Advertisement
ಪಾಲಿಕೆಯ ಎಂಟು ವಲಯಗಳಲ್ಲಿ ಪ್ರಾಯೋಗಿಕವಾಗಿ ಈ ಹಿಂದೆ ನಿಯೋಜಿಸಲಾದ ಮೆಕ್ಯಾನಿಕಲ್ ಸ್ವೀಪಿಂಗ್ ವಾಹನಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿ ಸ್ವಚ್ಛತೆ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆ ವ್ಯಾಪಕ ಬಳಕೆಗೆ ಮತ್ತೆ 34 ವಾಹನಗಳ ಖರೀದಿಗೆ ಮುಂದಾಗಿದೆ. ಪೌರಕಾರ್ಮಿಕರ ನಿಯೋಜನೆ ಗಿಂತಲೂ ಯಂತ್ರಗಳು ಆರ್ಥಿಕ ಮಿತವ್ಯಯಕಾರಿ ಹಾಗೂ ಸ್ವಚ್ಛತೆಗೂ ಪರಿಣಾಮಕಾರಿ ಎಂಬ ಕಾರಣದಿಂದ ಪಾಲಿಕೆ ಈ ನಿರ್ಧಾರ ಕೈಗೊಂಡಿದೆ.
Related Articles
Advertisement
ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ: ಬಿಬಿಎಂಪಿ ವತಿಯಿಂದ ಖರೀದಿಸಿರುವ 9 ಯಾಂತ್ರಿಕ ಕಸ ಗುಡಿಸುವ ವಾಹನಗಳು ಶೆಡ್‌ಗಳಲ್ಲಿ ಇರಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಆದರೆ, ಎಂಟು ವಲಯಗಳಲ್ಲಿಯೂ ಯಂತ್ರಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದ್ದು, ವಾಹನಗಳು ಕೆಲಸ ಮಾಡುವ ಎಲ್ಲ ಮಾಹಿತಿಯನ್ನು ಪಾಲಿಕೆಯ ವೆಬ್‌ಸೈಟ್‌ನಲ್ಲಿ ಹಾಕಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಕ್ಷಣ ಕ್ಷಣದ ಮಾಹಿತಿ ಲಭ್ಯ: ಪಾಲಿಕೆಯಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಂದು ವಾಹನಕ್ಕೂ ಜಿಪಿಎಸ್ ಸಾಧನ, ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಇದರಿಂದಾಗಿ ವಾಹನಗಳು ನಿತ್ಯ ಎಲ್ಲಿ ಎಷ್ಟು ಸಮಯ ಕೆಲಸ ಮಾಡಿವೆ, ದೂರ ಕ್ರಮಿಸಿವೆ ಎಂಬ ಸಂಪೂರ್ಣ ಮಾಹಿತಿ ಪಾಲಿಕೆಯ ಅಧಿಕಾರಿಗಳಿಗೆ ದೊರೆಯಲಿದೆ. ಜತೆಗೆ ವಾಹನಗಳು ಕೆಲಸ ಮಾಡದೆ ನಿಂತಿರುವುದು ಸೇರಿ ಕ್ಷಣ ಕ್ಷಣದ ಮಾಹಿತಿ ಪಾಲಿಕೆಗೆ ಲಭ್ಯವಾಗಲಿದ್ದು, ಸುಳ್ಳು ದಾಖಲೆಗಳನ್ನು ನೀಡಿ ಬಿಲ್ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.
ಪಾಲಿಕೆಗೆ ಉಳಿತಾಯ: 100 ಮಂದಿ ಪೌರಕಾರ್ಮಿಕರು ಮಾಡುವ ಕೆಲಸ ಒಂದು ವಾಹನ ಮಾಡಲಿದ್ದು, ಇದರಿಂದ ಸಮಯ ಉಳಿತಾಯವಾಗಲಿದೆ. ಒಂದು ಯಂತ್ರಕ್ಕೆ ಪಾಲಿಕೆಯಿಂದ ತಿಂಗಳಿಗೆ 6 ಲಕ್ಷ ರೂ. ನೀಡಲಾಗುತ್ತಿದ್ದು, ಅದೇ 100 ಪೌರಕಾರ್ಮಿಕರಿಂದ ಆ ಕೆಲಸವನ್ನು ಮಾಡಿಸಿದರೆ 17 ಲಕ್ಷ ವೆಚ್ಚವಾಗುತ್ತದೆ. ಇದರೊಂದಿಗೆ ಪೌರಕಾರ್ಮಿಕರು ವಾಹನ ದಟ್ಟಣೆಯ ನಡುವೆ ಕೆಲಸ ಮಾಡಲು ಕಷ್ಟವಾಗುತ್ತದೆ. ಹಾಗಂತ ಪೌರಕಾರ್ಮಿಕರಿಗೆ ಕೆಲಸವಿಲ್ಲದಂತಾಗುತ್ತದೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿಯಾಗಿದ್ದು, ವಾರ್ಡ್ ರಸ್ತೆಗಳನ್ನು ಸ್ವಚ್ಛಗೊಳಿಸಲು ಅವರನ್ನು ಬಳಸಿಕೊಳ್ಳಲಾಗುವುದು ಎಂದು ಘನತ್ಯಾಜ್ಯ ವಿಭಾಗದ ಹಿರಿಯ ಅಧಿಕಾರಿ ವಿವರಿಸಿದರು.
ನಗರದ ಎಂಟು ವಲಯಗಳಲ್ಲಿ ಯಾಂತ್ರಿಕ ಕಸ ಗುಡಿಸುವ ಯಂತ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ. ಜಿಪಿಎಸ್ ಮೂಲಕ ವಾಹನಗಳು ಕಾರ್ಯನಿರ್ವಹಿಸುವ ಮಾಹಿತಿ ಪಡೆಯಲಾಗುತ್ತಿದ್ದು, ಅದನ್ನು ಆಧರಿಸಿ ಗುತ್ತಿಗೆದಾರರಿಗೆ ವೇತನ ನೀಡಲಾಗುತ್ತದೆ. ಹಾಗಾಗಿ ಮತ್ತೆ 34 ಯಂತ್ರಗಳನ್ನು ಖರೀದಿಗೆ ಟೆಂಡರ್ ಸಿದ್ಧಪಡಿಸಲಾಗುತ್ತಿದೆ. -ಸಫರಾಜ್ ಖಾನ್, ಘನತ್ಯಾಜ್ಯ ಮತ್ತು ಆರೋಗ್ಯ ವಿಭಾಗದ ಜಂಟಿ ಆಯುಕ್ತ ಕಳೆದೊಂದು ತಿಂಗಳಲ್ಲಿ ವಾಹನಗಳು ಸ್ವಚ್ಛಗೊಳಿಸಿದ ರಸ್ತೆಯ ಉದ್ದ
-ವಲಯ ದೂರ (ಕಿ.ಮೀ.ಗಳಲ್ಲಿ)
-ಪೂರ್ವ 1,104
-ಪಶ್ಚಿಮ 1,072
-ದಕ್ಷಿಣ 1,071
-ಯಲಹಂಕ 1,164
-ಮಹದೇವಪುರ 966
-ಬೊಮ್ಮನಹಳ್ಳಿ 1,030
-ಆರ್.ಆರ್.ನಗರ 1,096
-ಕೇಂದ್ರ ಕಚೇರಿ 1,122 * ವೆಂ. ಸುನೀಲ್ ಕುಮಾರ್