ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ಸಂತ್ರಸ್ತ ಮಹಿಳೆಯರ ಸಮಸ್ಯೆ ಬಗೆಹರಿಸುತ್ತಿದ್ದ ಸ್ವಾತಿ ಮಲಿವಾಲ್ ಈಗ ಸ್ವತಃ ಸಂತ್ರಸ್ತೆಯಾಗಿದ್ದಾರೆ! ಹೋರಾಟಗಳ ಮೂಲಕ ರಾಜಕೀಯದಲ್ಲಿ ಮುಂಚೂಣಿಗೆ ಬಂದ ಸ್ವಾತಿ, ಸಾಗಿ ಬಂದ ದಾರಿ ವಿಶಿಷ್ಟವಾಗಿದೆ. ಅವರ ಹೋರಾಟ ಮತ್ತು ರಾಜಕೀಯ ಕುರಿತಾದ ಮಾಹಿತಿ ಇಲ್ಲಿದೆ.
ವಿಪರ್ಯಾಸ ನೋಡಿ… ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಹೋರಾಟ ಮಾಡುತ್ತಿದ್ದ ಸ್ವಾತಿ ಮಲಿವಾಲ್ ಈಗ ಸ್ವತಃ ಸಂತ್ರಸ್ತೆಯಾಗಿದ್ದಾರೆ! ತಮ್ಮ ಖಡಕ್ ಮಾತುಗಳಿಂದ, ನಿರ್ಭಯ ಧೋರಣೆ, ಅನ್ಯಾಯದ ವಿರುದ್ಧ ಸಿಡಿದೇಳುವ ಗುಣದಿಂದಾಗಿ ದೆಹಲಿ ರಾಜಕಾರಣದಲ್ಲಿ “ದಿಲ್ಲಿ ಲೇಡಿ ಸಿಂಗಮ್’ ಎಂದೇ ಸಂಸದೆ ಸ್ವಾತಿ ಖ್ಯಾತರಾಗಿದ್ದರು. ಈಗ ಅದೇ ಸ್ವಾತಿ ತಮ್ಮದೇ ಪಕ್ಷ(ಆಪ್)ದ ಮುಖಂಡನಿಂದ ಹಲ್ಲೆಗೊಳಗಾಗಿ, ನ್ಯಾಯಕ್ಕಾಗಿ ಅಂಗಲಾಚುತ್ತಿ ದ್ದಾರೆ!
ಜಾಮೀನು ಮೇಲೆ ಬಿಡುಗಡೆಯಾಗಿದ್ದ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾಗಲು ಅವರ ಮನೆಗೆ ಹೋಗಿದ್ದ ಸ್ವಾತಿ ಮಲಿವಾಲ್ ಮೇಲೆ ಕೇಜ್ರಿವಾಲ್ ಅವರ ಆಪ್ತ ಸಹಾಯಕ ಬಿಭವ್ ಕುಮಾರ್ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗುತ್ತಿದ್ದಂತೆ ಶನಿವಾರ ದಿಲ್ಲಿ ಪೊಲೀಸರು ಬಿಭವ್ ಕುಮಾರನನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ದಿಲ್ಲಿ ರಾಜಕಾರಣದಲ್ಲಿ ಬಹಳ ಬೇಗ ಪ್ರಸಿದ್ಧಿಗೆ ಬಂದ ಸ್ವಾತಿ, ಮಹಿಳಾ ಆಯೋಗದಲ್ಲಿ ಅಗತ್ಯಕ್ಕಿಂತ ಹೆಚ್ಚು ಸಿಬಂದಿ ನೇಮಕ ಸೇರಿದಂತೆ ಹಲವು ವಿವಾದಗಳನ್ನು ಮಾಡಿಕೊಂಡಿದ್ದಾರೆ. ದಿಲ್ಲಿಯಲ್ಲಿ ಮಹಿಳೆಯ ದನಿಯಾಗಿದ್ದ ಸ್ವಾತಿ, ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ ಮತ್ತು ಮಹಿಳೆಯರ ವಿರುದ್ಧ ಇತರ ಅಪರಾಧಗಳ ಒಟ್ಟು 1.7 ಲಕ್ಷ ಪ್ರಕರಣಗಳನ್ನು ನಿರ್ವಹಣೆ ಮಾಡಿದ್ದಾರೆ. ವಿವಿಧ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ 50 ಸಾವಿರ ಮಹಿಳಾ ಪಂಚಾಯ್ತಿಗಳನ್ನು ಸಂಘಟಿಸಿದ್ದಾರೆ. ಅತ್ಯಾಚಾರ ಸಂತ್ರಸ್ತೆಯರಿಗೆ ವೈದ್ಯಕೀಯ ಮತ್ತು ಕಾನೂನು ನೆರವು ಕೊಡಿಸಿದ್ದಾರೆ. ಅಲ್ಲದೇ, ಆ್ಯಸಿಡ್ ದಾಳಿ ಮತ್ತು ಮಕ್ಕಳ ಕಳ್ಳ ಸಾಗಣೆಯಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪ್ರಯತ್ನಿಸಿದ್ದಾರೆ.
