ಮುಳುಗುವವನಿಗೆ ಹುಲ್ಲು ಕಡ್ಡಿಯ ಆಸರೆ ಸಿಕ್ಕಿದರೂ ಸಾಕು, ಹೇಗೋ ಬದುಕಿಬಿಡಬಹುದು. ಆ ಮಾತಿನಂತೆಯೇ, ಹುಲ್ಲು ಕಡ್ಡಿಯಿಂದಲೇ ಸ್ವಾವಲಂಬಿ ಬದುಕು ಕಟ್ಟಿಕೊಂಡ ಮಹಿಳೆ ರುಕ್ಮಾಬಾಯಿ ರಾಠೊಡ. ಮೇವು ವ್ಯಾಪಾರದಿಂದ ಹಣ ಸಂಪಾದಿಸಿ, ಕುಟುಂಬ ನಿರ್ವಹಣೆ ಮಾಡುತ್ತಿರುವ ರುಕ್ಮಾಬಾಯಿ, ಬುಡಕಟ್ಟು ಜನಾಂಗದವರು.
ಈಕೆ ವಿಜಯಪುರದ ಜಿಲ್ಲಾಧಿಕಾರಿ ಕಚೇರಿಯ ಸಮೀಪ ಮೇವು ಮಾರುತ್ತಾರೆ. ಹಜಾಪುರ ತಾಂಡಾದವರಾದ ರುಕ್ಮಾಬಾಯಿ, ಬೆಳಗ್ಗೆ 10ರಿಂದ ಸಂಜೆ 7ರವರೆಗೆ ವ್ಯಾಪಾರದಲ್ಲಿ ತೊಡಗಿರುತ್ತಾರೆ. ದ್ರಾಕ್ಷಿ ಬಳ್ಳಿ, ತೊಗರಿ ತೊಪ್ಪಲು, ಹುಲ್ಲು, ಜೋಳದ ಮೇವು, ಬನ್ನಿ ಮರದ ತೊಪ್ಪಲು, ಅಡ ತೊಪ್ಪಲು …ಹೀಗೆ ಜಾನುವಾರುಗಳಿಗೆ ಅಗತ್ಯವಾದ ಹಸಿ ಮೇವು ಮಾರುವುದು ಅವರ ಕಾಯಕ.
ಹಸಿ ಮೇವಿನ ಬೆಲೆ ಕೆ.ಜಿ.ಗೆ 10- 40 ರೂ.ವರೆಗೆ ಇದೆ. ನಗರದ ಸುತ್ತಮುತ್ತಲಿನ ಖಾಲೇಬಾಗ ತಾಂಡಾ, ಖಂಡಸಾರಿ ತಾಂಡಾಗಳಿಂದ ಏಳೆಂಟು ಜನ ಮೇವು ವ್ಯಾಪಾರಸ್ಥರು ಬರುವುದರಿಂದ ಸ್ಪರ್ಧೆಯೂ ಇರುತ್ತದೆ. ತೊಪ್ಪಲುಗಳನ್ನು ಬಾಡಿಗೆ ವಾಹನದಲ್ಲಿ ತಂದು, ವ್ಯಾಪಾರವಾಗದೆ ಖಾಲಿ ಕೈಯಲ್ಲಿ ಮನೆಗೆ ಹೋಗಿದ್ದೂ ಇದೆ ಅಂತಾರೆ ರುಕ್ಮಾಬಾಯಿ.
ತೊಪ್ಪಲು ಸಿಗದಿದ್ದಾಗ ಹೊಲದ ಮಾಲೀಕರ ಹತ್ತಿರ 150 ರೂ.ವರೆಗೆ ಚೌಕಾಸಿ ಮಾಡಿ, ದ್ರಾಕ್ಷಿ ತೊಪ್ಪಲನ್ನು ಖರೀದಿಸುವುದೂ ಉಂಟು. ಬೆಳಗ್ಗೆಯಿಂದ ಸಂಜೆಯವರೆಗೆ ವ್ಯಾಪಾರ ಮಾಡಿದರೂ ದಿನದ ದುಡಿಮೆ 200 ರೂ. ದಾಟುವುದಿಲ್ಲ. ಆದರೂ, ದುಡಿಮೆ ನಿಲ್ಲಿಸುವಂತಿಲ್ಲ.
“ಮಳೆಗಾಲದಾಗ ನಮಗ ಕುಂತು ಮಾರಾಕ ಚಲೋ ಜಾಗ ಇಲ್ರೀ. ನಮ್ಮ ಕಷ್ಟ ಮಕ್ಕಳಿಗೆ ಬ್ಯಾಡ ಅಂತ, ಅವ್ರನ್ನ ಸಾಲಿಗೆ ಕಳಿಸ್ತೀವ್ರೀ. ಬರಗಾಲದಾಗ ಹುಲ್ಲು ಸಿಗದೇ ಮರ ಹತ್ತಿ, ತೊಪ್ಪಲು ತಂದು ಮಾರಬೇಕ್ರೀ’…
-ರುಕ್ಮಾಬಾಯಿ
* ಬಸಮ್ಮ ಭಜಂತ್ರಿ