Advertisement

ಪ್ರಮುಖ ರಸ್ತೆಗಳ ಸ್ವಚ್ಛತೆಗೆ ಸ್ವೀಪಿಂಗ್‌ ಯಂತ್ರ

01:00 AM Jul 23, 2019 | Team Udayavani |

ಬೆಂಗಳೂರು: ನಗರದ ಪ್ರಮುಖ ರಸ್ತೆಗಳಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಮತ್ತು ಅಲ್ಲಲ್ಲಿ ಗುಂಡಿಗಳು ಬಿದ್ದಿದ್ದು, ರಸ್ತೆಗಳು ಧೂಳಿನಿಂದ ಕೂಡಿರುವುದು ಸಾಮಾನ್ಯ ಎನ್ನುವಂತಾಗಿದೆ. ಇನ್ನು ಪ್ರಮುಖ ರಸ್ತೆಗಳಲ್ಲಿ ಸಂಚಾರದಟ್ಟಣೆ ಇರುವ ಸಮಯದಲ್ಲೇ ಪೌರಕಾರ್ಮಿಕರು ರಸ್ತಗಳನ್ನು ಸ್ವಚ್ಛ ಮಾಡುವುದರಿಂದ ಧೂಳು ಸವಾರರ ಮುಖಕ್ಕೆ ರಾಚುವುದು ಹಾಗೂ ಮತ್ತಷ್ಟು ಸಂಚಾರದಟ್ಟಣೆಗೂ ಇದು ಕಾರಣವಾಗುತ್ತಿತ್ತು.

Advertisement

ಈ ಸಮಸ್ಯೆಗಳನ್ನು ತಪ್ಪಿಸಲು ಬಿಬಿಎಂಪಿಯು ತಂತ್ರಜ್ಞಾನ ಆಧಾರಿತ ಟ್ರಸ್ಟ್‌ ಮೌಂಟೆಡ್‌ ಸ್ವೀಪಿಂಗ್‌ (ಕಸಗುಡಿಸುವ)ಯಂತ್ರವನ್ನು ಪರಿಚಯಿಸಿದ್ದು, ಇದರ ಉಸ್ತುವಾರಿಯನ್ನು ಪ್ರಮುಖ ರಸ್ತೆಗಳ ಅಭಿವೃದ್ಧಿ ವಿಭಾಗಕ್ಕೆ ನೀಡಲಾಗಿದೆ. ನಿತ್ಯ ಬೆಳಗ್ಗೆ ಧೂಳಿನಿಂದ ವಾಹನ ಸವಾರರು, ಸಾರ್ವಜನಿಕರು ಮತ್ತು ಪೌರಕಾರ್ಮಿಕರೂ ಶ್ವಾಸಕೋಶ ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದರು.

ಈ ರಸ್ತೆಗಳಲ್ಲಿ ಸದಾ ವಾಹನ ಸಂಚಾರ ಇರುವುದರಿಂದ ಸ್ವಚ್ಛತೆ ಕಾಪಾಡಿಕೊಳ್ಳುವಲ್ಲಿ ಲೋಪವಾಗುತ್ತಿದೆ ಎನ್ನುವ ಆರೋಪಗಳು ಕೇಳಿಬಂದಿದ್ದವು. ಯಂತ್ರದ ಬಳಕೆಯಿಂದ ರಸ್ತೆಗಳು ಮತ್ತಷ್ಟು ಜಗ ಮಗಿಸಲಿದ್ದು, ಧೂಳಿನ ಸಮಸ್ಯೆಗೂ ಮುಕ್ತಿಸಿಗಲಿದೆ. ಸಾರ್ವಜನಿಕರಿಗೆ ಕಿರಿಕಿರಿಯೂ ತಪ್ಪಲಿದೆ. ನಗರದಲ್ಲಿ 1,400 ಕಿ.ಮೀನಷ್ಟು ಪ್ರಮುಖ ರಸ್ತೆಗಳಿವೆ. ಮೊದಲ ಹಂತದಲ್ಲಿ 8 ದೊಡ್ಡ ಮತ್ತು 1 ಸಣ್ಣ ಯಂತ್ರವನ್ನು ಖರೀದಿಸಲಾಗಿದ್ದು, ದೊಡ್ಡಯಂತ್ರಕ್ಕೆ 89 ಲಕ್ಷ ರೂ. ಮತ್ತು ಸಣ್ಣ ಯಂತ್ರಕ್ಕೆ 45 ಲಕ್ಷ ರೂ.ಗಳನ್ನು ವ್ಯಯಿಸಲಾಗುತ್ತಿದೆ.

ಇನ್ನು 17 ಯಂತ್ರಗಳ ಖರೀದಿಗೆ ಕಾರ್ಯಾದೇಶವಾಗಿದೆ. ಇದರೊಂದಿಗೆ ಇನ್ನೊಂದು ತಿಂಗಳಲ್ಲಿ ಇನ್ನೂ 10 ಯಂತ್ರಗಳು ಪಾಲಿಕೆಯ ಕೈಸೇರಲಿವೆ. ಯಂತ್ರಗಳ ಖರೀದಿಗೆ ಘನತ್ಯಾಜ್ಯ ನಿರ್ವಹಣ ಯೋಜನೆಯಡಿ 32 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿತ್ತು. ಮೊದಲ ಹಂತದಲ್ಲಿ ನಗರದ ಪ್ರಮುಖ 65 ರಸ್ತೆಗಳನ್ನು ಸ್ವಚ್ಛಗೊಳಿಸಲು 9 ಯಂತ್ರಗಳನ್ನು ಬಳಸಲಾಗುತ್ತಿದೆ.

