ಮಣಿಪಾಲ: ಸುಮಾರು 1.3ಕೋಟಿಯಷ್ಟು ಜನಸಂಖ್ಯೆ ಹೊಂದಿರುವ ಸ್ವಾಜಿಲ್ಯಾಂಡ್‌ನಲ್ಲಿ ಈಗಾಗಲೇ ಲಕ್ಷಾಂತರ ಮಂದಿ ನಿರುದ್ಯೋಗಿಗಳಾಗಿದ್ದಾರೆ. ಪರಿಣಾಮ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಈ ಹೊತ್ತಿನಲ್ಲೇ ಸರಕಾರ ಪಟ್ಟಣ ಮತ್ತು ನಗರಗಳಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಆಹಾರ ಪೂರೈಸುವುದಿಲ್ಲ ಎಂದು ತಿಳಿಸಿದೆ.
ಈ ಕುರಿತು ಸ್ವಾಜಿ ಪ್ರಧಾನಿ ಆಂಬ್ರೋಸ್ ಡ್ಲಮಿನಿ ಅವರು ಮಾಧ್ಯಮ ಪ್ರಕಟನೆ ಹೊರಡಿಸಿದ್ದು, ದೇಶದ ನಾಲ್ಕು ಪ್ರದೇಶಗಳಲ್ಲಿ ವಾಸಿಸುತ್ತಿರುವ 63 ಸಾವಿರ ಕುಟುಂಬಗಳ 3 ಲಕ್ಷಕ್ಕೂ ಹೆಚ್ಚು ಜನರಿಗೆ ಆಹಾರವನ್ನು ಪೂರೈಸಲಾಗುವುದು ಎಂದು ತಿಳಿಸಿದ್ದಾರೆ.
ಇದರ ಬೆನ್ನಿಗೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ವಕ್ತಾರ ವಂಡಿಲೆ ಮಾವುಸೊ, ನಗರ ಪ್ರದೇಶಗಳಲ್ಲಿನ ಜನರಿಗೆ ಸರಕಾರದಿಂದ ಆಹಾರದ ನೆರವು ಸಿಗದು ಎಂದು ಘೋಷಿಸಿದ್ದು, ಗ್ರಾಮೀಣ ಜನರ ಕಷ್ಟಗಳಿಗೆ ಮಾತ್ರ ಸ್ಪಂದಿಸಲಿದೆ ಎಂದು ಹೇಳಿದ್ದಾರೆ.
ಆದರೆ ನಗರಗಳ ಬೀದಿ ಬದಿಗಳಲ್ಲಿ ತರಕಾರಿ ಹಣ್ಣು ವ್ಯಾಪಾರಿಗಳು, ಕೂಲಿಕಾರರು, ಸಲೂನ್ ನಡೆಸುವವರು ಸೇರಿದಂತೆ ಸಣ್ಣಪುಟ್ಟ ಉದ್ಯಮಗಳನ್ನು ನಡೆಸುವ ಕುಟುಂಬಗಳಿವೆ. ಜೀವನೋಪಾಯಕ್ಕಾಗಿ ನಗರವನ್ನೇ ಅವು ಅವಲಂಬಿಸಿವೆ. ಸದ್ಯ ಲಾಕ್‌ಡೌನ್ ನಿಯಮ ಜಾರಿ ಇರುವ ಕಾರಣ ಇವರೆಲ್ಲಾ ಆದಾಯವಿಲ್ಲದೇ, ಆಹಾರವಿಲ್ಲದೇ ಕಂಗಾಲಾಗಿದ್ದಾರೆ. ಸರಕಾರದ ಆದೇಶಕ್ಕೆ ಇವರೆಲ್ಲರೂ ಬೇಸರ ವ್ಯಕ್ತಪಡಿಸಿದ್ದಾರೆ.
ಸುಮಾರು 270 ಮಿಲಿಯನ್ ಮೊತ್ತದಷ್ಟು ಆರ್ಥಿಕ ನೆರವನ್ನು ಇಲ್ಲಿನ ಆಡಳಿತ ವ್ಯವಸ್ಥೆ ಘೋಷಿಸಿದ್ದು, ನಗರದ ಫ್ಲಾಟ್‌ಗಳಲ್ಲಿ, ಬಾಡಿಗೆ ಮನೆಗಳಲ್ಲಿ ವಾಸಿಸುವ ಜನರು ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಲು ಅನರ್ಹ ಎಂದು ಹೇಳಿದೆ.