ಹೊಸದಿಲ್ಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತರೊಬ್ಬರು ಹಲ್ಲೆ ನಡೆಸಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ರಾಜ್ಯ ಸಭಾ ಸಂಸದೆ ಸ್ವಾತಿ ಮಲಿವಾಲ್ ಅವರ ನಿವಾಸಕ್ಕೆ ಭೇಟಿ ನೀಡಿದ ದೆಹಲಿ ಪೊಲೀಸರ ತಂಡ ಗುರುವಾರ ಹೇಳಿಕೆಯನ್ನು ದಾಖಲಿಸಿಕೊಂಡಿದೆ.
ಮೂಲಗಳ ಪ್ರಕಾರ, ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಬಿಭವ್ ಕುಮಾರ್ ಹಲ್ಲೆ ನಡೆಸಿರುವ ಕುರಿತು ಆಪ್ ಸಂಸದೆ ಲಿಖಿತ ದೂರು ದಾಖಲಿಸಿದ್ದಾರೆ.
ಹೆಚ್ಚುವರಿ ಪೊಲೀಸ್ ಕಮಿಷನರ್ ಶ್ರೇಣಿಯ ಅಧಿಕಾರಿ ನೇತೃತ್ವದ ಪೊಲೀಸ್ ತಂಡವು ರಾಜ್ಯಸಭಾ ಸಂಸದೆಯಿಂದ ವಿವರಗಳನ್ನು ಪಡೆಯಲು ಸುಮಾರು ನಾಲ್ಕು ಗಂಟೆಗಳ ಕಾಲ ಕಳೆದಿದೆ ಎಂದು ತಿಳಿದು ಬಂದಿದೆ.
ಸ್ವಾತಿ ಅವರು ಸೋಮವಾರ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ ಸಂದರ್ಭಗಳನ್ನು ವಿವರಿಸಿದ್ದು, ಹೇಳಿಕೆಗಳ ಆಧಾರದ ಮೇಲೆ ಪೊಲೀಸರು ಪ್ರಕರಣದಲ್ಲಿ ಕಾನೂನು ಪ್ರಕ್ರಿಯೆಗಳನ್ನು ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಕೇಜ್ರಿವಾಲ್ ಅವರ ಅಧಿಕೃತ ನಿವಾಸದಲ್ಲಿ ಬಿಭವ್ ಕುಮಾರ್ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಸೋಮವಾರ ಆರೋಪಿಸಿದ್ದರಾದರೂ ಯಾವುದೇ ಔಪಚಾರಿಕ ದೂರು ದಾಖಲಿಸಿರಲಿಲ್ಲ. ಆ ಬಳಿಕ ಬಿಜೆಪಿ ಸೇರಿ ಮಹಿಳಾ ಸಂಘಟನೆಗಳು ಪ್ರಶ್ನೆ ಎತ್ತಿ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷದ ವಿರುದ್ಧ ಆಕ್ರೋಶ ಹೊರ ಹಾಕಿದ್ದವು.