Advertisement

ಹಿಂದೂ ಧರ್ಮದ ರಕ್ಷಣೆಯ ಪ್ರತಿಜ್ಞೆ ಮಾಡಿ

01:20 AM May 20, 2019 | Lakshmi GovindaRaj |

ಬೆಂಗಳೂರು: ವಿಜಯನಗರ ಸಾಮ್ರಾಜ್ಯ ಉದಯವಾಗದಿದ್ದರೆ ಹಿಂದೂ ಧರ್ಮ ಸಂಪೂರ್ಣ ನಾಶವಾಗುತ್ತಿತ್ತು ಎಂದು ಹಿರಿಯ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಅಭಿಪ್ರಾಯಪಟ್ಟರು.

Advertisement

ವಿದ್ಯಾರಣ್ಯ ವಿಜಯ ವೇದಿಕೆ, ಭಾನುವಾರ ಶಿಶು ನಿವಾಸದಲ್ಲಿ ಹಮ್ಮಿಕೊಂಡಿದ್ದ ವಿದ್ಯಾರಣ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೂ ಧರ್ಮದ ಸಂರಕ್ಷಣೆಗೆ ಪ್ರತಿಯೊಬ್ಬರೂ ಪ್ರತಿಜ್ಞೆ ಮಾಡಬೇಕು ಎಂದು ಹೇಳಿದರು.

ವೈಭವದಿಂದ ಮೆರೆದಿದ್ದ ಹಂಪಿಯನ್ನು ಈಗ ನೋಡಿದರೆ ಒಂದು ಕಡೆ ಹೆಮ್ಮೆಯಾಗುತ್ತದೆ. ಮತ್ತೂಂದು ಕಡೆ ಭಗ್ನಗೊಂಡಿರುವ ಅವಶೇಷಗಳು ಮನಸ್ಸಿಗೆ ನೋವನ್ನುಂಟು ಮಾಡುತ್ತವೆ. ಹಿಂದೂ ಧರ್ಮ ಉಳಿವಿಗೆ ವಿದ್ಯಾರಣ್ಯರ ಕೊಡುಗೆ ಅಪಾರವಾಗಿದ್ದು, ಈ ಧರ್ಮದ ಸಂರಕ್ಷಣೆಗಾಗಿ ಕಂಕಣ ಬದ್ಧರಾಗಬೇಕು ಎಂದು ತಿಳಿಸಿದರು.

12-13ನೇ ಶತಮಾನದಲ್ಲಿ ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಲಾಯಿತು. ಇದರಿಂದ ಎಚ್ಚೆತ್ತುಕೊಂಡ ವಿದ್ಯಾರಣ್ಯರು, ಹಿಂದೂ ಧರ್ಮದ ಸಂರಕ್ಷಣೆಗೆ ಪಣ ತೊಟ್ಟು, ವಿಜಯನಗರ ಸಾಮ್ರಾಜ್ಯ ಸ್ಥಾಪಿಸಲು ಹಕ್ಕ-ಬುಕ್ಕರಿಗೆ ಮಾರ್ಗದರ್ಶನ ನೀಡಿದರು ಎಂದು ಹೇಳಿದರು.

ತುಮಕೂರು ವಿಶ್ವವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕ ಡಾ.ಎಂ.ಕೊಟ್ರೇಶ್‌ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿದ್ಯಾರಣ್ಯರ ಜಯಂತಿ ಆಚರಣೆಗೆ ಮುಂದಾಗಬೇಕು. ಅಲ್ಲದೆ ರಾಜ್ಯದಲ್ಲಿರುವ ಯಾವುದಾದರೂ ಒಂದು ವಿಶ್ವವಿದ್ಯಾಲಯದಲ್ಲಿ ವಿದ್ಯಾರಣ್ಯರ ಹೆಸರಿನಲ್ಲಿ ಅಧ್ಯಯನ ಕೇಂದ್ರ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

Advertisement

ಇತ್ತೀಚಿನ ದಿನಗಳಲ್ಲಿ ಇತಿಹಾಸದ ಬಗ್ಗೆ ತಿಳಿವಳಿಕೆ ಇಲ್ಲದವರು ಆ ಬಗ್ಗೆ ಮಾತನಾಡುತ್ತಿದ್ದಾರೆ. ಈ ಕುರಿತು ಎಚ್ಚೆತ್ತುಕೊಳ್ಳುವ ಅಗತ್ಯವಿದೆ ಎಂದು ಹೇಳಿದರು. ವಿದ್ಯಾರಣ್ಯ ವಿಜಯ ವೇದಿಕೆ ಅಧ್ಯಕ್ಷ ವಿ.ಮಂಜುನಾಥ್‌, ಪ್ರಧಾನ ಕಾರ್ಯದರ್ಶಿ ರಂ.ಶಿವಶಂಕರ ಇದ್ದರು.

ಹೆಚ್ಚು ದಿನ ಉಳಿಯುವುದಿಲ್ಲ: ಧರ್ಮದ ನೆಲೆ ಇಲ್ಲದ ಸಾಮ್ರಾಜ್ಯ ಹೆಚ್ಚು ದಿನ ಉಳಿಯುವುದಿಲ್ಲ. ವಿದ್ಯಾರಣ್ಯರಿಂದ ಸ್ಥಾಪನೆಗೊಂಡಿದ್ದ ವಿಜಯನಗರ ಸಾಮ್ರಾಜ್ಯ ವಿಶ್ವದಾದ್ಯಂತ ಖ್ಯಾತಿ ಗಳಿಸಿತ್ತು. ವಿದ್ಯಾರಣ್ಯರ ಧರ್ಮದ ನೆಲೆಯಿಂದಾಗಿ ಸಾಮ್ರಾಜ್ಯ 250ಕ್ಕೂ ಹೆಚ್ಚು ವರ್ಷಗಳ ಕಾಲ ಅಸ್ತಿತ್ವದಲ್ಲಿರಲು ಸಾಧ್ಯವಾಯಿತು ಎಂದು ಬಸವನಗುಡಿ ರಾಮಕೃಷ್ಣ ಮಠದ ಶ್ರೀ ಸ್ವಾಮಿ ಮಂಗಲನಾಥಾನಂದ ಮಹಾರಾಜ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next