ಗುಡು ಗುಡು ಮುತ್ಯಾ ಬಂದಾನ…! ಗಡ ಗಡ ಸದ್ದ ಮಾಡ್ಯಾನ..! ಮೋಡದ ಮರೆಯಲ್ಲಿ ನಿಂತಾನ ರಪ ರಪ ಮಳೆಯನ್ನು ಸುರಿದಾನ..!
ಮಳೆ ಬಂದಾಗ ನನಗೆ ಮೊದಲು ನೆನಪಿಗೆ ಬರುವ ಹಾಡು ಅಂದರೆ ಇದೆ. ಸಂಜೆ ಶಾಲೆ ಬಿಡುವ ಸಮಯಕ್ಕೆ ಸರಿಯಾಗಿ ಜೋರಾಗಿ ಮಳೆ ಬರುತ್ತಿತ್ತು. ಹಿಂದೆಲ್ಲ ಶಾಲಾ ಬ್ಯಾಗ್, ಕೊಡೆ ಏನು ಇರುತ್ತಿರಲ್ಲಿಲ್ಲ. ಬಿತ್ತಲು ತಂದ ಭತ್ತದ ಬೀಜದ ಚೀಲವನ್ನು ಬೀಜ ಬಿತ್ತಿದ ಬಳಿಕ ಖಾಲಿ ಆದದ್ದನ್ನು ನಾವು ಶಾಲೆಯ ಚೀಲವನ್ನಾಗಿ ಬಳಸುತ್ತಿದ್ದೆವು. ಎಂತಹ ಮಳೆ ಬಂದರೂ ಪುಸ್ತಕ ನೆನೆಯದಂತೆ ಜಾಗರೂಕತೆಯಿಂದ ತೆಗೆದುಕೊಂಡು ಹೋಗುವುದು ಸಹ ಒಂದು ಸಾಹಸವಿದ್ದಂತೆ.
ಮಳೆಗಾಲದಲ್ಲಿ ಆಟವಾಡುತ್ತಾ ಗದ್ದೆಯ ಕೆಸರಲ್ಲಿ ಕಾಲು ಹೂತುಹೋಗುತ್ತಿತ್ತು. ನಮಗೆ ಕೆಸರಿನ ಆಟ ತುಂಬಾ ಇಷ್ಟವಾದ ಕಾರಣ ಗದ್ದೆಗೆ ಹೋದರೆ ಸಮಯ ಕಳೆದದ್ದೇ ತಿಳಿಯುತ್ತಿರಲಿಲ್ಲ. ಎಷ್ಟೋ ಬಾರಿ ಶಾಲಾ ಸಮವಸ್ತ್ರದಲ್ಲಿದ್ದಾಗ ಆಟವಾಡಿ ಪರಸ್ಪರ ಕೆಸರು ನೀರನ್ನು ಎರಚಿಕೊಳ್ಳುತ್ತಿದ್ದೆವು. ಮತ್ತೆ ಮನೆಯವರು ಬೈದಾಗ ತಲೆ ತಗ್ಗಿಸಿ ನಿಂತದ್ದು ಒಂದು ಮಧುರ ನೆನಪೆ. ದಾರಿ ಮಧ್ಯದಲ್ಲಿ ಸಿಗುವ ಪೇರಲ ಹಣ್ಣು, ಮಾವಿನ ಕಾಯಿಗಳನ್ನು ಚೀಲದಲ್ಲಿ ತುಂಬಿಸಿಕೊಂಡು ಅವುಗಳನ್ನು ತಿನ್ನುತ್ತಾ ಸಾಗುತ್ತಿದ್ದೆವು.
ತೆಂಗಿನ ಮರದ ಮಡಲು (ತೆಂಗಿನ ಗರಿ)ಯಲ್ಲಿ ಜರಗುಂಟಿ ಮಾಡಿ ಅದಲ್ಲಿ ಒಬ್ಬನು ಕೂರಿಸಿಕೊಂಡು ಧರ ಧರೆನೆ ಮಳೆನೀರಿನಲ್ಲಿ ಎಳೆದುಕೊಂಡು ಕೆಳಗೆ ಕೆಡವುತ್ತಿದ್ದೆವು. ಇದನ್ನು ಊರಿನ ಕೆಲವು ಜನರು ಮನೆಯಲ್ಲಿ ಹೆತ್ತವರಿಗೆ ನಾವು ಮಾಡುವ ಕೀಟಲೆಯನ್ನು ಹೇಳುತ್ತಿದ್ದರು. ಪರಿಣಾಮ ಆ ದಿನ ಮನೆಯಲ್ಲಿ ನಮ್ಮದೆಲ್ಲ ಮೌನವ್ರತ. ಕೆಲವೊಂದು ಸಲ ಗೆಳೆಯರೊಟ್ಟಿಗೆ ಕೀಟಲೆ, ತರಲೆ ಮಾಡುತ್ತಾ ನಡುವೆ ಹೊಡೆದಾಡುತ್ತಾ ಮನೆ ಯನ್ನು ಸೇರುತ್ತಿದ್ದೆವು. ನಮ್ಮ ವೇಷಭೂಷಣ ನೋಡಿ ಅಮ್ಮ ಗಾಬರಿಯಾಗುತ್ತಿದ್ದಳು. ಮಳೆ ಗುಡುಗಿಗಿಂತಲೂ ಜೋರಾಗಿಯೇ ಅಮ್ಮನ ಬೈಗುಳ ಇರುತ್ತಿದ್ದವು. ಮಿಂಚಿನಂತೆ ಒಂದೆರಡು ಏಟು ಬೀಳುತ್ತಿದ್ದವು. ಆಗ ನಾನು ಮಾತ್ರ ಏನು ಅರಿಯದ ಮುಗ್ಧನಂತೆ ನಿಲ್ಲುತ್ತಿದ್ದೆ. ಆ ಮೇಲೆ ಅಮ್ಮ ತಾನು ಸಮಾಧಾನಳಾಗಿ ನನಗೂ ಸಮಾಧಾನ ಮಾಡಿ ಕೈ- ಕಾಲು ತೊಳೆಸಿ, ತಲೆ ಒರೆಸಿ ಬಿಸಿ ಬಿಸಿ ಚಹಾ, ತಿನ್ನಲು ಏನಾದರೂ ಕೊಡುತ್ತಿದ್ದರು. ಇಷ್ಟೆಲ್ಲ ಗದ್ದಲದ ನಡುವೆ ಮಳೆ ಕೂಡ ಶಾಂತವಾಗುತ್ತಿತ್ತು.
–ಬಸವರಾಜ ಲಗಳಿ ಎಸ್.ಬಿ.ಆರ್ಟ್ಸ್, ಕೆ.ಸಿ.ವಿಜ್ಞಾನ ವಿಜಯಪುರ