅಪ್ಪ-ಅಮ್ಮ ಅದೆಷ್ಟು ಕಷ್ಟ ಪಡ್ತಾ ಇದ್ರೋ… ನಮಗೆ ಅರಿವಿರಲಿಲ್ಲ.
ಅಂಥಾದ್ದರಲ್ಲಿ, ನಾವು ಉಡುಗೊರೆ ಅಂತ ಯೋಚಿಸೋದೂ ಪಾಪವೇ… ಆದ್ರೂ, ನಾವು ಬುದ್ಧಿ ಬಲಿಯದ ಮಕ್ಳು ನೋಡಿ.. ಫ್ರೆಂಡ್‌ಗಳು, “ಇದನ್ನು ನಮ್ಮಪ್ಪ ಕೊಡಿಸಿದರು’, “ಅಮ್ಮ ಬೇರೆ ದೇಶಕ್ಕೆ ಹೋದಾಗ ಈ ಗಿಫ್ಟ್ ತಂದುಕೊಟ್ಟರು’ ಅನ್ನುವಾಗ, ನಮಗೂ ಗಿಫ್ಟ್ ಬಂದರೆ ಎಷ್ಟು ಚೆನ್ನ ಅಂತ ಅನ್ನಿಸೋದು. ಈಗಿನ ಮಕ್ಳು ಥರ- “ಇದೇ ಬೇಕು, ಕೊಡಿಸಿ’ ಅಂತ ಹೆತ್ತವರನ್ನು ಕೇಳ್ಳೋಕೂ ಗೊತ್ತಾಗ್ತಾ ಇರ್ಲಿಲ್ಲ. ಹೀಗಿರೋವಾಗಲೇ ನನ್ನ ಹುಟ್ಟುಹಬ್ಬ ಬಂತು. ಆಗೆÇಲ್ಲಾ, ಹುಟ್ಟುಹಬ್ಬಕ್ಕೆ ಹೊಸ ಬಟ್ಟೆ, ಆಚರಣೆ ಎಂಥಾದ್ದೂ ಇರ್ಲಿಲ್ಲ.
ಸ್ನಾನ ಮಾಡಿ, ಒಗೆದ ಬಟ್ಟೆ ಹಾಕ್ಕೊಂಡು, ದೊಡ್ಡವರಿಗೆ, ದೇವರಿಗೆ ನಮಸ್ಕಾರ ಮಾಡಿ, ಸ್ಕೂಲ್‌ಗೆ ಹೊರಡೋದು ಅಷ್ಟೇ. ಅಮ್ಮ, ದಿನಾ ಮಾಡೋ ಅಡುಗೆ ಜೊತೆ ಜಾಮೂನೋ, ಪಾಯಸವೋ ಮಾಡಿರೋರು. ಸ್ಕೂಲಿಂದ ಬಂದ ಮೇಲೆ, ಅದನ್ನು ಬಟ್ಟಲಲ್ಲಿ ಹಾಕ್ಕೊಂಡು ಚೂರು ಚೂರೇ ಮೆಲ್ಲುತ್ತಾ, ಖುಷಿಯಿಂದ ತಿಂದರೆ, ಹುಟ್ಟುಹಬ್ಬದ ಸಂಭ್ರಮಮುಗಿದಂತೆ. ಅವತ್ತೂ ಯುನಿಫಾರ್ಮ್ ಹಾಕ್ಕೊಂಡು ಸ್ಕೂಲಿಗೆ ಹೋದೆ. ಚಾಕಲೇಟ್ ಬಾಕ್ಸ್ ಹಿಡ್ಕೊಂಡು, ಹೊಸಾ ಬಟ್ಟೆ ತೊಟ್ಟುಕೊಂಡು ಹೋಗೋ ಕಾಲ ಬರುತ್ತಾ? ಅಂತ ಯೋಚಿಸುತ್ತಲೇ ತರಗತಿ ಒಳಗೆ ಹೋದರೆ ಎಂಥಾ ಸ್ವಾಗತ ಅಂತೀರಾ?
ಕಲರ್ ಪೇಪರ್, ಪ್ಲಾಸ್ಟಿಕ್ ಹೂಗಳು, ಚುಮುಕಿಗಳಿಂದ ರಂಗುರಂಗಿನ ಪ್ರಪಂಚ ಸೃಷ್ಟಿ ಆಗಿಬಿಟ್ಟಿತ್ತು. ಬೋರ್ಡ್ ಮೇಲೆ “ಹ್ಯಾಪಿ ಬರ್ತ್ ಡೇ’ ಅನ್ನೋ ದೊಡ್ಡ ಬರಹ ಬೇರೆ! ಆಗ ನಾನು ಆರನೇ ತರಗತಿ ಇರಬೇಕು. ನಂಗಂತೂ ತುಂಬಾ ನಾಚಿಕೆಯಾಗಿ, ಸುಮ್ಮನೆ ನನ್ನ ಜಾಗದಲ್ಲಿ ಕೂತುಬಿಟ್ಟೆ. ವಿಜ್ಞಾನದ ಟೀಚರ್ ಬಂದು ಅಟೆಂಡೆನ್ಸ್ ತೊಗೊಂಡು, “ಯಾರದ್ರೋ ಹುಟ್ಟುಹಬ್ಬ? ಇಷ್ಟೊಂದು ಗ್ರಾಂಡ್ ಆಗಿದೆ ಕ್ಲಾಸೂ…’ ಅಂದ್ರು.
