ಮಂಡ್ಯ: ಜಿಲ್ಲಾದ್ಯಂತ ಸುಮಂಗಲಿಯರು ಸ್ವರ್ಣಗೌರಿ ಹಬ್ಬವನ್ನು ಶುಕ್ರವಾರ ಶ್ರದ್ಧಾಭಕ್ತಿಯಿಂದ ಸರಳವಾಗಿ ಆಚರಿಸಿದರು. ಬೆಳಗ್ಗೆಯೇ ತಮ್ಮ ಮನೆಗಳಲ್ಲಿಯೇ ಗೌರಿ ದೇವಿ ಪ್ರತಿಷ್ಠಾಪಿಸಿ, ವಿಶೇಷ ಅಲಂಕಾರ ಮಾಡಿ, ವಿವಿಧ ಹಣ್ಣು, ತಿಂಡಿ ತಿನಿಸುಗಳನ್ನಿಟ್ಟು ವಿಶೇಷ ಪೂಜೆ ಸಲ್ಲಿಸುವ ಮೂಲಕ ಅಕ್ಕಪಕ್ಕದ ಮುತ್ತೈದೆಯರು, ನವ ವಧು-ವರರಿಗೆ ಬಾಗಿನ ಅರ್ಪಿಸಿದರು.
ನಂತರ ಅರಿಶಿಣ, ಕುಂಕುಮ, ಬಳೆ, ಫಲ ಕೊಟ್ಟು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ವಿವಿಧ ದೇವಾಲಯಗಳಲ್ಲಿ ಗೌರಿ ಹಬ್ಬದ ಅಂಗವಾಗಿ ಸ್ವರ್ಣಗೌರಿ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಸುಮಂಗಲಿಯರು ದೇವಾಲಯಗಳಿಗೆ ಆಗಮಿಸಿ ದೇವಿಗೆ ಪ್ರಥಮ ಪೂಜೆ ಸಲ್ಲಿಸಿದರು. ನಂತರ ಗೌರಿ ಪ್ರತಿಷ್ಠಾಪನೆ ಮಾಡಿರುವ ಜಾಗಕ್ಕೆ ತೆರಳಿ ಸ್ವರ್ಣಗೌರಿಗೆ ಹೂವು, ಹಣ್ಣು, ಕಾಯಿ ಸಮರ್ಪಿಸಿ ಭಕ್ತಿಯಿಂದ ಪೂಜೆ ಸಲ್ಲಿಸಿದರು.ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳು, ಮದುವೆಯಾಗಿ 5 ವರ್ಷ ಆಗಿರದ ಮುತ್ತೈದೆಯರು ಸೇರಿ ಪೂಜೆ ಮಾಡಿ ಮುತ್ತೈದೆಯರಿಗೆಉಡುಗೊರೆ, ಅರಿಶಿಣ-ಕುಂಕುಮ ನೀಡಿ ಆಶೀರ್ವಾದ ಪಡೆದು ಸ್ವರ್ಣಗೌರಿ ವ್ರತಾಚರಣೆ ಮಾಡಿದರು. ಕೆಲವರು ನಾಗರಕಟ್ಟೆ ಬಳಿ ಧಾವಿಸಿ ನಾಗರಕಲ್ಲಿಗೆ ವಿಶೇಷ ಪೂಜೆ ಸಲ್ಲಿಸಿದರು. ನಾಗರಕಲ್ಲಿಗೆ ಹಾಲು, ಬೆಣ್ಣೆ, ತುಪ್ಪ ಅಭಿಷೇಕ ಮಾಡಿ ತನಿ ಎರೆದರೆ, ಮತ್ತೆ ಕೆಲವರು ಮನೆಯಲ್ಲಿ ಎಡೆ ಹಾಕಿ ಪೂಜೆ ಸಲ್ಲಿಸಿದ್ದು ಕಂಡುಬಂತು.
