“ಸ್ವಾರ್ಥರತ್ನ’ ಎಂಬ ಚಿತ್ರವೊಂದು ಬರುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ತುಂಬಾ ದಿನಗಳಿಂದ ಈ ಚಿತ್ರ ನಾನಾ ಕಾರ್ಯಕ್ರಮಗಳ ಮೂಲಕ ಸದ್ದು ಮಾಡುತ್ತಲೇ ಇತ್ತು. ಸಹಜವಾಗಿಯೇ ಸಿನಿಮಾ ಯಾವಾಗ ತೆರೆಕಾಣುತ್ತಿದೆ ಎಂಬ ಪ್ರಶ್ನೆ ಸಿನಿಪ್ರೇಮಿಗಳನ್ನು ಕಾಡುತ್ತಿತ್ತು. ಈಗ ಅದಕ್ಕೆ ಉತ್ತರ ಸಿಕ್ಕಿದೆ. ಚಿತ್ರ ಈ ವಾರ ತೆರೆಕಾಣುತ್ತಿದೆ. ಈ ಚಿತ್ರದ ಮೂಲಕ ಆದರ್ಶ್ ನಾಯಕರಾಗುತ್ತಿದ್ದಾರೆ. ಅಶ್ವಿನ್ ಕೊಡಂಗಿ ಈ ಚಿತ್ರದ ನಿರ್ದೇಶಕರು. ಈ ಹಿಂದೆ “ಫಸ್ಟ್‌ರ್‍ಯಾಂಕ್ ರಾಜು’ ಚಿತ್ರಕ್ಕೆ ಕಥೆ ಬರೆದಿರುವ ಅಶ್ವಿನ್ ಅವರು, ಈಗ “ಸ್ವಾರ್ಥರತ್ನ’ ನಿರ್ದೇಶಕರಾಗುತ್ತಿದ್ದಾರೆ. “ಫಸ್ಟ್ ರ್‍ಯಾಂಕ್ ರಾಜು’ ಸಿನಿಮಾ ನೋಡಿದ ನಾಯಕ ಆದರ್ಶ್, ಈ ತರಹದ ಒಂದು ಸಿನಿಮಾವನ್ನು ನನಗೂ ಮಾಡಿಕೊಡಿ ಎಂದು ಕೇಳಿಕೊಂಡರಂತೆ. ಅದರ ಪರಿಣಾಮವಾಗಿ ಆರಂಭವಾಗಿದ್ದೇ “ಸ್ವಾರ್ಥರತ್ನ’. ಎಲ್ಲಾ ಓಕೆ ಚಿತ್ರದ ಕಥೆಗೂ ಟೈಟಲ್‌ಗೂ ಹೇಗೆ ಹೊಂದಿಕೆಯಾಗುತ್ತದೆ ಎಂದು ನೀವು ಕೇಳಬಹುದು. ಇಡೀ ಸಿನಿಮಾ ಸ್ವಾರ್ಥಿ ಯುವಕನೊಬ್ಬನ ಸುತ್ತ ಸಾಗುವುದರಿಂದ ಟೈಟಲ್ ತುಂಬಾ ಚೆನ್ನಾಗಿ ಹೊಂದಿಕೆಯಾಗುತ್ತದೆ ಎಂಬುದು ಚಿತ್ರತಂಡದ ಮಾತು.