ಭ್ರಷ್ಟಾಚಾರ ವಿರೋಧಿ ಹೋರಾಟದಿಂದ ಖ್ಯಾತಿ
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಆಮ್ ಆದ್ಮಿ ಪಾರ್ಟಿಯ ಬಹುತೇಕ ನಾಯಕರು ಅಣ್ಣಾ ಹಜಾರೆ ಅವರ ಇಂಡಿಯಾ ಅಗೇನ್‌ಸ್ಟ್ ಕರಪ್ಷನ್(ಭ್ರಷ್ಟಾಚಾರ ವಿರೋಧಿ ಹೋರಾಟ) ಚಳವಳಿಯ ಮೂಲಕ ಬೆಳಕಿಗೆ ಬಂದವರು. ಸ್ವಾತಿ ಮಲಿವಾಲ್ ಕೂಡ ಇದಕ್ಕೆ ಹೊರತಲ್ಲ. 2011ರಲ್ಲಿ ಜನ್ ಲೋಕಪಾಲ್ ಕಾಯ್ದೆಗಾಗಿ ನಡೆದ ಈ ಭ್ರಷ್ಟಾಚಾರ ವಿರೋಧಿ ಹೋರಾಟ ವನ್ನು ಸಂಘಟಿಸುವಲ್ಲಿ ಸ್ವಾತಿ ಪ್ರಮುಖ ಪಾತ್ರ ನಿರ್ವಹಿಸಿದರು.
ರಾಜಕೀಯಕ್ಕೆ ಎಂಟ್ರಿ ಕೊಟ್ಟ ಮಲಿವಾಲ್
2011ರ ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ಮುಂಚೂಣಿಗೆ ಬಂದ ಸ್ವಾತಿಗೆ ಅದೇ ಹೋರಾಟವು ರಾಜಕೀಯ ಆರಂಭಕ್ಕೆ ವೇದಿಕೆಯಾ ಯಿತು. ಕೇಜ್ರಿವಾಲ್ ಅವರು, ಅಣ್ಣಾ ಹಜಾರೆ ನಿರಾಕರಣೆಯ ಹೊರತಾಗಿಯೂ ಆಪ್ ಆರಂಭಿಸುವುದಾಗಿ ಘೋಷಿಸಿದರು. ಭ್ರಷ್ಟಾಚಾರದ ವಿರೋಧಿ ಹೋರಾಟದಲ್ಲಿದ್ದ ಬಹುತೇಕರು ಆಪ್‌ನ ನಾಯಕರು, ಕಾರ್ಯಕರ್ತರಾಗಿ ಗುರುತಿಸಿಕೊಂಡರು. ಅದೇ ರೀತಿ, ಸ್ವಾತಿ ಮಲಿವಾಲ್ ಕೂಡ ರಾಜಕೀಯಕ್ಕೆ ಎಂಟ್ರಿ ಕೊಟ್ಟರು. ಮಹಿಳಾ ಪರ ಗಟ್ಟಿ ದನಿಯಾಗಿರುವ ಸ್ವಾತಿ ಅವರ ಪ್ರತಿಭೆ ಯನ್ನು ಗುರುತಿಸಿದ್ದ ಕೇಜ್ರಿವಾಲ್, ದಿಲ್ಲಿ ಮಹಿಳಾ ಆಯೋ ಗದ ಅಧ್ಯಕ್ಷೆಯನ್ನಾಗಿ ನೇಮಕ ಮಾಡಿದರು.
