ಹಾಸನ: ದಳಪತಿ ಎಚ್.ಡಿ. ಕುಮಾರಸ್ವಾಮಿ ಅವರು ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಎಚ್.ಪಿ. ಸ್ವರೂಪ್ ಅವರಿಗೆ ಜೆಡಿಎಸ್ ಟಿಕೆಟ್ ಘೋಷಿಸುವುದರೊಂದಿಗೆ ಎರಡು ತಿಂಗಳಿನಿಂದ ಇದ್ದ ಗೊಂದಲಕ್ಕೆ ತೆರೆ ಎಳೆದಿದ್ದಾರೆ. “ಸಾಮಾನ್ಯ ಕಾರ್ಯಕರ್ತ’ನಿಗೇ ಟಿಕೆಟ್ ನೀಡುವುದಾಗಿ ಹೇಳುತ್ತಲೇ ಬಂದಿದ್ದ ಕುಮಾರಸ್ವಾಮಿ ಅವರು ಸ್ವರೂಪ್‌ಗೆ ಟಿಕೆಟ್ ಘೋಷಣೆ ಮಾಡುವ ಮೂಲಕ ಕೊಟ್ಟ ಮಾತು ಉಳಿಸಿಕೊಂಡು ಮೊದಲ ಹಂತದಲ್ಲಿ ಯಶಸ್ಸು ಸಾಧಿಸಿದ್ದಾರೆ.
ಆದರೆ ಕುಮಾರಸ್ವಾಮಿ ಅವರಿಗೆ ಮುಂದೆ ದೊಡ್ಡ ಸವಾಲು ಇದೆ. ಎಚ್.ಡಿ. ರೇವಣ್ಣ ಹಾಗೂ ಅವರ ಕುಟುಂಬದವರನ್ನು ಎದುರು ಹಾಕಿಕೊಂಡು ಸ್ವರೂಪ್‌ಗೆ ಟಿಕೆಟ್ ನೀಡಲಾಗಿದೆ. ಈಗ ಇಡೀ ಕುಟುಂಬವನ್ನು ಸಮಾಧಾನಪಡಿಸಿ, ಮನವೊಲಿಸಿ ಚುನಾವಣೆಯಲ್ಲಿ ಸ್ವರೂಪ್ ಪರ ಕೆಲಸ ಮಾಡುವಂತೆ ನೋಡಿಕೊಂಡು, ಗೆಲ್ಲಿಸುವ ಹೊಣೆಯೂ ದಳಪತಿ ಮೇಲಿದೆ.
ರೇವಣ್ಣ ಕುಟುಂಬದ ಯಾರೇ ಸ್ಪರ್ಧೆ ಮಾಡಿದರೂ ಅವರ ವಿರುದ್ಧ 50 ಸಾವಿರ ಮತಗಳ ಅಂತರದಿಂದ ಗೆಲ್ಲುವೆ. ಒಂದು ಮತ ಕಡಿಮೆಯಾದರೂ ರಾಜೀನಾಮೆ ನೀಡಿ ಮತ್ತೆ ಚುನಾವಣೆ ಎದುರಿಸುವೆ ಎಂದು ಹಾಲಿ ಶಾಸಕ ಪ್ರೀತಂ ಗೌಡ ಸವಾಲು ಹಾಕಿದ್ದರು. ಈ ಪಂಥಾಹ್ವಾನ ಸ್ವೀಕರಿಸಿ ರೇವಣ್ಣ ಕುಟುಂಬದವರು ಭವಾನಿ ರೇವಣ್ಣ ಅವರನ್ನು ಕಣಕ್ಕಿಳಿಸಲು ಮುಂದಾಗಿದ್ದರು. ಆದರೆ ಕುಮಾರಸ್ವಾಮಿ ಅವರು ಪ್ರೀತಂಗೌಡ ಅವರನ್ನು ಸೋಲಿಸಲು ದೇವೇಗೌಡರ ಕುಟುಂಬದವರೇಕೆ ಬೇಕು? ಸಾಮಾನ್ಯ ಕಾರ್ಯಕರ್ತನನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಎದಿರೇಟು ನೀಡಿದ್ದರು. ಈ ಮೂಲಕ ಭವಾನಿ ಅವರ ಸ್ಪರ್ಧೆಗೆ ಅಡ್ಡಗಾಲು ಹಾಕಿ ಕುಟುಂಬ ರಾಜಕಾರಣದ ಆರೋಪದಿಂದ ಮುಕ್ತರಾಗುವ ಉಪಾಯವನ್ನು ಎಚ್.ಡಿ. ಕುಮಾರಸ್ವಾಮಿ ಹೂಡಿದ್ದರು. ಅದರಲ್ಲಿ ಈಗ ಯಶಸ್ವಿಯೂ ಆಗಿದ್ದಾರೆ.