ನಾನು ಖುಷಿಯಿಂದ ನನ್ಹೆಸರು ಹೇಳ್ತಾರೀಗ ಅಂತಿದ್ರೆ, ನಮ್ಮ ಕ್ಲಾಸಿನ ಪೋಲಿ ಪಟಾಲಂ ಆಗಿದ್ದ ಒಂದಷ್ಟು ತಮಿಳು ಹುಡುಗರು- “ನಮ್ ಗುರು ರಜನಿಕಾಂತ್ ಬರ್ತಡೇ ಸಾರ್, ಅದಕ್ಕೇ ಅಲಂಕಾರ ಮಾಡಿದ್ವಿ’ ಅಂದಿºಡೋದಾ! ತುಂಬಾ ಬೇಸರ ಆಗೊಯ್ತು. ಆ ಬೇಜಾರಿನಲ್ಲೇ ಶಾಲೆ ಮುಗಿಸಿ, ಕಾಲೆಳೆದುಕೊಂಡು ಮನೆಗೆ ಬಂದೆ. ಬ್ಯಾಗು ಒಂದು ಕಡೆ ಇಟ್ಟು, ಕೈ ಕಾಲು ತೊಳೆದು, “ಅವಲ್ಲಾ, ಏನು ಸ್ವೀಟ್ ಮಾಡಿದ್ಯ?’ ಅಂತ ಕೇಳ್ತಾ ಅಡುಗೆಮನೆಗೆ ನುಗ್ಗಿದ್ರೆ, ಅಜ್ಜಿ ನನ್ನನ್ನ ನೋಡಿ “ನಡಿ, ನಡಿ. ಒಳಗಡೆ ಬಂದು ಎಲ್ಲಾ ಮುಟ್ಟಿ ಮೈಲಿಗೆ ಮಾಡ್ಬೇಡ’ ಅಂತ ಗದರಿಸಿದ್ರು. ಅಮ್ಮ ಆವತ್ತು ಮುಟ್ಟು, ಮೂಲೆ ಹಿಡಿದು ಮಲಗಿದ್ರು.
ತುಂಬಾ ಬೇಸರದಿಂದ, ತಲೆಬಾಗಿಲಾಚೆ ಮೆಟ್ಟಿಲ ಮೇಲೆ ಎಷ್ಟು ಹೊತ್ತು ಕೂತಿದೊ… ಸಂಜೆ ದೇವರ ದೀಪ ಹಚ್ಚಿ, ಎಲ್ಲಾ ಮಕ್ಕಳನ್ನೂ ಕರೆದ್ರು ಅಜ್ಜಿ. ನಾನೂ ಹೋದೆ. ಒಂದು ಡಬ್ಬಿಯನ್ನು ನೆಲದ ಮೇಲಿಟ್ಟು- “ನಿಮ್ ತಾತ ತಂದರು… ನಿನಗಿದು, ತೊಗೊಳ್ಳೇ’ ಅಂದ್ರು ಅಜ್ಜಿ. ತೆಗೆದು ನೋಡಿದಾಗ, ಬಣ್ಣದ ದಾರದಲ್ಲಿ ಸುತ್ತಿದ್ದ ಬೆಳ್ಳಿ ಕಾಲು ಚೈನ್! ಅಕ್ಕ, ತಮ್ಮ, ತಂಗಿ ಎಲ್ಲರೂ ಚಪ್ಪಾಳೆ ತಟ್ಟಿದರು. ಶುಭಾಶಯ ಹೇಳಿದರು. ಪ್ರೀತಿಯ ತಾತ, ಹಿಂದಿನ ವಾರವೇ ನನ್ನ ಹುಟ್ಟುಹಬ್ಬಕ್ಕೆ ಕೊಡಲು ತಂದಿದ್ದರಂತೆ. ನನಗೆ ಹೇಳಿರಲಿಲ್ಲ. ಆ ದಿನ ಸಿಹಿ ಮಿಸ್ ಆದರೂ, ಗಿಫ್ಟ್ ಮಿಸ್ ಆಗಲಿಲ್ಲ! ಆ ಕಾಲ್ಗೆಜ್ಜೆಯೇ ನಾ ಪಡೆದ ಮೊದಲ ಗಿಫ್ಟ್ ಆಗಿತ್ತು!
* ಜಲಜಾ ರಾವ್