ಕೆಲಸ ಬಿಟ್ಟು ಕೇಜ್ರಿವಾಲ್ ಎನ್‌ಜಿಒ ಸೇರಿದ ಸ್ವಾತಿ
1984 ಅಕ್ಟೋಬರ್ 15ರಂದು ಸ್ವಾತಿ ಉತ್ತರ ಪ್ರದೇಶದ ಘಾಜಿಯಾಬಾದ್ ಜಿಲ್ಲೆಯಲ್ಲಿ ಜನಿಸಿದರು. ಆ್ಯಮಿಟಿ ಅಂತಾ ರಾಷ್ಟ್ರೀಯ ಶಾಲೆಯಲ್ಲಿ ಶಿಕ್ಷಣ ಪಡೆದರು. ಬಳಿಕ ಜೆಎಸ್‌ಎಸ್ ಅಕಾಡೆಮಿ ಆಫ್ ಟೆಕ್ನಿಕಲ್ ಎಜುಕೇಷನ್ ಕಾಲೇಜಿ ನಿಂದ ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ ಪದವಿ ಗಳಿಸಿದರು. ಉತ್ತೀರ್ಣರಾಗಿ ಹೊರ ಬರುತ್ತಿದ್ದಂತೆ ಮಲಿ ವಾಲ್ ಎಚ್‌ಸಿಎಲ್‌ನಲ್ಲಿ ಕೆಲಸಕ್ಕೆ ಸೇರಿದರು. ಆದರೆ, ಈ ಕೆಲಸವನ್ನು ಬಹಳ ಬೇಗವೇ ತ್ಯಜಿಸಿದರು. ಅರವಿಂದ್ ಕೇಜ್ರಿವಾಲ್ ಹಾಗೂ ಸಿಸೋಡಿಯಾ ನಡೆಸುತ್ತಿದ್ದ “ಪರಿವರ್ತನ್’ ಎನ್‌ಜಿಒ ಸೇರ್ಪಡೆಯಾದರು. ಆಪ್ ನಾಯಕ ನವೀನ್ ಜೈಹಿಂದ್ ಅವರನ್ನು 2012ರಲ್ಲಿ ಮದುವೆಯಾಗಿದ್ದ ಸ್ವಾತಿ, 2020ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದಾರೆ.
ಯಾರಿದು ಬಿಭವ್ ಕುಮಾರ್?
ಬಿಭವ್ ಕುಮಾರ್ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಸಹಾಯಕ ಹಾಗೂ ರಾಜಕೀಯ ಮತ್ತು ವೈಯಕ್ತಿಕವಾಗಿ ಅವರ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಾರೆ. ಮುಂಚಿನ ದಿನಗಳಲ್ಲಿ ಮನೀಶ್ ಸಿಸೋಡಿಯಾ ಅವರ ಕಬೀರ್ ಎನ್‌ಜಿಒದಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ಕೇಜ್ರಿವಾಲ್ ಅವರ ಆಪ್ತ ಸಹಾಯಕರಾದರು. ಭಾರೀ ಸದ್ದು ಮಾಡುತ್ತಿರುವ ದಿಲ್ಲಿ ಅಬಕಾರಿ ನೀತಿ ಮತ್ತು ದಿಲ್ಲಿ ಜಲ ಮಂಡಳಿ ಹಗರಣದಲ್ಲೂ ಬಿಭವ್ ಕುಮಾರ್ ಹೆಸರು ಕೇಳಿ ಬಂದಿತ್ತು
ಸ್ವಾತಿಗೆ ತಂದೆಯಿಂದಲೇ ಲೈಂಗಿಕ ದೌರ್ಜನ್ಯ!
ಸ್ವಾತಿ ಮಹಿಳಾ ಪರ ಹೋರಾಟಗಾರ್ತಿ ಆಗಲು ಅವರ ಬಾಲ್ಯದಲ್ಲಿ ಸಂಭವಿಸಿದ ಕಹಿ ಘಟನೆ ಗಳೇ ಕಾರಣ. ಈ ಕುರಿತು 2023ರಲ್ಲಿ ನೀಡಿದ ಸಂದರ್ಶನದಲ್ಲಿ ಮಾಹಿತಿ ಹಂಚಿ ಕೊಂಡಿದ್ದಾರೆ. ಭಾರತೀಯ ಭದ್ರತಾ ಪಡೆಯಲ್ಲಿ ಅಧಿಕಾರಿಯಾಗಿದ್ದ ತಂದೆ ಸ್ವಾತಿ ಮೇಲೆ ಲೈಂಗಿಕವಾಗಿ ದೌರ್ಜನ್ಯ ಎಸಗುತ್ತಿದ್ದರು. ಅಲ್ಲದೇ, ಬೆಲ್ಟ್ನಿಂದ ಹೊಡೆಯುತ್ತಿದ್ದರು. ತಂದೆಯ ಹಿಂಸೆಯಿಂದ ತಪ್ಪಿಸಿಕೊಳ್ಳಲು ಅವರು ಹಾಸಿಗೆ ಅಡಿಯಲ್ಲಿ ಬಚ್ಚಿಟ್ಟುಕೊಳ್ಳುತ್ತಿ ದ್ದರು. 4ನೇ ತರಗತಿಯವರೆಗೂ ತಂದೆಯಿಂದ ಸ್ವಾತಿ ಲೈಂಗಿಕ ದೌರ್ಜನ್ಯ ಎದುರಿಸಿದ್ದಾರೆ. ಹಾಸಿಗೆಯಡಿ ಬಚ್ಚಿಟ್ಟು ಕೊಂಡಾಗಲೆಲ್ಲ, ದೊಡ್ಡ ವಳಾದ ಮೇಲೆ ಗಂಡಸರಿಗೆ ಹೇಗೆ ಪಾಠ ಕಲಿಸುವುದು ಎಂದು ಯೋಚಿಸುತ್ತಿದ್ದರಂತೆ! ಮುಂದೆ ಅವರು ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ ಪದವೀಧರೆಯಾದರೂ, ಕಾರ್ಯಕರ್ತೆಯಾಗಿಯೇ ಹೆಚ್ಚು ಗುರುತಿಸಿಕೊಂಡರು.