ಶಾಸಕಿಯಾಗಬೇಕೆಂಬುದು ಭವಾನಿ ರೇವಣ್ಣ ಅವರ ಬಹುಕಾಲದ ಬಯಕೆ. ಈ ಬಾರಿ ಹಾಸನ ಕ್ಷೇತ್ರದಲ್ಲಿ ಸ್ಪರ್ಧಿಸಲೇ ಬೇಕು ಎಂದು ಹಟಕ್ಕೆ ಬಿದ್ದವರಂತೆ ಭವಾನಿ ರೇವಣ್ಣ ಹೋರಾಟ ನಡೆಸಿದರು. ಅವರ ಪತಿ ಮತ್ತು ಪುತ್ರರೂ ಟಿಕೆಟ್ ಕೊಡಲೇಬೇಕು ಎಂದು ಪಟ್ಟು ಹಿಡಿದು ಹೋರಾಟ ಮಾಡಿದರೂ ಎಚ್.ಡಿ. ಕುಮಾರಸ್ವಾಮಿ ಅವರ ಬಿಗಿಪಟ್ಟು ಬಿಡಿಸಿ ಟಿಕೆಟ್ ಕೊಡಿಸಲಾಗಲಿಲ್ಲ.
ಭವಾನಿ ರೇವಣ್ಣ ಅವರಿಗೆ ಟಿಕೆಟ್ ಸಿಗದ ಕೋಪ, ಸ್ವರೂಪ್ ಅವರು ಎಚ್.ಡಿ. ಕುಮಾರಸ್ವಾಮಿ ಅವರೊಂದಿಗಿರಿಸಿಕೊಂಡಿದ್ದ ನೇರ ಸಂಪರ್ಕ, ಕೊನೆಗೂ ಟಿಕೆಟ್ ಗಿಟ್ಟಿಸಿಕೊಂಡ ಸ್ವರೂಪ್ ಅವರ ಮೇಲೆ ರೇವಣ್ಣ ಮತ್ತು ಅವರ ಕುಟುಂಬಕ್ಕೆ ಸಹಜವಾಗಿ ಸಿಟ್ಟು ಇದ್ದೇ ಇದೆ. ಆದರೆ ತಮ್ಮ ಕುಟುಂಬಕ್ಕೆ ಸವಾಲು ಹಾಕಿ, ಹಗುರವಾಗಿ ಮಾತನಾಡಿದ್ದ ಎದುರಾಳಿಯನ್ನು ಮಣಿಸುವ ಅವಕಾಶವನ್ನು ರೇವಣ್ಣ ಮತ್ತು ಕುಟುಂಬದವರು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದು ಹಾಗೂ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರೇವಣ್ಣ ಮತ್ತು ಅವರ ಕುಟುಂಬದವರ ಮನವೊಲಿಸುವ ಸವಾಲು ಸ್ವರೂಪ್ ಎದುರಿಗಿದೆ.
ಭವಾನಿ ರೇವಣ್ಣ ಅವರನ್ನು ಹಾಸನ ಕ್ಷೇತ್ರದಲ್ಲಿ ಸ್ಪರ್ಧೆಗಿಳಿಸಿದ್ದರೆ ಎಚ್.ಡಿ.ದೇವೇಗೌಡರ ಕುಟುಂಬ ರಾಜ್ಯದಲ್ಲಿ ಕುಟುಂಬ ರಾಜಕಾರಣದ ಅಪವಾದಕ್ಕೆ ಸಿಲುಕುತ್ತಿತ್ತು. ಜತೆಗೆ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಶಾಸಕ ಪ್ರಿತಂಗೌಡ ಹಾಸನ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಪ್ರಬಲ ಎದುರಾಳಿ. ಅವರೆದುರು ಭವಾನಿ ಸೋತಿದ್ದರೆ ಜೆಡಿಎಸ್ ಭದ್ರಕೋಟೆಯಲ್ಲಿ ಆ ಸೋಲು ದೇಶವ್ಯಾಪಿ ಚರ್ಚೆಗೆ ಅವಕಾಶವಾಗುತ್ತಿತ್ತು. ಆ ಎರಡು ಅಪವಾದದಿಂದಲೂ ಈಗ ರೇವಣ್ಣ ಕುಟುಂಬ ಪಾರಾಗಿದೆ ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ.