ಬ್ರಿಸ್ಬೇನ್: ಸಹ ಆತಿಥೇಯ ರಾಷ್ಟ್ರವಾದ ಆಸ್ಟ್ರೇಲಿಯವನ್ನು 2-0 ಗೋಲುಗಳಿಂದ ಮಣಿಸಿದ ಸ್ವೀಡನ್ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತು.
ರವಿವಾರ ಯುರೋಪಿಯನ್ ಚಾಂಪಿಯನ್ ಇಂಗ್ಲೆಂಡ್ ಮತ್ತು ಸ್ಪೇನ್ ನಡುವೆ ಸಿಡ್ನಿಯಲ್ಲಿ ಫೈನಲ್ ಹಣಾಹಣಿ ಸಾಗಲಿದೆ. ಭಾರತೀಯ ಕಾಲಮಾನದಂತೆ ಅಪರಾಹ್ನ 3.30ಕ್ಕೆ ಪಂದ್ಯ ಆರಂಭವಾಗಲಿದೆ.
ಫ್ರಿಡೋಲಿನಾ ರೋಲೊ# ಮತ್ತು ಕೊಸೊವೇರ್ ಅಸ್ಲಾನಿ ಸ್ವೀಡನ್ ಪರ ಗೋಲು ಬಾರಿಸಿದರು. ಆಸ್ಟ್ರೇಲಿಯ ವನಿತಾ ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಸಲ ಸೆಮಿಫೈನಲ್ ಪ್ರವೇಶಿಸಿತ್ತು. ಅಲ್ಲಿ ಇಂಗ್ಲೆಂಡ್‌ಗೆ 1-3 ಅಂತರದಿಂದ ಶರಣಾಯಿತು. ಕಂಚಿನ ಪ್ರಯತ್ನಕ್ಕೆ ಸ್ವೀಡನ್ ಅಡ್ಡಿಯಾಯಿತು. ಸತತ 2 ಸೋಲು ಆಸೀಸ್ ಫುಟ್‌ಬಾಲ್ ಅಭಿಮಾನಿಗಳನ್ನು ತೀವ್ರ ನಿರಾಸೆಯಲ್ಲಿ ಕೆಡವಿತು. ಆದರೆ ಆಸ್ಟ್ರೇಲಿಯ ಪಾಲ್ಗೊಂಡ ಈ 2 ಪಂದ್ಯ ನೇರ ಪ್ರಸಾರದಲ್ಲಿ ನೂತನ ದಾಖಲೆ ಸ್ಥಾಪಿಸುವಲ್ಲಿ ಯಶಸ್ವಿಯಾಗಿವೆ. ಇವು ಕಳೆದ 20 ವರ್ಷಗಳ ವನಿತಾ ವಿಶ್ವಕಪ್ ಇತಿಹಾಸದಲ್ಲಿ ಅತ್ಯಧಿಕ ಮಂದಿ ವೀಕ್ಷಿಸಿದ ಹೆಗ್ಗಳಿಕೆಗೆ ಪಾತ್ರವಾದವು.
ಸೆಮಿಫೈನಲ್ ಸೋಲಿನ ಬಳಿಕ ತಮ್ಮನ್ನು ಮಣಿಸುವುದು ಬಹಳ ಕಷ್ಟ ಎಂಬುದನ್ನು ಸ್ವೀಡನ್ ವನಿತೆಯರು ಸತತ 2ನೇ ಸಲ ಸಾರಿದಂತಾಯಿತು. ಇದು ಸ್ವೀಡನ್‌ಗೆ ಒಲಿದ 4ನೇ ಕಂಚಿನ ಪದಕ. 2003ರಲ್ಲಿ ರನ್ನರ್ ಅಪ್ ಸಾಧನೆಯೊಂದಿಗೆ ಬೆಳ್ಳಿ ಪದಕ ಜಯಿಸಿತ್ತು. ಹಿಂದಿನ 3 ಕಂಚಿನ ಪದಕ 1991, 2011 ಮತ್ತು 2019ರಲ್ಲಿ ಒಲಿದಿತ್ತು. ಈ ಬಾರಿಯ ಉಪಾಂತ್ಯದಲ್ಲಿ ಸ್ವೀಡನ್ 1-2 ಅಂತರದಿಂದ ಸ್ಪೇನ್‌ಗೆ ಶರಣಾಗಿತ್ತು.