ಬಹುಮುಖಿ ಕಾರ್ಯಕರ್ತೆ
2006 ಅತ್ಯುತ್ತಮ ಸಂಬಳದ ಉದ್ಯೋಗ ತೊರೆದು ಅರವಿಂದ್ ಕೇಜ್ರಿವಾಲರ ಪರಿವರ್ತನ್ ಎನ್‌ಜಿಒ ಸೇರ್ಪಡೆಯಾದ ಸ್ವಾತಿ.
2011 ಜನ್ ಲೋಕಪಾಲ್ ಜಾರಿಗಾಗಿ ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ಪ್ರಮುಖ ಪಾತ್ರ ನಿರ್ವಹಣೆ.
2013 ಮಹಿಳೆ ಮತ್ತು ಮಕ್ಕಳಿಗೆ ಸುರಕ್ಷಿತ ಆಹಾರಕ್ಕಾಗಿ ಗ್ರೀನ್‌ಪೀಸ್ ಇಂಡಿಯಾ ಜತೆ ಸ್ವಾತಿ ಮಲಿವಾಲ್ ಗುರುತಿಸಿಕೊಂಡಿದ್ದರು.
2014 ದಿಲ್ಲಿ ಶಾಸಕರಿಗೆ ಅಭಿವೃದ್ಧಿ ಸಲಹೆಗಾರ್ತಿಯಾಗಿದ್ದರು. ಆರ್‌ಟಿಐ (ಮಾಹಿತಿ ಹಕ್ಕು), ಲಿಂಗ ಸಮಾನತೆ ಹಾಗೂ ಮಹಿಳೆಯ ಮೇಲಿನ ದೌರ್ಜನ್ಯ ವಿರುದ್ಧ ಅನೇಕ ಅಭಿಯಾನಗಳನ್ನು ಹಮ್ಮಿಕೊಂಡರು.
2015ರಿಂದ 2024: ದೆಹಲಿ ಮಹಿಳಾ ಆಯೋಗ ಅಧ್ಯಕ್ಷೆಯಾಗಿ ನಾನಾ ಜವಾಬ್ದಾರಿ ನಿರ್ವಹಣೆ.ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ನೇಮಕವಾದರು. ಆ್ಯಸಿಡ್ ದಾಳಿ, ಲೈಂಗಿಕ ಕಿರುಕುಳ, ದಿಲ್ಲಿಯಲ್ಲಿ ಮಹಿಳಾ ಸುರಕ್ಷತೆಗೆ ಸಮಸ್ಯೆಗಳನ್ನು ಬಗೆಹರಿಸುವ ಸಂಬಂಧ ಅನೇಕ ಹೊಸ ಉಪಕ್ರಮಗಳನ್ನು ಜಾರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
2018 ಮಕ್ಕಳ ಮೇಲೆ ಅತ್ಯಾಚಾರ ನಡೆಸುವವರಿಗೆ ಗಲ್ಲು ಶಿಕ್ಷೆ ಜಾರಿಗಾಗಿ ಆಗ್ರಹಿಸಿ 10 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದ್ದರು.
2023 ಹಿಂಸಾಚಾರ ಪೀಡಿತ ಮಣಿಪುರ ರಾಜ್ಯಕ್ಕೆ ಭೇಟಿ ನೀಡಿ, ಅಲ್ಲಿನ ಸ್ಥಿತಿ ಗತಿ ಕುರಿತಾದ ವರದಿಯನ್ನು ರಾಷ್ಟ್ರಪತಿಗೆ ಕಳುಹಿಸಿದ್ದರು.
2024 ಆಮ್ ಆದ್ಮಿ ಪಾರ್ಟಿ ಮೂಲಕ ರಾಜ್ಯಸಭೆಗೆ ಆಯ್ಕೆಯಾದ ಸ್ವಾತಿ ಮಲಿವಾಲ್