ರಸ್ತೆಗಳ ಸ್ವಚ್ಛತೆಗೆಯಂತ್ರ ಪರಿಚಯಿಸುವ ಮುನ್ನ ಅರ್ಧ ಕಿ.ಮೀಗೆ ಒಬ್ಬರು ಪೌರಕಾರ್ಮಿಕರನ್ನು ಕಸಗುಡಿಸುವುದಕ್ಕೆ ನೇಮಿಸಲಾಗುತ್ತಿತ್ತು. ಈಗ ಕಸಗುಡಿಸುವುದಕ್ಕೆ ಯಂತ್ರವನ್ನು ಪರಿಚಯಿಸಿರುವುದರಿಂದ ಸಿಬ್ಬಂದಿ ಮೇಲಿನ ಹೊರೆಯೂ ಕಡಿಮೆಯಾಗಲಿದೆ. ಅವರ ಆರೋಗ್ಯವೂ ಸುಧಾರಿಸಲಿದೆ.

Advertisement

ಎಲ್ಲೆಲ್ಲಿ ಬಳಕೆಯಾಗುತ್ತಿದೆ?: ನೃಪತುಂಗರಸ್ತೆ, ಸೆಂಟ್ರಲ್‌ ಕಾಲೇಜು ರಸ್ತೆ, ಪ್ಯಾಲೆಸ್‌ ರಸ್ತೆ, ಎಂ.ಜಿ ರಸ್ತೆ, ಕನ್ನಿಂಗ್‌ಹ್ಯಾಮ್‌, ಕಸ್ತೂರಬಾ ರಸ್ತೆ, ಸಿಎಮ್‌ಎಚ್‌ರಸ್ತೆ, ಚರ್ಚ್‌ಸ್ಟ್ರೀಟ್‌ ರಸ್ತೆ, ಕೆ.ಆರ್‌ ಮಾರುಕಟ್ಟೆ, ಕನಕಪುರ ರಸ್ತೆ, ಸಂಪಂಗಿ ರಸ್ತೆ, ಬೇಗೂರು ಮುಖ್ಯ ರಸ್ತೆ, ವೈಟ್‌ಫೀಲ್ಡ್‌ ರಸ್ತೆ, ಎಚ್‌ಎಎಲ್‌ ವಿಮಾನ ನಿಲ್ದಾಣ ರಸ್ತೆ, ಸರ್ಜಾಪುರ ರಸ್ತೆ, ಹೊಸುರು ಮುಖ್ಯ ರಸ್ತೆ, ಉತ್ತರಹಳ್ಳಿ, ಮೈಸೂರು ಮತ್ತು ತುಮಕೂರು ರಸ್ತೆ, ಮಾಗಡಿ ರಸ್ತೆ, ಕೆ.ಜಿ ರಸ್ತೆ, ಕನಕಪುರ ರಸ್ತೆ, ಮೊದಲ ಹಂತದಲ್ಲಿ ಈ ಯಂತ್ರವನ್ನು ನಗರದ ಪ್ರಮುಖ 65 ರಸ್ತೆಗಳಲ್ಲಿ ಈ ಯಂತ್ರವನ್ನು ಬಳಸಲಾಗುತ್ತಿದೆ.

ಯಂತ್ರದ ವಿಶೇಷತೆ ಮತ್ತು ಲಾಭ
-ಸ್ವೀಪಿಂಗ್‌ ಯಂತ್ರ ವ್ಯಾಕ್ಯೂಮ್‌ ಕ್ಲೀನರ್‌ ರೀತಿಯಲ್ಲಿಕೆಲಸಮಾಡುತ್ತದೆ. ರಸ್ತೆಯಲ್ಲಿರುವ ಧೂಳು ಮತ್ತು ತ್ಯಾಜ್ಯವನ್ನು ಸಂಪೂರ್ಣವಾಗಿ ಎಳೆದುಕೊಳ್ಳುತ್ತದೆ.

-ರಾತ್ರಿ ಸಮಯದಲ್ಲಿ ಯಂತ್ರವನ್ನು ಬಳಸುವುದರಿಂದ ರಸ್ತೆ ಸ್ವಚ್ಛತೆಗೆ ಆದ್ಯತೆ, ಸಂಚಾರದಟ್ಟಣೆ ಕಡಿಮೆ ಹಾಗೂ ಧೂಳಿನ ಸಮಸ್ಯೆಗೆ ಪರಿಹಾರ ಸಿಗಲಿದೆ.

-ಯಂತ್ರದ ಬಳಕೆಯಿಂದ ದಿನಕ್ಕೆ 40 ಕಿ.ಮೀ ರಸ್ತೆ ಸ್ವಚ್ಛ.

-ಪೌರಕಾರ್ಮಿಕರಿಂದ ಪುಟ್‌ಪಾತ್‌ ಸ್ವಚ್ಛತೆಗೆ ಆದ್ಯತೆ.

* ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next