ಪರಿಸರ ಸ್ನೇಹಿ ಗಣಪನನ್ನು ಪೂಜಿಸಿ : ಕೋವಿಡ್ ತಡೆಗಟ್ಟಲು ಮನೆಯಲ್ಲೇ ಅರಿಶಿಣದಿಂದ ಮಾಡಿದ ಗಣಪ ಅಥವಾ ಮಣ್ಣಿನಿಂದ ಮಾಡಿದ ಗಣಪನನ್ನು ಪ್ರತಿಷ್ಠಾಪಿಸಿ ಪೂಜಿಸಿ ವಿಸರ್ಜನೆ ಮಾಡೋಣ ಎಂದು ಶಾಸಕ ಡಿ.ಸಿ.ತಮ್ಮಣ್ಣ ಹೇಳಿದರು. ಗಣೇಶ ಉತ್ಸವವನ್ನು ಹಿಂದೂಗಲು ಬಹಳ ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದರು. ಗಣೇಶ ಎಂದರೆ ವಿಘ್ನನಿವಾರಕ. ಹೀಗಾಗಿ ಪ್ರತಿಯೊಬ್ಬರೂ ಭಕ್ತಿಯಿಂದ ಪ್ರತಿವರ್ಷ ಆಚರಣೆ ಮಾಡುತ್ತಿದ್ದಾರೆ. ಇನ್ನೂ ಕೆಲವರು ವಾರಗಟ್ಟಲೇ ಸಮಾರಂಭ ಏರ್ಪಡಿಸಿ ಪೂಜಿಸಿ ವಿಸರ್ಜನೆ ಮಾಡುತ್ತಿದ್ದರು. ಪ್ರಸ್ತುತ ದಿನದಲ್ಲಿಮನೆಯಲ್ಲೇ ಗಣಪತಿ ಪ್ರತಿಸಾuಪಿಸಿ ಪೂಜೆ ಸಲ್ಲಿಸಬೇಕಾಗಿದೆ. ಜೀವವಿದ್ದರೆ ಜೀವನ. ಆದ್ದರಿಂದ ಸಾರ್ವಜನಿಕರು ಒಂದೆಡೆ ಸೇರದೆ ಕೋವಿಡ್ ತಡೆಗೆ ಮನೆಯಲ್ಲೇ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಿ ವಿಸರ್ಜನೆ ಮಾಡಬೇಕು ಎಂದು ತಿಳಿಸಿದ್ದಾರೆ. ಸಾರ್ವಜನಿಕರ ಸ್ಥಳದಲ್ಲಿ ಪ್ರತಿಷ್ಠಾಪಿಸಿ ಗುಂಪಾಗಿ ನಿಲ್ಲದೆ ಸರ್ಕಾರ ನೀಡಿರುವ ನಿರ್ದೇಶನವನ್ನು ನಾವೆಲ್ಲರೂ ಪಾಲಿಸೋಣ ಎಂದು ಮನವಿ ಮಾಡಿದರು.
ಗೌರಿ ಹಬ್ಬದ ಸಂಭ್ರಮ : ತಾಲೂಕಿನ ಬಾಬುರಾಯನಕೊಪ್ಪಲು ಗ್ರಾಮದ ರಾಮಮಂದಿರದಲ್ಲಿ ಉಗಮ ಚೇತನ ಟ್ರಸ್ಟ್‌ವತಿಯಿಂದ ಗೌರಿ- ಗಣೇಶ ಹಬ್ಬದ ಪ್ರಯುಕ್ತ ಸುಮಾರು 30 ಜನ ಮುತ್ತೈದೆಯರಿಗೆ ಬಾಗಿನ ನೀಡಲಾಯಿತು. ಟ್ರಸ್ಟ್‌ನ ಅಧ್ಯಕ್ಷೆ ಪ್ರಿಯಾ ರಮೇಶ್ ಮಾತನಾಡಿ, ಗೌರಿ ಗಣೇಶನ ಹಬ್ಬ ಮಹಿಳೆಯರಿಗೆ ಪ್ರಿಯವಾದ ಹಬ್ಬ.ಯಾವುದೇ ಜಾತಿ ಧರ್ಮ ಎನ್ನದೆ ಪ್ರೀತಿ ವಾತ್ಸಲ್ಯ ತೋರಿ ಮಹಿಳೆಯರು ಸಂಭ್ರಮಿಸಲಿದ್ದು ಸುಮಾರು 30ಕ್ಕೂ ಹೆಚ್ಚು ಮಹಿಳೆಯರಿಗೆ ಬಾಗಿನ ನೀಡಲಾಗಿದೆ ಎಂದರು. ಗ್ರಾಮದ ವಿನಾಯಕ ಕಂಪ್ಯೂಟರ್ ಸೆಂಟರ್ ಮಾಲಿಕರಾದ ಪದ್ಮ ಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಿದರು. ನವಕರ್ನಾಟಕ ಗ್ರಾಹಕರ ವೇದಿಕೆ ತಾಲೂಕು ಅಧ್ಯಕ್ಷ ಸ್ವಾಮಿಗೌಡ, ಸಮಾಜ ಸೇವಕ ಚಿದಂಬರ, ಹೋರಾಟಗಾರ್ತಿ ಕಲಾವತಿ, ಯಜಮಾನ್ ಶ್ರೀನಿವಾಸ್ ಇದ್ದರು.