ನಾಯಕ ಆದರ್ಶ್ ಸಿನಿಮಾ ರಂಗಕ್ಕೆ ಬರುವ ಮುನ್ನ ಸಾಕಷ್ಟು ತಯಾರಿ ಮಾಡಿಕೊಂಡೇ ಬಂದಿದ್ದಾರೆ. ಹಿಂದಿ, ತಮಿಳು ಚಿತ್ರದಲ್ಲಿ ಮಾಡಿರುವ ಆದರ್ಶ್, ಸ್ವಾರ್ಥ ಸ್ವಭಾವ ಹುಡುಗನಾಗಿ ಅವರಿಲ್ಲಿ ನಟಿಸಿದ್ದಾರಂತೆ. ಎಲ್ಲಾ ಪಾತ್ರ ನಿರ್ವಹಿಸುವುದು ಸುಲಭ. ಆದರೆ, ಸ್ವಾರ್ಥ ವ್ಯಕ್ತಿಯ ವ್ಯಕ್ತಿತ್ವವನ್ನು ತೋರ್ಪಡಿಸುವುದು ಕಷ್ಟದ ಕೆಲಸವಾಗಿತ್ತಂತೆ. ಸದಾ ಸ್ವಾರ್ಥವನ್ನೇ ಯೋಚಿಸುವ ವ್ಯಕ್ತಿಗೆ ಲವ್ ಆದಾಗ ಹೇಗಿರುತ್ತದೆ, ಆತ ಹುಡುಗಿಗೆ ಹೃದಯದಲ್ಲಿ ಜಾಗ ಕೊಡುವಲ್ಲೂ ಸ್ವಾರ್ಥಿಯಾಗುತ್ತಾನಾ ಎಂಬ ಅಂಶದೊಂದಿಗೆ ಚಿತ್ರ ಸಾಗುತ್ತದೆಯಂತೆ. ಇಲ್ಲಿ ನಿರ್ಮಾಣದಲ್ಲೂ ತೊಡಗಿಸಿಕೊಂಡಿರುವ ಆದರ್ಶ್, ಸಿನಿಮಾ ನಿರ್ಮಾಣದ ಕಷ್ಟ ಅರಿತಿದ್ದಾರಂತೆ. ಈಗಿನ ಕಾಲಕ್ಕೆ ತಕ್ಕಂತಹ ಕಥೆ ಇಲ್ಲಿದೆ. ಭರಪೂರ ಮನರಂಜನೆಯೂ ಇದೆ. ಇಡೀ ಚಿತ್ರ ನಗುವಿನಲ್ಲೇ ಸಾಗಿಸುತ್ತದೆ ಎಂದು ಚಿತ್ರದ ಬಗ್ಗೆ ವಿಶ್ವಾಸದಿಂದ ಹೇಳುತ್ತಾರೆ.
ಚಿತ್ರದ ನಿರ್ದೇಶಕ ಅಶ್ವಿನ್ ಕೊಡಂಗಿ ಹೇಳುವಂತೆ, ಇದು ಫುಲ್ ಮೀಲ್ಸ್. ಥಿಯೇಟರ್‌ನೊಳಗೆ ಬಂದ ಪ್ರೇಕ್ಷಕನಿಗೆ ಎಲ್ಲಾ ರೀತಿಯ ರಸಗಳು ಸಿಗುತ್ತವೆಯಂತೆ. “ಹಾಸ್ಯ, ರೊಮ್ಯಾನ್ಸ್ ಜೊತೆಗೆ ಸಾಗುತ್ತಲೇ ನಗಿಸುತ್ತ ಹೋಗುವ ಚಿತ್ರದಲ್ಲಿ “ನವರಸ’ ಮೀರಿ ಸ್ವಾರ್ಥ ರಸವೂ ಇದೆ. ಅದನ್ನು ಚಿತ್ರಮಂದಿರದಲ್ಲಿ ನೋಡಿ’ ಎನ್ನುವುದು ಅಶ್ವಿನ್ ಮಾತು. ಚಿತ್ರದಲ್ಲಿ ನಾಯಕಿಯರಾಗಿ ರಿಷಿಕಾ ವರ್ಷ ಹಾಗೂ ಸ್ನೇಹಾ ಸಿಂಗ್ ನಟಿಸಿದ್ದಾರೆ. ರಿಷಿಕಾಗೆ ಇದು ಮೊದಲ ಚಿತ್ರ. ಅವರಿಲ್ಲಿ ಕವನ ಎಂಬ ಪಾತ್ರ ಮಾಡಿದ್ದಾರಂತೆ. ಅದೊಂದು ರೀತಿ ಗಂಡುಬೀರಿ ಹುಡುಗಿ ಪಾತ್ರ. ಹುಡುಗಿಯೊಬ್ಬಳು ಸ್ವಾರ್ಥಿ ಹುಡುಗನನ್ನು ಭೇಟಿ ಮಾಡಿದಾಗ ಏನೆಲ್ಲಾ ಆಗುತ್ತದೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆಯಂತೆ. ಸ್ನೇಹಾ ಸಿಂಗ್ ಕೂಡಾ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು.